ಬೆಂಗಳೂರು: ರಾಜ್ಯ ಕಾಂಗ್ರೆಸ್–ಜೆಡಿಎಸ್ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ಅವರು ಭಾನುವಾರ ಮಾಜಿ ಮುಖ್ಯಮಂತ್ರಿ ಎಸ್.ಎಂ ಕೃಷ್ಣ ನಿವಾಸದಲ್ಲಿ ಮಾಜಿ ಡಿಸಿಎಂ ಅಶೋಕ್ ಅವನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್–ಜೆಡಿಎಸ್ ಮೈತ್ರಿಕೂಟ ಸೋಲು ಅನುಭವಿಸಿರುವ ಹೊತ್ತಿನಲ್ಲಿ, ಸರ್ಕಾರ ಅಸ್ಥಿರದ ಮಾತುಗಳು ಕೇಳಿ ಬರುತ್ತಿರುವ ಸಂದರ್ಭದಲ್ಲೇ ಈ ಇಬ್ಬರೂ ಶಾಸಕರು ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಿರುವುದರ ಹಿಂದೆ ರಾಜಕೀಯ ಕಾರಣಗಳಿವೆ ಎಂದು ಹೇಳಲಾಗುತ್ತಿದೆ. ಆದರೆ, ಈ ವಾದವನ್ನು ರಮೇಶ್ ಮತ್ತು ಸುಧಾಕರ್ ನಿರಾಕರಿಸಿದ್ದಾರೆ.
ಈ ಕುರಿತು ಮಾತನಾಡಿರುವ ರಮೇಶ್ ಜಾರಕಿಹೊಳಿ, ‘ಇದು ರಾಜಕೀಯ ಭೇಟಿಯಲ್ಲ. ಬಿಜೆಪಿ ಕರ್ನಾಟಕದಲ್ಲಿ 25 ಸ್ಥಾನಗಳನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸಲು ನಾನು ಬಂದಿದ್ದೆ. ಇದೊಂದು ಸೌಹಾರ್ದಯುತ ಭೇಟಿ,’ ಎಂದಷ್ಟೇ ಹೇಳಿದರು.
ನಂತರ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್, ‘ಪಕ್ಷದ ವಿಚಾರವಾಗಿ ಚರ್ಚೆ ನಡೆಸಲು ಕೃಷ್ಣ ಅವರನ್ನು ಭೇಟಿಯಾದೆ. ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಸುಧಾಕರ್ ನಡುವೆ ನನಗೆ ಯಾವುದೇ ರೀತಿಯ ಸಂಪರ್ಕವಿಲ್ಲ,’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.