ಬೆಂಗಳೂರು: ‘ಸಿದ್ದರಾಮಯ್ಯ ಪೂರ್ಣಾವಧಿ ಮುಖ್ಯಮಂತ್ರಿಯಾಗಿರಲಿದ್ದಾರೆ’ ಎಂದು ಸಚಿವ
ಎಂ.ಬಿ. ಪಾಟೀಲ ನೀಡಿದ ಹೇಳಿಕೆ ಕಾಂಗ್ರೆಸ್‌ನಲ್ಲಿ ಅಂತರ್ಯುದ್ಧದ ಕಿಡಿ ಹೊತ್ತಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣಗಳ ಮಧ್ಯದ ತಿಕ್ಕಾಟಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.
ಪಾಟೀಲರ ಹೇಳಿಕೆಯನ್ನು ಗಂಭೀರ ವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಅಧಿಕಾರ ಹಂಚಿಕೆ ಸೂತ್ರದ ಬಗ್ಗೆ ಯಾರೂ ಚರ್ಚಿಸಬಾರದು ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಬಣದ ಸಚಿವರು, ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಮೈಸೂರಿನ ಸುತ್ತೂರಿನಲ್ಲಿ ಸೋಮವಾರ ರಾತ್ರಿ ಮಾತನಾಡಿದ್ದ ಎಂ.ಬಿ. ಪಾಟೀಲ, ‘ಮುಖ್ಯಮಂತ್ರಿ
ಯಾಗಿ ಸಿದ್ದರಾಮಯ್ಯ ಅವರೇ ಪೂರ್ಣಾ ವಧಿ ಇರಲಿದ್ದಾರೆ. ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದು ಹೇಳಿದ್ದರು.
ಈ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಮಂಗಳವಾರ ಬೆಳಿಗ್ಗೆ ಸ್ಪಷ್ಟನೆ ನೀಡಿರುವ ಪಾಟೀಲರು, ‘ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಹೇಳಿದ್ದನ್ನೇ ನಾನು ಪುನರುಚ್ಚರಿಸಿದ್ದೇನೆ’ ಎಂದರು.
ಆದರೆ, ಪಾಟೀಲರ ಹೇಳಿಕೆಯನ್ನು ರಾಜಕೀಯ ಪಡಸಾಲೆಯಲ್ಲಿ ನಾನಾ ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ಪಾಟೀಲರು ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಸಂಪುಟ ಸೇರಿದ ಎಂಟು ಸಚಿವರ ಜೊತೆ ಮೊದಲ ಪಟ್ಟಿಯಲ್ಲಿಯೇ ಅವರೂ ಪ್ರಮಾಣವಚನ ಸ್ವೀಕರಿಸಲು ಸಿದ್ದರಾಮಯ್ಯ ಬೆನ್ನಿಗೆ ನಿಂತಿರುವುದೂ ಕಾರಣ. ಇದೀಗ, ಸಿದ್ದರಾಮಯ್ಯ ಅವರು ಪಾಟೀಲರಿಂದ ಈ ರೀತಿ ಹೇಳಿಕೆ ಕೊಡಿಸುವ ಮೂಲಕ, ಅಧಿಕಾರ ಹಂಚಿಕೆ ಸೂತ್ರ ಎನ್ನುವುದೇ ಇಲ್ಲ ಎಂಬ ಸಂದೇಶ ರವಾನಿಸಿದ್ದಾರೆ ಎಂದೂ ವ್ಯಾಖ್ಯಾನಿಸಲಾಗಿದೆ.
ಪಾಟೀಲರ ಹೇಳಿಕೆ ಡಿ.ಕೆ. ಶಿವಕುಮಾರ್ ಅವರನ್ನು ಕೆರಳಿಸಿದೆ. ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜೊತೆ ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ‘ಎಂ.ಬಿ. ಪಾಟೀಲರಿಗೆ ಆ ಹೇಳಿಕೆ ನೀಡಲು ಅಧಿಕಾರ ಕೊಟ್ಟವರು ಯಾರು? ಅವರೇನು ಪಕ್ಷದ ಹೈಕಮಾಂಡೇ? ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ‘ಈ ರೀತಿ ವರ್ತನೆ ಮುಂದುವರಿದರೆ ಪಕ್ಷದ ಅಧ್ಯಕ್ಷನಾಗಿ ಮುಂದುವರಿಯುವುದು ನನಗೆ ಕಷ್ಟವಾಗಲಿದೆ’ ಎಂದಿದ್ದಾರೆ ಎಂದೂ ಗೊತ್ತಾಗಿದೆ. ಶಿವಕುಮಾರ್ ಸಹೋದರ, ಸಂಸದ ಡಿ.ಕೆ. ಸುರೇಶ್ ಕೂಡಾ ಕೆಂಡಾಮಂಡಲವಾಗಿದ್ದಾರೆ.
ಪಾಟೀಲರ ಹೇಳಿಕೆ ಇನ್ನೇನು ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದೆ ಎಂದು ಗೊತ್ತಾಗುತ್ತಿದ್ದಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ, ಪಕ್ಷದ ನಾಯಕರು ಪರಸ್ಪರ ಹೇಳಿಕೆಗಳನ್ನು ನೀಡದಂತೆ ಕಡಿವಾಣ ಹಾಕಿದ್ದಾರೆ.
‘ಈ ವಿಚಾರ ಮಲ್ಲಿಕಾರ್ಜುನ ಖರ್ಗೆ, ವೇಣುಗೋಪಾಲ್, ಸುರ್ಜೇವಾಲಾ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿದೆ. ಇದು ಆಂತರಿಕವಾಗಿ ನಡೆದಿರುವ ಚರ್ಚೆ. ಅವರನ್ನು ಬಿಟ್ಟು ಬೇರೆಯವರಿಗೆ ಈ ವಿಚಾರ ಗೊತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಚರ್ಚೆ ಆಗಿಲ್ಲ’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
‘ಈಗ ನಮ್ಮ ಮುಂದಿರುವುದು ಉತ್ತಮ ಆಡಳಿತ ನೀಡುವ ವಿಚಾರ. ಅಧಿಕಾರ ಹಂಚಿಕೆ ವಿಚಾರವನ್ನು ಹೈಕಮಾಂಡ್ ನೋಡಿಕೊಳ್ಳಲಿದೆ. ಈ ಬಗ್ಗೆ ಯಾರು ಗೊಂದಲ ಸೃಷ್ಟಿಸಬಾರದು. ಎಂ.ಬಿ. ಪಾಟೀಲರಿಗೆ ಏನು ಮಾಹಿತಿ ಇದೆಯೋ ನನಗೆ ಗೊತ್ತಿಲ್ಲ. ನನಗೆ ಗೊತ್ತಿರುವುದನ್ನು ಹೇಳಿದ್ದೇನೆ’ ಎಂದೂ ಪ್ರತಿಪಾದಿಸಿದರು.
‘ಎಐಸಿಸಿ ನಾಯಕರು ಸುದ್ದಿಗೋಷ್ಠಿ ನಡೆಸಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಎಂದು ಹೇಳಿದರು. ಅದಷ್ಟು ನಮಗೆ ಗೊತ್ತು. ಈಗ ಅಧಿಕಾರ ಹಂಚಿಕೆ ವಿಚಾರ ಏಕೆ? ಆ ಬಗ್ಗೆ ಏನು ಚರ್ಚೆ ಆಗಿದೆಯೆಂದು ಗೊತ್ತಿಲ್ಲ. 2013ರಲ್ಲಿ ಈ ಬಗ್ಗೆ ಚರ್ಚೆ ಆಗಿದೆಯೇ? ಈಗ ಚರ್ಚೆ ಏಕೆ’ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷರೂ ಆಗಿರುವ ಶಾಸಕ ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ‘ಅಧಿಕಾರ ಹಂಚಿಕೆ ಕುರಿತು ಏನೇ ಮಾತುಕತೆ ಆಗಿದ್ದರೂ, ಎಐಸಿಸಿ ಅಧ್ಯಕ್ಷರು, ಉಸ್ತುವಾರಿ ಮತ್ತು ಇಬ್ಬರು ನಾಯಕರ ನಡುವೆ ಮಾತ್ರ ಆಗಿದೆ. ಏನೇ ಇದ್ದರೂ ಈ ನಾಲ್ವರಿಗೆ ಮಾತ್ರ ಗೊತ್ತಿದೆ. ವರಿಷ್ಠರ ತೀರ್ಮಾನದಂತೆ ಎಲ್ಲವೂ ನಡೆಯುತ್ತದೆ’ ಎಂದರು.
ಅರಸೀಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಎಂ. ಶಿವಲಿಂಗೇಗೌಡ, ‘ನಾನು ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತನಾಡುವಷ್ಟು ಪ್ರಬಲ ಅಲ್ಲ. ಅಷ್ಟು ಎತ್ತರಕ್ಕೆ ನಾನು ಬೆಳೆದಿಲ್ಲ. ಅವೆಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ’ ಎಂದರು.
‘ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ಹೇಳಿದ್ದೇನೆ’
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಂದು ನಮ್ಮ ನಾಯಕರು ಹೇಳಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸುದ್ದಿಗೋಷ್ಠಿಯಲ್ಲಿ ಏನು ಹೇಳಿದ್ದರೋ ಅದನ್ನೇ ನಾನು ಹೇಳಿದ್ದೇನೆ. ಅಧಿಕಾರ ಹಂಚಿಕೆ ಇಲ್ಲ. ಇದ್ದರೆ ಅದು ಜನರ ಜೊತೆ ಮಾತ್ರ ಎಂದೂ ವೇಣುಗೋಪಾಲ್ ಹೇಳಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಮುಂದುವರೆಯುತ್ತಾರೆ ಎಂದೂ ಹೇಳಿದ್ದರು. ನಾನು ಅದನ್ನೂ ಹೇಳಿದ್ದೇನೆ. ಅಧಿಕಾರ ಹಂಚಿಕೆಯ ಸಂಧಾನ ಸೂತ್ರ ನನಗೆ ಗೊತ್ತಿಲ್ಲ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ. ಪಕ್ಷದ ವರಿಷ್ಠರು ಹೇಳಿದ್ದನ್ನಷ್ಟೇ ನಾನು ಹೇಳಿದ್ದೇನೆ.
-ಎಂ.ಬಿ. ಪಾಟೀಲ, ಸಚಿವ
‘ಪಾಟೀಲರ ಮೂಲಕ ಸಂದೇಶ’
‘ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವುದಿಲ್ಲ. ಅವರನ್ನು ಆಗಲು ಸಿದ್ದರಾಮಯ್ಯ ಬಿಡುವುದಿಲ್ಲ. ಸಿದ್ದರಾಮಯ್ಯ ಅವರು ಪಾಟೀಲರ ಹೇಳಿಕೆಯ ಮೂಲಕ ಸಂದೇಶ ರವಾನಿಸಿದ್ದಾರೆ. ಇದು ಡಿಕೆಶಿಗೆ ನೇರವಾದ ಎಚ್ಚರಿಕೆ. ಬಹುಮತ ಸಿಕ್ಕಿದ ನಂತರವೂ ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದಾಗ ಈ ಸರ್ಕಾರ ಸ್ಥಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ. ಗ್ಯಾರಂಟಿಯೂ ಇಲ್ಲ. ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಎಟಿಎಂ ಸರ್ಕಾರ ರಚನೆಯಾಗಿದೆ. ಅದಷ್ಟೇ ಈ ಸರ್ಕಾರದ ಆದ್ಯತೆಯಾಗಿರುವುದು ರಾಜ್ಯದ ದುರಂತ.
-ಬಿಜೆಪಿ ಟ್ವೀಟ್
‘ಅನಗತ್ಯ ಹೇಳಿಕೆ ನೀಡಬಾರದು’
ಯಾರೂ ಕೂಡ ಅನಗತ್ಯ ಹೇಳಿಕೆಗಳನ್ನು ನೀಡಬಾರದು. ಒಳ್ಳೆಯ ಆಡಳಿತ ನೀಡುವುದಷ್ಟೇ ಈಗ ನಮ್ಮ ಆದ್ಯತೆ. ಇದರ ಕಡೆ ಗಮನ ಕೊಡಬೇಕಿದೆ. ಇದರ ಹೊರತಾಗಿ ಯಾವುದೇ ಗೊಂದಲದ ಹೇಳಿಕೆಗಳನ್ನು ನೀಡಬಾರದು. ಗೊಂದಲ ಮೂಡಿಸುವ ಹೇಳಿಕೆಗಳೂ ಸೇರಿದಂತೆ ಎಲ್ಲವನ್ನೂ ಎಐಸಿಸಿ ಗಮನಿಸುತ್ತದೆ. ಯಾವುದೇ ವಿಷಯಗಳಿದ್ದರೂ ಎಐಸಿಸಿ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ.
-ರಣದೀಪ್ ಸಿಂಗ್ ಸುರ್ಜೇವಾಲಾ, ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.