ADVERTISEMENT

ಕಾಂಗ್ರೆಸ್ ಮುಖಂಡರಿಂದ ಫೋನ್‌ನಲ್ಲಿ ರಾಜ್ಯದ ಸ್ಥಿತಿಗತಿಗಳ ಮಾಹಿತಿ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:54 IST
Last Updated 20 ಸೆಪ್ಟೆಂಬರ್ 2019, 19:54 IST
   

ಬೆಂಗಳೂರು: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಮಾಡಿದ್ದ ಶಾಸಕ ಜಿ.ಪರಮೇಶ್ವರ ಅವರುರಾಜ್ಯ ರಾಜಕಾರಣದ ಬಗ್ಗೆ ವಿವರ ನೀಡಿದ ಬೆನ್ನಲ್ಲೇ ಎಐಸಿಸಿ ಮುಖಂಡರು ರಾಜ್ಯ ನಾಯಕರಿಂದ ಮಾಹಿತಿ ಸಂಗ್ರಹಿಸಲು ಆರಂಭಿಸಿದ್ದಾರೆ.

ರಾಜ್ಯದ ಪ್ರಮುಖ ಕಾಂಗ್ರೆಸ್ ನಾಯಕರಿಗೆ ದೂರವಾಣಿ ಕರೆ ಮಾಡಿ ಪಕ್ಷದ ಪ್ರಸ್ತುತ ಸ್ಥಿತಿಗತಿಗಳು ಹಾಗೂ ಕೆಲ ನಾಯಕರ ಬಗ್ಗೆ ಗುಪ್ತವಾಗಿ ಮಾಹಿತಿ ಸಂಗ್ರಹಿಸುವ ಕೆಲಸ ಆರಂಭಿಸಿದ್ದಾರೆ. ಗುರುವಾರ ರಾತ್ರಿ ಕೆಲ ಪ್ರಮುಖರಿಗೆ ಕರೆ ಮಾಡಿದ ಮುಖಂಡರಾದ ಕೆ.ಸಿ.ವೇಣುಗೋಪಾಲ್, ಅಹಮದ್ ಪಟೇಲ್ ಅವರು ಮಾಹಿತಿ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ, ಲೋಕಸಭೆ ಚುನಾವಣೆ ಸೋಲಿನ ನಂತರ ಆಗಿರುವ ಬೆಳವಣಿಗೆ, ಮೈತ್ರಿ ಸರ್ಕಾರದ ಪತನದಿಂದ ಉಂಟಾಗಿರುವ ಪರಿಣಾಮಗಳು, ಜೆಡಿಎಸ್ ಜತೆಗೆ ಮೈತ್ರಿ ಮುಂದುವರಿಸಬೇಕೆ? ಅನರ್ಹರ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾದರೆ ಗೆಲುವಿಗೆ ಏನೆಲ್ಲ ತಂತ್ರ ರೂಪಿಸಬೇಕು, ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುವ ಕುರಿತು ವರಿಷ್ಠರು ಮಾಹಿತಿ ಕಲೆ ಹಾಕಿದ್ದಾರೆ.

ADVERTISEMENT

ಜೆಡಿಎಸ್ ಜತೆಗೆ ಮೈತ್ರಿ ಮುಂದುವರಿಸದಂತೆ ಸಾಕಷ್ಟು ಮುಖಂಡರು ಸಲಹೆ ನೀಡಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ಪಕ್ಷ ಬಿಟ್ಟು ಹೋಗಿದ್ದರಿಂದ ಮೈತ್ರಿ ಸರ್ಕಾರ ಪತನವಾಯಿತು. ಇದರಿಂದ ಪಕ್ಷದ ಮೇಲೆ ಯಾವ ರೀತಿಯ ಪರಿಣಾಮಗಳು ಉಂಟಾಗಿವೆ ಎಂಬ ವಿವರಗಳನ್ನು ಕೊಟ್ಟಿದ್ದಾರೆ ಎನ್ನಲಾಗಿದೆ.

‘ಸೋನಿಯಾ ಗಾಂಧಿ ಅವರು ಎಐಸಿಸಿ ಅಧ್ಯಕ್ಷೆಯಾದ ನಂತರ ಪಕ್ಷ ಸಂಘಟನೆ ಕೆಲಸವನ್ನು ಚುರುಕುಗೊಳಿಸಿದ್ದಾರೆ. ಮುಂದಿನ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಆರಂಭಿಸಿದ್ದು, ಅದರ ಭಾಗವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ರಾಜ್ಯವಷ್ಟೇ ಅಲ್ಲದೆ ಇತರೆ ರಾಜ್ಯಗಳಿಂದಲೂ ಇದೇ ಮಾದರಿಯಲ್ಲಿ ವಿವರ ಪಡೆದುಕೊಳ್ಳಲಾಗುತ್ತಿದೆ’ ಎಂದು ಮುಖಂಡರೊಬ್ಬರು ತಿಳಿಸಿದರು.

ವಕ್ತಾರರ ನೇಮಕ: ಕೆಪಿಸಿಸಿ ವಕ್ತಾರರನ್ನಾಗಿ 34 ಮಂದಿಯನ್ನು ನೇಮಕ ಮಾಡಿರುವುದಕ್ಕೆ ಪಕ್ಷದ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಪಟ್ಟಿ ಪರಿಷ್ಕರಿಸಲಾಗಿದೆ.

‘ಮಾಧ್ಯಮಗಳ ಜತೆ ಸಂವಾದ ನಡೆಸುವ 39 ಮುಖಂಡರ ಹೆಸರುಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ’ ಎಂದು ಕೆಪಿಸಿಸಿ ಮಾಧ್ಯಮ ಹಾಗೂ ಸಂವಹನ ವಿಭಾಗದ ಅಧ್ಯಕ್ಷ ವಿ.ಎಸ್.ಉಗ್ರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.