ADVERTISEMENT

ಬೇಲೆಕೇರಿ ಅದಿರು ಕಳ್ಳತನ–ರಫ್ತು ಪ್ರಕರಣ: ಶಾಸಕ ಸೈಲ್‌ಗೆ 7 ವರ್ಷ ಜೈಲು

ಬೇಲೆಕೇರಿ ಅದಿರು ಕಳ್ಳತನ–ರಫ್ತು ಪ್ರಕರಣ: ಏಳೂ ಜನ ಅಪರಾಧಿಗಳಿಗೆ ಸೇರಿ ₹44 ಕೋಟಿ ದಂಡ

ಬಿ.ಎಸ್.ಷಣ್ಮುಖಪ್ಪ
Published 27 ಅಕ್ಟೋಬರ್ 2024, 0:30 IST
Last Updated 27 ಅಕ್ಟೋಬರ್ 2024, 0:30 IST
<div class="paragraphs"><p>ಸತೀಶ್ ಸೈಲ್</p></div>

ಸತೀಶ್ ಸೈಲ್

   

ಬೆಂಗಳೂರು: ಕಬ್ಬಿಣದ ಅದಿರು ಕದ್ದು, ರಫ್ತು ಮಾಡಿದ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಸತೀಶ್
ಸೈಲ್‌ಗೆ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಇದೇ ಪ್ರಕರಣದಲ್ಲಿನ ಎಲ್ಲ ಏಳು ಅಪರಾಧಿಗಳಿಗೆ ಒಟ್ಟು ₹44 ಕೋಟಿಗೂ ಹೆಚ್ಚು ದಂಡ ವಿಧಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಿಡಲಾಗಿದ್ದ ಸಾವಿರಾರು ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಕಳ್ಳತನ ಮಾಡಿ, ಒಳಸಂಚು ರೂಪಿಸಿ, ವಿದೇಶಗಳಿಗೆ ಅಕ್ರಮವಾಗಿ ಸಾಗಣೆ ಮಾಡುವ ಮೂಲಕ ರಾಜ್ಯದ ಖಜಾನೆಗೆ ₹200 ಕೋಟಿಗೂ ಹೆಚ್ಚಿನ ಮೊತ್ತದ ನಷ್ಟ ಉಂಟು ಮಾಡಿದ ಆರು ಕ್ರಿಮಿ
ನಲ್‌ ಪ್ರಕರಣಗಳಲ್ಲಿ ಈ ತೀರ್ಪು ಪ್ರಕಟಿಸಲಾಗಿದೆ.

ADVERTISEMENT

ಪ್ರಕರಣದ ಆರೋಪಿಗಳಾಗಿದ್ದ ನಿವೃತ್ತ ಬಂದರು ಅಧಿಕಾರಿ ಮಹೇಶ್‌ ಜೆ.ಬಿಳಿಯೆ, ಕಾರವಾರ–ಅಂಕೋಲಾ ಶಾಸಕರೂ ಆದ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈ. ಲಿ. ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌, ಲಕ್ಷ್ಮಿ ವೆಂಕಟೇಶ್ವರ ಟ್ರೇಡರ್ಸ್‌ ಮಾಲೀಕ ಖಾರದಪುಡಿ ಮಹೇಶ್‌, ಸ್ವಸ್ತಿಕ್ ಕಂಪನಿ ಮಾಲೀಕರಾದ ಕೆ.ವಿ.ನಾಗರಾಜ್‌ (ಸ್ವಸ್ತಿಕ್) ಮತ್ತು ಕೆ.ವಿ.ಎನ್.ಗೋವಿಂದರಾಜ್‌, ಆಶಾಪುರ ಮೈನಿಂಗ್‌ ಕಂಪನಿ ಮಾಲೀಕ ಚೇತನ್‌ ಷಾ ಮತ್ತು ಲಾಲ್‌ ಮಹಲ್‌ ಕಂಪನಿ ಮಾಲೀಕ ಪ್ರೇಮಚಂದ್‌ ಗರಗ್‌ ಅವರನ್ನು ಅಪರಾಧಿಗಳು ಎಂದು ಸಿಸಿಎಚ್‌–82ನೇ ಸೆಷನ್ಸ್‌ ನ್ಯಾಯಾಲಯ 24ರಂದು ತೀರ್ಮಾನಿಸಿತ್ತು.

ಶಿಕ್ಷೆಯ ಪ್ರಮಾಣವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ’ಯ 82ನೇ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌ ಶನಿವಾರ ನ್ಯಾಯಾಲಯದಲ್ಲಿ ಪ್ರಕಟಿಸಿದರು.

ಎಲ್ಲ ಅಪರಾಧಿಗಳಿಗೆ ಭಾರತೀಯ ದಂಡ ಸಂಹಿತೆ–1860ರ (ಐಪಿಸಿ) ಕಲಂ 379ರ ಅಡಿ ಕಳವು ಅಪರಾಧಕ್ಕೆ 3 ವರ್ಷ, 120-ಬಿಯ ಕ್ರಿಮಿನಲ್‌ ಪಿತೂರಿಗೆ 5 ವರ್ಷ ಹಾಗೂ 420ರ ವಂಚನೆ ಅಡಿಯ ಅಪರಾಧಕ್ಕೆ 7 ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಲಾಗಿದೆ.ಎಲ್ಲ ಶಿಕ್ಷೆಗಳೂ ಏಕಕಾಲಕ್ಕೆ ಜಾರಿಯಾಗುವ ಕಾರಣ ಗರಿಷ್ಠ 7 ವರ್ಷಗಳ ಜೈಲು ಶಿಕ್ಷೆಯೇ ಅಂತಿಮ ಪರಿಗಣನೆಗೆ ಬರಲಿದೆ. ಐಪಿಸಿ ಕಲಂ 420ರ ವಂಚನೆ ಅಪರಾಧದ ಅಡಿ ಸತೀಶ್‌ ಸೈಲ್‌ಗೆ ಎಲ್ಲ ಆರು ಪ್ರಕರಣಗಳಲ್ಲಿ ಏಳು ವರ್ಷಗಳ ಗರಿಷ್ಠ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹೇಶ್‌ ಜೆ.ಬಿಳಿಯೆ ಅವರಿಗೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ–1988ರ ಕಲಂ 13(1)(ಸಿ) ಮತ್ತು (ಡಿ) ಜೊತೆಗೆ 13(2)ರ ಅಡಿಯಲ್ಲೂ ಶಿಕ್ಷೆ ವಿಧಿಸಲಾಗಿದೆ.

ಪೊಲೀಸರು ಎಲ್ಲ ಅಪರಾಧಿಗಳನ್ನು ಕೋರ್ಟ್‌ಗೆ ಖುದ್ದು ಹಾಜರುಪಡಿಸಿದ್ದರು.

ಶಿಕ್ಷೆಗೆ ಒಳಗಾದ ಅಪರಾಧಿಗಳು

* ಮಹೇಶ್‌ ಜೆ.ಬಿಳಿಯೆ

* ಶಾಸಕ ಸತೀಶ್‌ ಸೈಲ್‌

* ಖಾರದಪುಡಿ ಮಹೇಶ್‌

* ಸ್ವಸ್ತಿಕ್‌ ನಾಗರಾಜ್‌

* ಕೆ.ವಿ.ಎನ್‌.ಗೋವಿಂದರಾಜ್‌

* ಚೇತನ್‌ ಷಾ

* ಪ್ರೇಮಚಂದ್‌ ಗರಗ್‌

ಆರು ಪ್ರಕರಣ; ದಂಡ ಎಷ್ಟು?

1  ಮಹೇಶ್‌ ಜೆ.ಬಿಳಿಯೆ, ಮೆಸರ್ಸ್‌ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌ಗೆ ₹6 ಕೋಟಿ ದಂಡ.

2 ಮಹೇಶ್‌ ಜೆ.ಬಿಳಿಯೆ, ಮೆಸರ್ಸ್‌ ಆಶಾಪುರ ಮಿನೆಚೆಮ್‌ ಲಿಮಿಟೆಡ್‌ ಹಾಗೂ ಅದರ ಮಾಲೀಕ ಚೇತನ್‌ ಶಾ ಮತ್ತು ಮೆಸರ್ಸ್‌ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌ಗೆ ₹9.60 ಕೋಟಿ ದಂಡ.

3 ಮಹೇಶ್‌ ಜೆ. ಬಿಳಿಯೆ, ಮೆಸರ್ಸ್‌ ಐಎಲ್‌ಸಿ ಇಂಡಸ್ಟ್ರೀಸ್‌ ಲಿಮಿಟೆಡ್‌, ಮೆಸರ್ಸ್‌ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌ಗೆ
₹9.36 ಕೋಟಿ ದಂಡ.

‘ನ್ಯಾಯಾಂಗದ ಮೇಲೆ ವಿಶ್ವಾಸ ಮೂಡುತ್ತದೆ’

ಅದಿರು ಕದ್ದು ಸಾಗಿಸಿದ ಪ್ರಕರಣದಲ್ಲಿ ಶಿಕ್ಷೆಯಾಗಿರುವುದು ಉತ್ತಮ ಬೆಳವಣಿಗೆ. ದೊಡ್ಡ–ದೊಡ್ಡ ರಾಜಕಾರಣಿಗಳ ವಿರುದ್ಧ ತನಿಖೆ ನಡೆಸುವಾಗ ಹಲವು ಅಡೆತಡೆಗಳು ಎದುರಾಗುತ್ತಿದ್ದವು. ಈಗ ಶಿಕ್ಷೆ ಆಗಿರುವುದರಿಂದ ನ್ಯಾಯಾಂಗದ ಮೇಲೆ ಗೌರವ ಹೆಚ್ಚುತ್ತದೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗೇ ಆಗುತ್ತದೆ. ಈ ಬೆಳವಣಿಗೆಯಿಂದ ಸಾಮಾನ್ಯ ಜನರಿಗೂ ನ್ಯಾಯಾಂಗ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುತ್ತದೆ. ಈ ಅಕ್ರಮದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ. ಅವರಿಗೂ ಶಿಕ್ಷೆಯಾಗಬೇಕು.
ನ್ಯಾಯಮೂರ್ತಿ ಎನ್‌.ಸಂತೋಷ್‌ ಹೆಗ್ಡೆ, ನಿವೃತ್ತ ಲೋಕಾಯುಕ್ತ
ಮಹಾಭಾರತದಲ್ಲಿ ಹೇಳಿರುವಂತೆ, ಧರ್ಮೋ ರಕ್ಷತಿ ರಕ್ಷಿತಃ ಎಂಬ ಸಂದೇಶವನ್ನು ಸ್ಮರಿಸುತ್ತಾ ಕಾನೂನು ಮತ್ತು ನೈತಿಕತೆಯ ರಕ್ಷಣೆಯಿಂದ ಮಾತ್ರವೇ ಈ ವಿಶ್ವವನ್ನು ರಕ್ಷಿಸಲು ಸಾಧ್ಯ ಎಂಬ ನಂಬಿಕೆಯಡಿ ತೀರ್ಪು ನೀಡಿದ್ದೇನೆ
ಸಂತೋಷ ಗಜಾನನ ಭಟ್‌, ಸೆಷನ್ಸ್‌ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.