ಬೆಂಗಳೂರು: ‘ನಗರದ ಪ್ರತಿಷ್ಠಿತ ಆರ್.ಎಂ.ವಿ ಬಡಾವಣೆಯ 2ನೇ ಹಂತದ ಲೊಟ್ಟೆಗೊಲ್ಲಹಳ್ಳಿಯಲ್ಲಿ ಬಿಡಿಎ ವಶಪಡಿಸಿಕೊಂಡಿದ್ದ 32 ಗುಂಟೆ ಜಮೀನನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡಿದ್ದ ಇಂದಿನ ವಿಪಕ್ಷ ನಾಯಕ ಆರ್. ಅಶೋಕ, ಆ ಜಮೀನನ್ನು ಬಿಡಿಎಗೆ ವಾಪಸ್ ಮಾಡಿದ್ದರು. ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಅವರು, ಈ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕಲ್ಲವೇ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಪ್ರಶ್ನಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸಚಿವರಾದ ಎಚ್.ಕೆ. ಪಾಟೀಲ, ಕೃಷ್ಣ ಬೈರೇಗೌಡ ಮತ್ತು ಸತೀಶ ಜಾರಕಿಹೊಳಿ ಜೊತೆ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಲೊಟ್ಟೆಗೊಲ್ಲಹಳ್ಳಿಯ ಅಕ್ರಮ ಡಿನೋಡಿಫೈ ಪ್ರಕರಣವನ್ನು ದಾಖಲೆಗಳ ಸಹಿತ ವಿವರಿಸಿದರು.
‘ವಿಷಯ ವಿವಾದಕ್ಕೀಡಾಗುತ್ತಿದ್ದಂತೆ ಅಶೋಕ ಅವರು 2011ರಲ್ಲಿ ನೋಂದಾಯಿತ ದಾನಪತ್ರ ಮೂಲಕ ಈ ಜಮೀನನ್ನು ಬಿಡಿಎಗೆ ವಾಪಸ್ ಮಾಡಿದ್ದರು. ಈ ಜಾಗದ ವಿಷಯದಲ್ಲಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅಂದಿನ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠವು, ‘ಜಮೀನನ್ನು ಅಶೋಕ ವಾಪಸ್ ಕೊಟ್ಟಿರುವುದರಿಂದ ಯಾವುದೇ ತನಿಖೆ ಅಗತ್ಯ ಇಲ್ಲ’ ಎಂದು ತೀರ್ಪು ನೀಡಿ, ಅತ್ರಿಯವರ ಅರ್ಜಿಯನ್ನು ವಿಲೇವಾರಿ ಮಾಡಿತ್ತು. ಅಶೋಕ ಜೊತೆ ಅಂದಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮತ್ತು ಯಡಿಯೂರಪ್ಪ ಕೂಡಾ ಈ ಹಗರಣದ ಪಾತ್ರಧಾರಿಗಳಾಗಿದ್ದರು’ ಎಂದೂ ಹೇಳಿದರು.
ಯಾವುದೇ ತಪ್ಪು ಮಾಡಿಲ್ಲದಿದ್ದರೂ ಮುಖ್ಯಮಂತ್ರಿ ರಾಜೀನಾಮೆಗೆ ಆಗ್ರಹಿಸುವ ಬಿಜೆಪಿಯವರು, ಇ.ಡಿ ಸಂಸ್ಥೆಯನ್ನು ಅಸ್ತ್ರದಂತೆ ಬಳಸುತ್ತಾರೆಕೃಷ್ಣ ಬೈರೇಗೌಡ, ಕಂದಾಯ ಸಚಿವ
ನೀವು ಮಾಡಿದ್ದು ಸರಿಯಾದರೆ, ಪಾರ್ವತಮ್ಮ ಮಾಡಿದ್ದು ತಪ್ಪು ಹೇಗಾಗುತ್ತದೆ? ಅನವಶ್ಯಕವಾಗಿ ತಪ್ಪು ಹೇರಿ, ಜನರ ಮನಸ್ಸಿನಲ್ಲಿ ಸಂಶಯ ಸೃಷ್ಟಿ ಮಾಡಬೇಡಿಎಚ್.ಕೆ. ಪಾಟೀಲ, ಕಾನೂನು ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.