ADVERTISEMENT

ಸರ್ಕಾರ ನೈಸ್ ಯೋಜನೆ ಮುಟ್ಟುಗೋಲು ಹಾಕಿಕೊಳ್ಳಲಿ: ಟಿ.ಬಿ. ಜಯಚಂದ್ರ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2023, 15:53 IST
Last Updated 21 ಆಗಸ್ಟ್ 2023, 15:53 IST
ಟಿ.ಬಿ. ಜಯಚಂದ್ರ
ಟಿ.ಬಿ. ಜಯಚಂದ್ರ   

ಬೆಂಗಳೂರು: ‘ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ಹೆದ್ದಾರಿ ನಿರ್ಮಾಣ ಆಗಿರುವುದರಿಂದ ನೈಸ್ ರಸ್ತೆಯ ಅಗತ್ಯವಿಲ್ಲ. ಹೀಗಾಗಿ ನೈಸ್ ಯೋಜನೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ನೈಸ್ ಯೋಜನೆಗೆ ಸಂಬಂಧಿಸಿದಂತೆ ನಾನೇ 2016ರಲ್ಲಿ ಸದನ ಸಮಿತಿ ವರದಿ ಕೊಟ್ಟಿದ್ದೇನೆ. ಅದರ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಹೆಚ್ಚುವರಿ ಭೂಮಿ ಹಿಂಪಡೆಯಬೇಕೆಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ’ ಎಂದರು.

‘ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬಳಿಕ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವುದು ಸಂಪ್ರದಾಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಷ್ಟು ಹಣ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರ ಎಷ್ಟು ವೆಚ್ಚ ಮಾಡಿದೆ? ಬಾಕಿ‌ ಎಷ್ಟು‌ ಬಿಡುಗಡೆ ಮಾಡಲಿದೆ ಎಂಬ ವಿವರಗಳನ್ನು ಮುಂದಿನ ದಿನಗಳಲ್ಲಿ ಮಾಹಿತಿ‌ ಪಡೆದು ತಿಳಿಸುತ್ತೇವೆ’ ಎಂದವರು ಹೇಳಿದರು.

ADVERTISEMENT

‘ಭದ್ರಾ ಮೇಲ್ದಂಡೆ ಯೋಜನೆಯನ್ವಯ ರಾಷ್ಟ್ರೀಯ ಯೋಜನೆ ಎಂದು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿ, ಹಣ ಮೀಸಲಿಟ್ಟಿದೆ. ಆದರೆ, ಈಗ ಈ ಯೋಜನೆಗೆ ಬೇರೆ ಯೋಜನೆಯಡಿ ಹಣ ನೀಡಲು ಮುಂದಾಗಿದೆ. ಯೋಜನೆಯನ್ನು ಕೇಂದ್ರ ಸರ್ಕಾರ ಯಾವುದೇ ಮಾನದಂಡದಲ್ಲಿ ಗುರುತಿಸಲಿ. ಆದರೆ, ಯಾವುದೇ ಕಗ್ಗಂಟಿಲ್ಲದೆ ಹಣ ಬಿಡುಗಡೆ ಮಾಡಲಿ’ ಎಂದು ಆಗ್ರಹಿಸಿದ ಜಯಚಂದ್ರ, ಈ ಯೋಜನೆಗೆ ರಾಜ್ಯ ಸರ್ಕಾರ ₹ 20 ಸಾವಿರ ಕೋಟಿ ವೆಚ್ಚ ಮಾಡುತ್ತಿದೆ ಎಂದರು.

ಕೇಂದ್ರ ಪುರಸ್ಕೃತ ರಾಜ್ಯ ಸರ್ಕಾರದ ಯೋಜನೆಗಳ ಕುರಿತು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ‌ ಸಾಂಖ್ಯಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಜೊತೆ ಚರ್ಚೆ ನಡೆಸಿದ ಜಯಚಂದ್ರ, ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ರಾಜ್ಯದ ಯೋಜನೆಗಳ ಕುರಿತು ಸಮಾಲೋಚನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.