ADVERTISEMENT

ಕಾಂಗ್ರೆಸ್‌ ನಾಯಕರು ಕರ್ನಾಟಕ ಸರ್ಕಾರಕ್ಕೆ ಪ್ರಶ್ನೆ ಕೇಳಲಿ: ನಿರ್ಮಲಾ ಸೀತಾರಾಮನ್‌

ದಲಿತರ ಅನುದಾನ ದುರ್ಬಳಕೆ: ನಿರ್ಮಲಾ ಸೀತಾರಾಮನ್‌ ತಿರುಗೇಟು

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 15:49 IST
Last Updated 30 ಜುಲೈ 2024, 15:49 IST
ನಿರ್ಮಲಾ ಸೀತಾರಾಮನ್‌ 
ನಿರ್ಮಲಾ ಸೀತಾರಾಮನ್‌    

ನವದೆಹಲಿ: ‘ಕೇಂದ್ರ ಸರ್ಕಾರವು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅನುದಾನ ಕಡಿತ ಮಾಡಿದೆ ಎಂದು ಆರೋಪಿಸುವ ಕಾಂಗ್ರೆಸ್‌ನ ನಾಯಕರು ಕರ್ನಾಟಕದಲ್ಲಿರುವ ತಮ್ಮದೇ ಸರ್ಕಾರದ ಹಗರಣಗಳ ಬಗ್ಗೆ ಮೊದಲು ಪ್ರಶ್ನೆ ಮಾಡಬೇಕು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿರುಗೇಟು ನೀಡಿದರು. 

ಲೋಕಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಅವರು, ‘ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಈ ಸಲ ಅನುದಾನ ಕಡಿಮೆಯಾಗಿದೆ ಎಂದು ವಿಪಕ್ಷ ನಾಯಕರು ಆರೋಪಿಸಿದ್ದಾರೆ. ಕಾಂಗ್ರೆಸ್‌ ಸಂಸದ ಚರಣ್‌ಜಿತ್‌ ಸಿಂಗ್ ಚನ್ನಿ ಸಹ ಇದೇ ಧಾಟಿಯಲ್ಲಿ ಮಾತನಾಡಿದ್ದಾರೆ. ಕರ್ನಾಟಕದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಅವರು ಮೊದಲು ಅಲ್ಲಿನ ನಾಯಕರನ್ನು ಪ್ರಶ್ನಿಸಬೇಕು. ಅದು ಬಿಟ್ಟು ಇಲ್ಲಿ ಆರೋಪ ಮಾಡುವುದು ಸರಿಯಲ್ಲ’ ಎಂದರು. 

‘ಈ ಸಲದ ಕೇಂದ್ರ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅನುದಾನವನ್ನು ಗಣನೀಯವಾಗಿ ಹೆಚ್ಚಿಸಲಾಗಿದೆ. ಈಗ ಈ ಸಮುದಾಯಗಳ ಅನುದಾನ ಕಡಿಮೆಯಾಗಿದೆ ಎಂದು ಗುಲ್ಲೆಬ್ಬಿಸುತ್ತಿರುವ ಕಾಂಗ್ರೆಸ್‌ ನಾಯಕರಿಗೆ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ’ ಎಂದರು. ‘ಕರ್ನಾಟಕದಲ್ಲಿ ಈ ಸಲದ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಕ್ಕೆ ₹9,980 ಕೋಟಿ ಅನುದಾನ ಮೀಸಲಿಡಲಾಗಿದೆ. ಅದರಲ್ಲಿ ₹4,301 ಕೋಟಿಯನ್ನು ಅನ್ಯ ಉದ್ದೇಶಕ್ಕೆ ಬಳಸಲಾಗಿದೆ. ಪರಿಶಿಷ್ಟರ ಉಪ ಯೋಜನೆಯ ಈ ಹಣ ಎಲ್ಲಿಗೆ ಹೋಗಿದೆ ಎಂಬುದನ್ನು ದೇವರೇ ಬಲ್ಲ’ ಎಂದು ವ್ಯಂಗ್ಯವಾಗಿ ಹೇಳಿದರು. ಆಗ ಬಿಜೆಪಿ ಸದಸ್ಯರು, ‘ಇದು ಕಾಂಗ್ರೆಸ್‌ನ ಭ್ರಷ್ಟಾಚಾರ. ಶೇಮ್‌ ಶೇಮ್’ ಎಂದು ಘೋಷಣೆ ಕೂಗಿದರು. 

ADVERTISEMENT

ಕರ್ನಾಟಕದಲ್ಲಿ ಇನ್ನೊಂದು ಬಹುದೊಡ್ಡ ಹಗರಣ ನಡೆದಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಪರಿಶಿಷ್ಟರ ಕಲ್ಯಾಣ ಅಭಿವೃದ್ಧಿಗೆ ಮೀಸಲಿಟ್ಟ ಹಣ ಖಾಸಗಿ ಖಾತೆಗೆ ವರ್ಗಾವಣೆಯಾಗಿದೆ. ಸಾಮಾನ್ಯವಾಗಿ ಆಡಳಿತ ನಡೆಸುವವರು ಹಗರಣ ನಡೆದೇ ಇಲ್ಲ ಎಂದು ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಕರ್ನಾಟಕದ ಮುಖ್ಯಮಂತ್ರಿ ಅದು ₹187 ಕೋಟಿ ಹಗರಣ ಅಲ್ಲ, ಕೇವಲ ₹89 ಕೋಟಿ ಎಂದು ಸಮರ್ಥಿಸಿಕೊಂಡಿದ್ದಾರೆ. ಅವರ ಅಮಿತ ವಿಶ್ವಾಸ ನೋಡಿ. ಹಗರಣ ನಡೆಸಿಯೂ ಅವರು ವಾದ ಮಾಡುತ್ತಾರೆ. ಜತೆಗೆ, ಇಲ್ಲಿಗೆ ಬಂದು ಭಾಷಣ ಬಿಗಿಯುತ್ತಾರೆ’ ಎಂದು ಅವರು ಲೇವಡಿ ಮಾಡಿದರು. ಈ ಮಾತಿಗೆ ಬಿಜೆಪಿ ಸದಸ್ಯರು ಮೇಜು ಗುದ್ದಿ ಬೆಂಬಲ ವ್ಯಕ್ತಪಡಿಸಿದರು. ಕಾಂಗ್ರೆಸ್‌ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ‘ಕಳೆದ ಬಿಜೆಪಿ ಸರ್ಕಾರದಲ್ಲಿ ಎಷ್ಟೊಂದು ಹಗರಣಗಳು ನಡೆದಿವೆ. ಅದರ ಬಗ್ಗೆಯೂ ಪ್ರಸ್ತಾಪಿಸಿ’ ಎಂದು ಕಾಂಗ್ರೆಸ್‌ ಸಂಸದರೊಬ್ಬರು ಕಾಲೆಳೆದರು. ಅದಕ್ಕೆ ನಿರ್ಮಲಾ ಪ್ರತಿಕ್ರಿಯಿಸಲಿಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.