ಚಿಕ್ಕಬಳ್ಳಾಪುರ: ಅನರ್ಹ ಶಾಸಕ ಡಾ. ಕೆ.ಸುಧಾಕರ್ ಒಬ್ಬ ವ್ಯಭಿಚಾರಿ ಇದ್ದಂತೆ. ಕಾಂಗ್ರೆಸ್ ಪಕ್ಷದಿಂದ ಗೆದ್ದು ಶಾಸಕರಾಗಿದ್ದ ಅವರು ಬಿಜೆಪಿಯ ಆಸೆ– ಆಮಿಷಗಳಿಗೆ ಬಲಿಯಾಗಿ ರಾಜೀನಾಮೆ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಕೆ.ಆರ್.ರಮೇಶ್ ಕುಮಾರ್ ಟೀಕಿಸಿದರು.
ಕಾಂಗ್ರೆಸ್ ಮುಖಂಡ ಯಲುವಳ್ಳಿ ರಮೇಶ್ ಅವರ ನಿವಾಸದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ವಿಚ್ಛೇದನಕ್ಕೂ, ವ್ಯಭಿಚಾರಕ್ಕೂ ವ್ಯತ್ಯಾಸವಿದೆ. ವಿಚ್ಛೇದನ ಎಂದರೆ ಕಾನೂನು ರೀತಿಯಲ್ಲಿ ದೂರ ಆಗುವುದು. ಆದರೆ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವವರನ್ನು ವ್ಯಭಿಚಾರಿ ಎನ್ನುತ್ತಾರೆ ಎಂದರು.
ಅನರ್ಹರಿಗೆ ಕಾಂಗ್ರೆಸ್ ಪಕ್ಷದಲ್ಲಿ ವಜ್ರದ ಓಲೆ ಸಿಗಲಿಲ್ಲ. ವ್ಯವಹಾರ ಕುದುರಲಿಲ್ಲ ಎಂಬ ಕಾರಣಕ್ಕೆ ಪಕ್ಷ ಬಿಟ್ಟು ಬೇರೆ ಪಕ್ಷ ಸೇರಿದ್ದಾರೆ. ಅವರಿಗೆ ಯಾವಾಗ ನಾಮ ಹಾಕಿ ಬೇರೆಡೆಗೆ ಹೋಗುತ್ತಾರೋ ಗೊತ್ತಿಲ್ಲ ಎಂದು ಹೇಳಿದರು.
ಸುಪ್ರೀಂ ಕೋರ್ಟ್ ಅನರ್ಹ ಶಾಸಕರ ಕುರಿತು ನಾನು ನೀಡಿದ್ದ ತೀರ್ಪನ್ನು ಎತ್ತು ಹಿಡಿದಿದೆ. ಅನರ್ಹರು ವಿಧಾನಸಭೆಯಲ್ಲಿ ಇರಲು ಯೋಗ್ಯರಲ್ಲ ಎಂದು ಕೋರ್ಟ್ ಅರ್ಧ ತೀರ್ಪು ನೀಡಿದೆ. ಉಳಿದ ಅರ್ಧ ತೀರ್ಪನ್ನು ಜನರಿಗೆ ಬಿಟ್ಟಿದೆ. ಅದನ್ನು ಮತದಾರರು ಮತದಾನದ ಮೂಲಕ ಪೂರ್ಣಗೊಳಿಸಬೇಕು ಎಂದರು.
ಈ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸೋಲು, ಗೆಲುವಿನ ಪ್ರಶ್ನೆ ಬರುವುದಿಲ್ಲ. ಸಂವಿಧಾನ ಗೆಲ್ಲಬೇಕು. ಅದನ್ನು ಉಳಿಸಬೇಕು ಆ ನಿಟ್ಟಿನಲ್ಲಿ ಮತದಾರರು ಸುಧಾಕರ್‌ಗೆ ತಕ್ಕಪಾಠ ಕಲಿಸಬೇಕು ಎಂದು ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.