ADVERTISEMENT

ಭ್ರಷ್ಟಾಚಾರ ಸಹಿಸಲ್ಲ: ಮುಖಂಡರ ಸಭೆಯಲ್ಲಿ ಸಚಿವರಿಗೆ ರಾಹುಲ್‌ ಗಾಂಧಿ ಎಚ್ಚರಿಕೆ

ಎಐಸಿಸಿ ಕಚೇರಿಯಲ್ಲಿ ಬುಧವಾರ ನಡೆದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2023, 23:38 IST
Last Updated 2 ಆಗಸ್ಟ್ 2023, 23:38 IST
   

ನವದೆಹಲಿ: ‘ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಶೇ 40 ಲಂಚದ ಆರೋಪದ ಬಗ್ಗೆ ಕಾಂಗ್ರೆಸ್‌ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿ ಯಶಸ್ಸು ಗಳಿಸಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ವಿಷಯದಲ್ಲಿ ನಾವು ಶೂನ್ಯ ಸಹಿಷ್ಣು ಆಗಿರುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ರಾಜ್ಯದ ಸಚಿವರಿಗೆ ಎಚ್ಚರಿಕೆ ನೀಡಿದರು. 

ಲೋಕಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಎಐಸಿಸಿ ಕಚೇರಿಯಲ್ಲಿ ಬುಧವಾರ ನಡೆದ ರಾಜ್ಯ ಕಾಂಗ್ರೆಸ್‌ನ ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ರಾಹುಲ್‌, ‘ನಾವು ಸ್ವಚ್ಛ ಆಡಳಿತ ನೀಡಬೇಕು. ಕೆಲವು ಸಚಿವರು ತಮ್ಮ ಧೋರಣೆಯನ್ನು ಬದಲಿಸಿಕೊಳ್ಳಬೇಕು. ಸ್ವಜನ ಪಕ್ಷಪಾತಕ್ಕೆ ಅವಕಾಶ ನೀಡಬಾರದು’ ಎಂದು ತಾಕೀತು ಮಾಡಿದರು. ರಾಜ್ಯ ನಾಯಕರು ಹಾಗೂ ಸಚಿವರ ಜತೆಗೆ ಹೈಕಮಾಂಡ್‌ನ ನಾಯಕರು ಸುಮಾರು ಆರು ತಾಸು ಸಭೆ ನಡೆಸಿದರು. 

‘ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದು ಎರಡು ತಿಂಗಳಷ್ಟೇ ಕಳೆದಿದೆ. ಅಷ್ಟರಲ್ಲೇ ಕೆಲವು ಸಚಿವರ ಕಾರ್ಯವೈಖರಿ ಬಗ್ಗೆ ಪಕ್ಷದ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಲವು ಸಚಿವರು ಶಾಸಕರ ಕೈಗೂ ಸಿಗುತ್ತಿಲ್ಲ’ ಎಂದು ಕೆಲವು ಮುಖಂಡರು ಸಭೆಯಲ್ಲಿ ಪ್ರಸ್ತಾಪಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇವೆಲ್ಲ ಆಧಾರರಹಿತ ಆರೋಪಗಳು. ಶಾಸಕಾಂಗ ಪಕ್ಷದ ಸಭೆ ಕರೆದು ಶಾಸಕರ ಅಹವಾಲು ಆಲಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು. ‘ನಮ್ಮ ಸರ್ಕಾರದ ಬಗ್ಗೆ ಸಣ್ಣ ಕಳಂಕವೂ ಇರಬಾರದು. ಯಾರೂ ಇಂತಹ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು’ ಎಂದು ರಾಹುಲ್‌ ಸೂಚಿಸಿದರು ಎಂದು ಮೂಲಗಳು ಹೇಳಿವೆ. 

ADVERTISEMENT

ಮೂವರು ಸಚಿವರಿಗೆ ಎಚ್ಚರಿಕೆ: ಸಭೆಗೂ ಮುನ್ನ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್‌ ಅವರು ಮೂವರು ಸಚಿವರನ್ನು ಪ್ರತ್ಯೇಕವಾಗಿ ಕರೆಸಿಕೊಂಡು ಎಚ್ಚರಿಕೆ ನೀಡಿದರು. ‘ವಿಧಾನಮಂಡಲದ ಮೊದಲ ಅಧಿವೇಶನದಲ್ಲೇ ವಿರೋಧ ಪಕ್ಷದ ನಾಯಕರು ವರ್ಗಾವಣೆಯ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಆ ಬಳಿಕವೂ ನಿಮ್ಮ ವರ್ತನೆಯಲ್ಲಿ ಬದಲಾವಣೆ ಆಗಿಲ್ಲ. ಈ ಸಂಬಂಧ ನಮಗೂ ದೂರುಗಳು ಬಂದಿವೆ. ನೀವು ಈ ಹಿಂದೆಯೂ ಸಚಿವರಾಗಿದ್ದವರು. ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಕೆಲಸ ಮಾಡಬೇಡಿ’ ಎಂದು ಕಟುವಾಗಿ ಎಚ್ಚರಿಸಿದರು. ಒಬ್ಬರು ಸಚಿವರು ಹಳೆ ಮೈಸೂರು ಭಾಗದವರು ಹಾಗೂ ಇಬ್ಬರು ಸಚಿವರು ಉತ್ತರ ಕರ್ನಾಟಕ ಭಾಗದವರು ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. 

ಹಿರಿಯ ನಾಯಕರ ಸಭೆಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ‘ನಮ್ಮ ಸರ್ಕಾರದ ಬಗ್ಗೆ ಜನರು ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ನಾವು ಮೊದಲಿನಿಂದಲೂ ಬಡ ಜನರಿಗಾಗಿ ಕಾರ್ಯಕ್ರಮಗಳನ್ನು ನೀಡಿದವರು. ಈ ಸಲದ ಚುನಾವಣೆಯಲ್ಲಿ ದಲಿತರು, ಹಿಂದುಳಿದವರು ಹಾಗೂ ಮುಸ್ಲಿಮರ ಜತೆಗೆ ಮಹಿಳೆಯರೂ ನಮ್ಮ ಕೈ ಹಿಡಿದಿದ್ದಾರೆ. ಅವರ ವಿಶ್ವಾಸಕ್ಕೆ ಭಂಗ ಬಾರದಂತೆ ನೋಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು. 

‘ಸರ್ಕಾರ ರಚನೆಯಾಗಿ ಎರಡು ತಿಂಗಳಲ್ಲೇ ಗ್ಯಾರಂಟಿ ಯೋಜನೆಗಳು ಜಾರಿ ಆಗಿದೆ. ಈ ಯೋಜನೆಗಳ ಲಾಭ ಕರ್ನಾಟಕದ ಮಧ್ಯಮ ವರ್ಗ ಮತ್ತು ಬಡವರಿಗೆ ತಲುಪುತ್ತಿದೆ. ಈ ಗ್ಯಾರಂಟಿಗಳು ಪ್ರತಿಯೊಬ್ಬ ಫಲಾನುಭವಿಗೂ ಕಡ್ಡಾಯವಾಗಿ ತಲುಪುವಂತೆ ಸರ್ಕಾರಿ ಯಂತ್ರಾಂಗಗಳನ್ನು ಪರಿಣಾಮಕಾರಿಯಾಗಿ ಬಳಸಬೇಕು’ ಎಂದು ಸೂಚಿಸಿದರು. 

‘ರಾಜ್ಯದಲ್ಲಿ 20ರಿಂದ 22 ಕ್ಷೇತ್ರಗಳಲ್ಲಿ ಗೆಲ್ಲಲು ಅವಕಾಶಗಳಿವೆ. ವಿಧಾನಸಭಾ ಚುನಾವಣಾ ಮಾದರಿಯಲ್ಲೇ ಒಗ್ಗಟ್ಟಿನಿಂದ ಮುಂದುವರಿದರೆ ಈ ಗುರಿ ಅಸಾಧ್ಯವಲ್ಲ’ ಎಂದೂ ಅವರು ಹೇಳಿದರು. ‘ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 15ರಿಂದ 20 ಸ್ಥಾನಗಳನ್ನು ಗೆದ್ದು ತೋರಿಸುತ್ತೇವೆ’ ಎಂದು ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭರವಸೆ ನೀಡಿದರು ಎಂದು ಮೂಲಗಳು ಹೇಳಿವೆ. 

‘ದಲಿತರು, ಅಲ್ಪಸಂಖ್ಯಾತರು ಮತ್ತು ಒಬಿಸಿಗಳನ್ನು ಒಳಗೊಂಡಿರುವ ಕಾಂಗ್ರೆಸ್‌ನ ಪ್ರಮುಖ ಮತದಾರರಿಗೆ ಇನ್ನಷ್ಟು ಕೊಡುಗೆಗಳನ್ನು ನೀಡುವ ಕಡೆಗೆ ಗಮನ ಹರಿಸಬೇಕು. ಗ್ಯಾರಂಟಿಗಳ ಅನುಷ್ಠಾನಕ್ಕೆ ₹60 ಸಾವಿರ ಕೋಟಿ ಮೀಸಲಿಡಲಾಗಿದೆ. ರಾಜ್ಯದ ಬೊಕ್ಕಸದಿಂದ ಇನ್ನಷ್ಟು ಹಣ ಮೀಸಲಿಡುವುದು ಅಸಾಧ್ಯ. ಕೇಂದ್ರ ಸರ್ಕಾರದ ಅನುದಾನ ಬಳಸಿಕೊಂಡು ಬಡ ಜನರ ಪರ ಯೋಜನೆಗಳ ಅನುಷ್ಠಾನಕ್ಕೆ ಕಾರ್ಯೋನ್ಮುಖವಾಗಬೇಕು. ಕೇಂದ್ರ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರಬೇಕು’ ಎಂದೂ ಕಿವಿಮಾತು ಹೇಳಿದರು. 

‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ 36ರಷ್ಟು ಮತಗಳನ್ನು ಪಡೆದಿತ್ತು. ಈ ಸಲವೂ ಅಷ್ಟೇ ಮತಗಳನ್ನು ಪಡೆದಿದೆ. ಬಿಜೆಪಿಯ ಮತ ಬ್ಯಾಂಕ್ ಯಥಾಸ್ಥಿತಿಯಲ್ಲಿದೆ. ಆ ಮತಗಳನ್ನು ಸೆಳೆಯುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಸಂಘಟನೆಗೆ ಇನ್ನಷ್ಟು ಚುರುಕು ಮುಟ್ಟಿಸಬೇಕು’ ಎಂದೂ ಹೇಳಿದರು. 

ಮಲ್ಲಿಕಾರ್ಜುನ ಖರ್ಗೆ, ‘ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಎರಡು ದಶಕಗಳಿಂದ ಕಾಂಗ್ರೆಸ್‌ ಎರಡಂಕಿ ದಾಟಿಲ್ಲ. ಈ ಸಲ ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಸುವರ್ಣಾವಕಾಶ ಇದೆ. ನಮ್ಮದೇ ಸರ್ಕಾರ ಇದೆ ಎಂದು ಮೈಮರೆಯದೆ ಕಾರ್ಯತಂತ್ರ ರೂಪಿಸಬೇಕು’ ಎಂದು ತಾಕೀತು ಮಾಡಿದರು.  

ಭೂಸುಧಾರಣಾ ಕಾಯ್ದೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ತಂದಿತ್ತು. ಇದರಿಂದಾಗಿ, ಪ್ರಭಾವಿಗಳಿಗೆ ಅನುಕೂಲವಾಗಿತ್ತು. ಈ ಕಾಯ್ದೆಯನ್ನು ರದ್ದುಗೊಳಿಸುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ತಿಳಿಸಿತ್ತು. ಕಾಯ್ದೆ ತಿದ್ದುಪಡಿಗೆ ನಮ್ಮ ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಕೆಲವು ಮುಖಂಡರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ. 

ಸಭೆಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್‌ ಹಾಗೂ ಲಕ್ಷ್ಮಣ ಸವದಿ, ‘ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಇಲ್ಲದ ಪಕ್ಷ ಆಗಿದೆ. ವಿರೋಧ ಪಕ್ಷದ ನಾಯಕರನ್ನು ನೇಮಿಸಲು ಆ ಪಕ್ಷಕ್ಕೆ ಸಾಧ್ಯವಾಗಿಲ್ಲ. ಈ ಅವಕಾಶವನ್ನು ಕಾಂಗ್ರೆಸ್‌ ಸದುಪಯೋಗಪಡಿಸಿಕೊಳ್ಳಬೇಕು. ಬಿಜೆಪಿ ವಿರುದ್ಧ ಮತ್ತಷ್ಟು ಆಕ್ರಮಣಕಾರಿಯಾಗಿ ಮುಂದುವರಿಯಬೇಕು. ಈ ಸಲ 20ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪೂರಕ ವಾತಾವರಣ ಇದೆ’ ಎಂದು ಹೇಳಿದರು ಎಂದು ಮೂಲಗಳು ತಿಳಿಸಿವೆ. 

‘ಪಕ್ಷದ ಮೂವರು ಕಾರ್ಯಾಧ್ಯಕ್ಷರು ಸಚಿವರಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಸಂಘಟನೆಗೆ ಸಮಯ ನೀಡಲು ಆಗುತ್ತಿಲ್ಲ. ಕಾರ್ಯಾಧ್ಯಕ್ಷ ಹುದ್ದೆಯಿಂದ ಮುಕ್ತಿ ಕೊಡಿ ಎಂದು ಅವರೂ ಕೇಳಿಕೊಂಡಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ತುರ್ತಾಗಿ ಗಮನ ಹರಿಸಬೇಕು’ ಎಂದು ಕೆಲವು ಮುಖಂಡರು ಮನವಿ ಮಾಡಿದರು.  

ಹಿರಿಯ ನಾಯಕರ ಸಭೆಯಲ್ಲಿ 37 ಮುಖಂಡರು ಭಾಗಿಯಾಗಿದ್ದರು. ಬಳಿಕ ಖರ್ಗೆ ಹಾಗೂ ರಾಹುಲ್‌ ಅವರು ಸಚಿವರ ಜತೆಗೆ ಪ್ರತ್ಯೇಕ ಸಭೆ ನಡೆಸಿದರು. ವಸತಿ ಸಚಿವ ಜಮೀರ್ ಅಹ್ಮದ್‌ ಖಾನ್‌ ಎರಡು ತಿಂಗಳ ಇಲಾಖಾ ಪ್ರಗತಿ ವರದಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.