ವಿಧಾನಸಭೆ(ಬೆಳಗಾವಿ): ಪ್ರಶ್ನೋತ್ತರ ಕಲಾಪದಲ್ಲಿ ನಿಯಮಾವಳಿ ಪಾಲಿಸುವ ವಿಚಾರದಲ್ಲಿ ಸಭಾಧ್ಯಕ್ಷ ಯು.ಟಿ. ಖಾದರ್ ಅವರೊಂದಿಗೆ ಮಂಗಳವಾರ ಜಟಾಪಟಿ ನಡೆಸಿದ ಕಾಂಗ್ರೆಸ್‌ನ ಬಸವರಾಜ ರಾಯರಡ್ಡಿ ಸಿಟ್ಟಿನಿಂದ ಸದನದಿಂದಲೇ ಹೊರ ನಡೆದರು.
‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ನ ಎನ್.ಎ. ಹ್ಯಾರಿಸ್ ಅವರ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಉತ್ತರ ನೀಡುತ್ತಿದ್ದರು. ಮಧ್ಯ ಪ್ರವೇಶಿಸಿದ ರಾಯರಡ್ಡಿ, ಪ್ರಶ್ನೋತ್ತರ ಕಲಾಪ ಒಂದು ಗಂಟೆಯ ಅವಧಿಯನ್ನು ಮೀರಿ ನಡೆಯುತ್ತಿರುವುದನ್ನು ಆಕ್ಷೇಪಿಸಿದರು.
‘ಇದೇನು ಪ್ರಶ್ನೋತ್ತರ ಗಂಟೆಯೊ? ಪ್ರಶ್ನೋತ್ತರ ಗಂಟೆಗಳೊ? ಸದನದ ನಿಯಮಗಳಿಗೆ ಬೆಲೆ ಇಲ್ಲವೆ’ ಎಂದು ರಾಯರಡ್ಡಿ ಕೇಳಿದರು. ‘ನೀವು ಕುಳಿತುಕೊಳ್ಳಿ. ಸಚಿವರು ಉತ್ತರ ಕೊಡುತ್ತಾರೆ’ ಎಂದು ಸಭಾಧ್ಯಕ್ಷರು ಸೂಚಿಸಿದರು.
‘ಸ್ಪೀಕರ್ ಅವರೇ ನೀವು ಸರಿಯಾಗಿ ನಿಯಮ ಪಾಲಿಸಬೇಕು. ನಿಯಮದ ಪ್ರಕಾರವೇ ಕಲಾಪ ನಡೆಸಬೇಕು’ ಎಂದು ರಾಯರಡ್ಡಿ ಏರಿದ ಧ್ವನಿಯಲ್ಲಿ ಹೇಳಿದರು. ‘ಅದು ನನಗೆ ಗೊತ್ತಿದೆ. ನಿಯಮದ ಪ್ರಕಾರವೇ ಸದನದ ಕಲಾಪ ನಡೆಸುತ್ತಿದ್ದೇನೆ. ನೀವು ಮಾತನಾಡದೇ ಕುಳಿತುಕೊಳ್ಳಿ ಎಂದು ಹೇಳುತ್ತಿದ್ದೇನೆ. ದಯವಿಟ್ಟು ಅದನ್ನು ಪಾಲಿಸಿ’ ಎಂದು ಖಾದರ್ ಗದರಿದರು.
‘ನಾನು ಸದನದ ಹಿರಿಯ ಸದಸ್ಯರಲ್ಲಿ ಒಬ್ಬ. ನನಗೇ ಹೀಗೆ ಕುಳಿತುಕೊಳ್ಳಲು ಹೇಳುತ್ತೀರಾ’ ಎಂದು ರಾಯರಡ್ಡಿ ಮರುಪ್ರಶ್ನೆ ಹಾಕಿದರು. ‘ಹೌದು, ನಿಮಗೇ ಹೇಳುತ್ತಿದ್ದೇನೆ. ಸೋಮವಾರ ಕೂಡ ಇದೇ ವಿಷಯದ ಬಗ್ಗೆ ನೀವು ಮಾತನಾಡಿದ್ದಿರಿ. ಸಮಯ ಪಾಲನೆ ಬಗ್ಗೆಯೂ ಹೇಳಿದ್ದಿರಿ. ಮಂಗಳವಾರ 11 ಗಂಟೆಗೆ ಕಲಾಪ ಆರಂಭವಾಯಿತು. ನೀವು ಸದನಕ್ಕೆ ಬಂದಿದ್ದೇ 12 ಗಂಟೆಗೆ. ಈಗ ಬೋಧನೆ ಮಾಡುತ್ತೀರಾ’ ಎಂದು ಸ್ಪೀಕರ್ ಕುಟುಕಿದರು.
‘ನಾನು ಹೊರಟು ಹೋಗುತ್ತೇನೆ’ ಎಂದು ರಾಯರಡ್ಡಿ ಹೊರಟರು. ಪಕ್ಕದಲ್ಲೇ ಇದ್ದ ಕಾಂಗ್ರೆಸ್‌ನ ಕೆಲವು ಸದಸ್ಯರು ತಡೆಯಲು ಮುಂದಾದರು. ಅವರೆಲ್ಲರಿಗೂ ಜೋರಾಗಿ ಬೈಯ್ಯುತ್ತಲೇ ರಾಯರಡ್ಡಿ ಸಭಾತ್ಯಾಗ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.