ಬಳ್ಳಾರಿ:ಉಪಚುನಾವಣೆಯ ಫಲಿತಾಂಶದ ಮೂಲಕ, ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಜ್ಞಾತವಾಸವು ಮುಗಿದಿದೆ. ಇದುವರೆಗಗಿನ 17 ಚುನಾವಣೆಗಳ ಪೈಕಿ 14ರಲ್ಲಿ ಸತತವಾಗಿ ಗೆದ್ದಿದ್ದ ಕಾಂಗ್ರೆಸ್ 14 ವರ್ಷದಿಂದ ಅಜ್ಞಾತವಾಸದಲ್ಲಿತ್ತು. ಉಪಚುನಾವಣೆಯು ಅದನ್ನು ಕೊನೆಗೊಳಿಸಿ, ಬಿಜೆಪಿಗೆ ಆ ಅನಿವಾರ್ಯ ಸನ್ನಿವೇಶವನ್ನು ತಂದೊಡ್ಡಿದೆ.
2004, 2009 ಮತ್ತು 2014ರ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲು ಆಗಿರಲಿಲ್ಲ. ಅತ್ಯಧಿಕ ಮತಗಳ ಅಂತರದಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್ ಕಡಿಮೆ ಮತಗಳ ಅಂತರದಲ್ಲೇ ಸೋತಿತ್ತು. ಈ ಅವಧಿಯಲ್ಲಿ ತಳವೂರಿದ್ದ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳಲು ವಿಫಲವಾಯಿತು.
ಕ್ಷೇತ್ರದಲ್ಲಿ ಮೊದಲ ಬಾರಿಗೆ 2000ದಲ್ಲಿ ಉಪ ಚುನಾವಣೆ ಎದುರಾಗಿತ್ತು. 1999ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಬಳ್ಳಾರಿ ಮತ್ತು ಉತ್ತರ ಪ್ರದೇಶದ ಅಮೇಥಿಯಿಂದ ಸ್ಪರ್ಧಿಸಿ ಎರಡೂ ಕಡೆ ಗೆದ್ದಿದ್ದರು. ಅವರ ವಿರುದ್ಧ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರಿಂದ ಈ ಕ್ಷೇತ್ರ ಇಡೀ ದೇಶದ ಗಮನ ಸೆಳೆದಿತ್ತು. ನಂತರ ಸೋನಿಯಾ ಬಳ್ಳಾರಿ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಎದುರಾಗಿತ್ತು. ಆಗ ಕಾಂಗ್ರೆಸ್‌ನ ಕೋಳೂರು ಬಸವನಗೌಡ ಗೆದ್ದಿದ್ದರು.
2004ರಲ್ಲಿ ಸಂಸದರಾಗಿದ್ದ ಜಿ.ಕರುಣಾಕ ರೆಡ್ಡಿ ಕೂಡ ಅವಧಿಗೆ ಮುಂಚೆಯೇ ರಾಜೀನಾಮೆ ಸಲ್ಲಿಸಿ 2008ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಹರಪನಹಳ್ಳಿ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಆಗ ಉಪಚುನಾವಣೆ ನಡೆದಿರಲಿಲ್ಲ.
ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿಯೇ ಶ್ರೀರಾಮುಲು ಸಂಸದರ ಸ್ಥಾನಕ್ಕೆ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದರಿಂದ ಕ್ಷೇತ್ರದಲ್ಲಿ ಎರಡನೇ ಉಪಚುನಾವಣೆ ನಡೆಯಿತು.
ಮೊದಲ ಸುತ್ತಿನಿಂದಲೂ ಮುಂದಿದ್ದ ಉಗ್ರಪ್ಪ
ಮತ ಎಣಿಕೆಯ ಮೊದಲ ಸುತ್ತಿನಿಂದಲೂ ವಿ.ಎಸ್.ಉಗ್ರಪ್ಪ ಶಾಂತಾ ಅವರನ್ನು ಹಿಂದಿಕ್ಕಿದ್ದರು. ಪ್ರತಿ ಎಣಿಕೆಯಲ್ಲೂ ಇಬ್ಬರು ಗಳಿಸಿದ ಮತಗಳ ಅಂತರ ಹೆಚ್ಚುತ್ತಲೇ ಇತ್ತು. ಮೊದಲ ಸುತ್ತಿನಲ್ಲಿ 17.480 ಮತಗಳ ಅಂತರವನ್ನು ಕಾಯ್ದುಕೊಂಡಿದ್ದ ಉಗ್ರಪ್ಪ, ಐದನೇ ಸುತ್ತಿನ ಕೊನೆಯ ಹೊತ್ತಿಗೆ 1,00,723 ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದ್ದರು. ಅದು ಆರಂಕಿ ಮತಗಳ ದೊಡ್ಡ ಅಂತರವಾಗಿತ್ತು. ಮತ ಎಣಿಕೆಯ ಎಲ್ಲ ಸುತ್ತುಗಳೂ ಕಾಂಗ್ರೆಸ್‌ನ ವಿಶ್ವಾಸಕ್ಕೆ ಪ್ರತೀಕವಾಗಿದ್ದವು.
ನಿರಂತರ ಹಿನ್ನಡೆ ಕಂಡ ಶಾಂತಾ
ಮೊದಲ ಸುತ್ತಿನಿಂದಲೂ ಜೆ.ಶಾಂತಾ ಹಿನ್ನಡೆ ಕಂಡಿದ್ದು ಬಿಜೆಪಿಯಲ್ಲಿ ನಿರಾಶೆ ಮೂಡಿಸಿತ್ತು. ಕನಿಷ್ಠ ಐದನೇ ಸುತ್ತಿನಿಂದಲಾದರೂ ಅವರು ಮುನ್ನಡೆ ಸಾಧಿಸಬಹುದು ಎಂಬ ನಿರೀಕ್ಷೆಯೂ ವಿಫಲವಾಯಿತು. ಆದರೆ ಆ ಸುತ್ತಿನಲ್ಲಿ ಅವರು 1 ಲಕ್ಷಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದ್ದರು. ಆರನೇ ಸುತ್ತಿನಲ್ಲಿ ಉಗ್ರಪ್ಪ 2 ಲಕ್ಷಕ್ಕಿಂತ ಹೆಚ್ಚು ಮತ ಗಳಿಸಿ ತಮ್ಮ ಗೆಲುವಿನ ಸೂಚನೆಯನ್ನು ತೋರಿಸಿದ್ದರು.
ವೈದ್ಯ ಅಭ್ಯರ್ಥಿಯ ಹೀನಾಯ ಸೋಲು
ಬಿಜೆಪಿ ಟಿಕೆಟ್ ದೊರಕದೆ ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವೈದ್ಯ ಡಾ.ಟಿ.ಆರ್.ಶ್ರೀನಿವಾಸ್ ಹೀನಾಯ ಸೋಲು ಕಂಡರು. ಅವರು 10 ಸಾವಿರಕ್ಕಿಂತ ಹೆಚ್ಚು ಮತಗಳನ್ನಷ್ಟೇ ಗಳಿಸಿದರು.
ಶ್ರೀರಾಮುಲು ಕುಟುಂಬ ರಾಜಕಾರಣದ ವಿರುದ್ಧ ದನಿ ಎತ್ತಿದ್ದರೂ, ಅದನ್ನು ಪ್ರಚಾರದ ಸಂದರ್ಭದಲ್ಲಿ ಗಟ್ಟಿಗೊಳಿಸದ ಕಾರಣಕ್ಕೆ ಅವರು ಬಿಜೆಪಿಯ ಮತಗಳನ್ನು ಸೆಳೆಯುವಲ್ಲಿಯೂ ವಿಫಲರಾದರು. ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಅವರ ಸ್ಪರ್ಧೆ ಇತ್ತು. ಪಂಪಾಪತಿ ನಾಲ್ಕಂಕಿ ಮತಗಕ್ಕಷ್ಟೇ ಸೀಮಿತವಾದರು.
ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಫಲಿತಾಂಶದ ಹಿನ್ನೋಟ
ವರ್ಷ: ಗೆದ್ದ ಅಭ್ಯರ್ಥಿ ಪಕ್ಷ ಸಮೀಪ ಸ್ಪರ್ಧಿ ಪಕ್ಷ
1952 ಟಿ.ಸುಬ್ರಹ್ಮಣ್ಯಂ ಕಾಂಗ್ರೆಸ್ ವೈ.ಮಹಾಬಳೇಶ್ವರಪ್ಪ ಪಕ್ಷೇತರ
1957 ಟಿ.ಸುಬ್ರಹ್ಮಣ್ಯಂ ಕಾಂಗ್ರೆಸ್ ವೈ.ಮಹಾಬಳೇಶ್ವರಪ್ಪ ಪಕ್ಷೇತರ
1962 ಟಿ.ಸುಬ್ರಹ್ಮಣ್ಯಂ ಕಾಂಗ್ರೆಸ್ ಜೆ.ಮಹ್ಮದ್ ಇಮಾಮ್ ಎಸ್‌ಡಬ್ಲ್ಯುಎ
1967 ವಿ.ಕೆ.ಆರ್.ವಿ.ರಾವ್ ಕಾಂಗ್ರೆಸ್ ವೈ,ಮಹಾಬಳೇಶ್ವಪ್ಪ ಎಸ್‌ಬ್ಲ್ಯುಎ
1971 ವಿ.ಕೆ.ಆರ್.ವಿ.ರಾವ್: ಎನ್‌ಸಿಜೆ: ವೈ.ಮಹಾಬಳೇಶ್ವರಪ್ಪ ಎಸ್‌ಡಬ್ಲ್ಯುಎ
1977 ಕೆ.ಎಸ್.ವೀರಭದ್ರಪ್ಪಕಾಂಗ್ರೆಸ್: ಎನ್.ತಿಪ್ಪಣ್ಣ: ಬಿಎಲ್‌ಡಿ
1980: ಆರ್.ವೈ.ಘೋರ್ಪಡೆ ಕಾಂಗ್ರೆಸ್‌ಐ ಎಂ.ವೈ.ಘೋರ್ಪಡೆ: ಕಾಂಗ್ರೆಸ್‌ಯು
1984: ಬಸವರಾಜೇಶ್ವರಿ ಕಾಂಗ್ರೆಸ್: ಎಂ.ಪಿ.ಪ್ರಕಾಶ್: ಜೆಎಲ್‌ಪಿ
1989: ಬಸವರಾಜೇಶ್ವರಿ: ಕಾಂಗ್ರೆಸ್: ಎನ್.ತಿಪ್ಪಣ್ಣ: ಜನತಾದಳ
1991: ಬಸವರಾಜೇಶ್ವರಿ: ಕಾಂಗ್ರೆಸ್: ವೈ.ನೆಟ್ಟಕಲ್ಲಪ್ಪ: ಜನತಾದಳ
1996: ಕೆ.ಸಿ.ಕೊಂಡಯ್ಯ: ಕಾಂಗ್ರೆಸ್: ಎನ್.ತಿಪ್ಪಣ್ಣ: ಜನತಾದಳ
1998: ಕೆ.ಸಿ.ಕೊಂಡಯ್ಯ: ಕಾಂಗ್ರೆಸ್: ಎನ್.ತಿಪ್ಪಣ್ಣ: ಲೋಕಶಕ್ತಿ
1999: ಸೋನಿಯಾಗಾಂಧಿ: ಕಾಂಗ್ರೆಸ್: ಸುಷ್ಮಾ ಸ್ವರಾಜ್: ಬಿಜೆಪಿ
2000: ಕೆ.ಬಸವನಗೌಡ: ಕಾಂಗ್ರೆಸ್:ಕೆ .ಎಸ್.ವೀರಭದ್ರಪ್ಪ: ಬಿಜೆಪಿ (ಉಪಚುನಾವಣೆ)
2004: ಜಿ.ಕರುಣಾಕರರೆಡ್ಡಿ: ಬಿಜೆಪಿ: ಕೆ.ಸಿ.ಕೊಂಡಯ್ಯ: ಕಾಂಗ್ರೆಸ್
2009: ಜೆ.ಶಾಂತಾ: ಬಿಜೆಪಿ: ಎನ್.ವೈ.ಹನುಮಂತಪ್ಪ: ಕಾಂಗ್ರೆಸ್
2014: ಬಿ.ಶ್ರೀರಾಮುಲು: ಬಿಜೆಪಿ: ಎನ್.ವೈ.ಹನುಮಂತಪ್ಪ: ಕಾಂಗ್ರೆಸ್
2019: ವಿ.ಎಸ್.ಉಗ್ರಪ್ಪ: ಕಾಂಗ್ರೆಸ್: ಜೆ.ಶಾಂತಾ: ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.