ಬೆಂಗಳೂರು: ಮೊಘಲ್ ದೊರೆ ಔರಂಗಜೇಬ್ ಮತ್ತು ಬ್ರಿಟಿಷರು ಹಣದ ಅನಿವಾರ್ಯತೆಯಿಂದ ಹಿಂದೂ ದೇವಾಲಯಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಕಾಂಗ್ರೆಸ್ ಕೂಡ ಅದೇ ಹಾದಿಯನ್ನು ಅನುಸರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳ ಬಳಿಕವೂ ದೇವಾಲಯದ ಮೇಲಿನ ಆದಾಯದ ಮೇಲೆ ಕಣ್ಣಿಡುವುದು ಸ್ವಾತಂತ್ರ್ಯದ ನೈಜ ಅರ್ಥಕ್ಕೆ ವಿರೋಧವಾದುದು ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ದೇವಸ್ಥಾನಕ್ಕೆ ಭಕ್ತರು ದಾನ ಕೊಡುತ್ತಾರೆ. ಅದರ ಹಣದಲ್ಲಿ ದೇವಾಲಯ ಅಭಿವೃದ್ಧಿ, ಸಮಾಜಮುಖಿ ಕೆಲಸಗಳು ಆಗಬೇಕು. ದೇವಸ್ಥಾನಗಳು ಸಮಾಜದ ಸ್ವತ್ತು. ಔರಂಗಜೇಬನಿಗೆ ದೇವಸ್ಥಾನದ ಹಣದ ಅನಿವಾರ್ಯತೆ ಇತ್ತು. ಆದ್ದರಿಂದ, ದೇವಾಲಯಗಳನ್ನು ಹಿಡಿತಕ್ಕೆ ತೆಗೆದುಕೊಂಡ. ದೇವಸ್ಥಾನಗಳ ಸ್ವಾಯತ್ತತೆ ಕುರಿತಂತೆ ಮುಖ್ಯಮಂತ್ರಿಯವರ ನಿರ್ಧಾರ ಸೂಕ್ತವಾಗಿದೆ. ಧರ್ಮಸ್ಥಳದ ಬೆಳವಣಿಗೆ ಮತ್ತು ದೇವಸ್ಥಾನಗಳ ಪುನರುತ್ಥಾನದ ಅಧ್ಯಯನಕ್ಕೆ ಕೆಪಿಸಿಸಿ ಅಧ್ಯಕ್ಷರು ಮುಂದಾಗಲಿ ಎಂದು ರವಿ ಹೇಳಿದರು.
ದೇವಸ್ಥಾನಗಳನ್ನು ಭಕ್ತರ ಅಧೀನಕ್ಕೆ ನೀಡುವ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರು ಸರ್ಕಾರ ಭಸ್ಮವಾಗುವ ಹೇಳಿಕೆ ನೀಡಿದ್ದಾರೆ. ಅವರನ್ನೇ ಅವರು ಭಸ್ಮಾಸುರ ಅಂದುಕೊಂಡಿದ್ದಾರೆ. ಆದರೆ, ಅವರೇ ಶಾಪಗ್ರಸ್ತರು. ಈಗ ಅವರೇ ಜಾಮೀನಿನ ಮೇಲೆ ಇದ್ದಾರೆ. ಸಿಬಿಐ, ಇಡಿ ಕುಣಿಕೆಯಲ್ಲಿದ್ದಾರೆ ಎಂದು ಲೇವಡಿ ಮಾಡಿದರು.
ಮತಾಂತರ ನಿಷೇಧವನ್ನು ವಿರೋಧಿಸುವ ಕಾಂಗ್ರೆಸ್‌ನವರು ತಾವು ಆಸೆ, ಆಮಿಷದ ಮತ್ತು ಬಲ ಪ್ರಯೋಗದ ಮತಾಂತರದ ಪರವಾಗಿದ್ದೇವೆ ಎಂದು ಹೇಳಿಕೆ ಕೊಡಲಿ. ಸೆಕ್ಯುಲರ್ ಹೆಸರಿನಲ್ಲಿ ಹಿಂದೂ ಭಾವನೆಗಳನ್ನು ಘಾಸಿ ಮಾಡುವುದನ್ನು ಬಿಜೆಪಿ ವಿರೋಧಿಸುತ್ತದೆ. ಮತಾಂತರ ರಾಷ್ಟ್ರಾಂತರಕ್ಕೆ ಸಮ ಎಂದು ಮಹಾತ್ಮಗಾಂಧಿ ಹೇಳಿದ್ದರು ಎಂದು ರವಿ ತಿಳಿಸಿದರು.
ತಾಲಿಬಾನ್‌ನದು ಮತಾಂಧತೆ, ಕಾಂಗ್ರೆಸ್‌ಗೆ ಮತದ ಮೇಲಿನ ಅಂಧತೆ. ತಾಲಿಬಾನ್‌ಗೂ ಸ್ಪರ್ಧೆ ಕೊಡುವ ರೀತಿಯಲ್ಲಿ ಕಾಂಗ್ರೆಸ್ ವರ್ತಿಸುತ್ತಿದೆ. ಕಾಂಗ್ರೆಸ್ ಪಕ್ಷ ಬಹುಸಂಖ್ಯಾತರ ಭಾವನೆಗಳಿಗೆ ಕವಡೆ ಕಾಸಿನಕಿಮ್ಮತನ್ನೂ ಕೊಡುತ್ತಿಲ್ಲ. ಕುಟುಂಬಕ್ಕೆ ಜೋತು ಬಿದ್ದ ಕಾಂಗ್ರೆಸ್‌ಗೆ ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿಯನ್ನು ಹೊಂದಿಲ್ಲ. ಬಿಜೆಪಿ ತರುವ ಪರಿವರ್ತನೆಗಳನ್ನು ವಿರೋಧಿಸುವ ಕೆಟ್ಟ ಚಾಳಿ ಮಾತ್ರ ಬೆಳೆಸಿಕೊಂಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.