ADVERTISEMENT

ಕೈ ಶಾಸಕರ ಆಪ್ತರ ಫೋನ್‌ ಕರೆ ಕದ್ದಾಲಿಕೆ

ಭೀಮಾನಾಯ್ಕ, ಅಂಜಲಿ, ಸೌಮ್ಯಾ ಸೇರಿದಂತೆ 167 ಗಣ್ಯರ ದೂರವಾಣಿ ಸಂಖ್ಯೆಗಳ ಮೇಲೆ ನಿಗಾ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2019, 20:32 IST
Last Updated 29 ಆಗಸ್ಟ್ 2019, 20:32 IST
   

ಬೆಂಗಳೂರು: ಶಾಸಕರಾದ ಹಗರಿಬೊಮ್ಮನಹಳ್ಳಿಯ ಭೀಮಾನಾಯ್ಕ್‌, ಖಾನಾಪುರದ ಅಂಜಲಿ ನಿಂಬಾಳ್ಕರ್‌, ಜಯನಗರದ ಸೌಮ್ಯಾರೆಡ್ಡಿ, ದಾಸರಹಳ್ಳಿ ಮಂಜುನಾಥ್‌ ಅವರ ಆಪ್ತ ಸಹಾಯಕರು ಮತ್ತು ಆತ್ಮೀಯರು ಸೇರಿದಂತೆ ಪ್ರಭಾವಿ ರಾಜಕಾರಣಿಗಳ ಜತೆ ಒಡನಾಟ ಹೊಂದಿರುವ 167 ಜನರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಗಿದೆ ಎಂದು ಗೊತ್ತಾಗಿದೆ.

ಫೆಬ್ರುವರಿ ಮೊದಲ ವಾರ ಗುರುಮಠಕಲ್‌ ಶಾಸಕ ನಾಗನಗೌಡರ ಪುತ್ರ ಶರಣಗೌಡ ಅವರ ಜತೆ ಮುಖ್ಯಮಂತ್ರಿ (ಆಗ ವಿರೋಧ ಪಕ್ಷದ ನಾಯಕ) ಬಿ.ಎಸ್‌. ಯಡಿಯೂರಪ್ಪ ಅವರು ದೂರವಾಣಿಯಲ್ಲಿ ಮಾತನಾಡಿದ್ದನ್ನು ಕದ್ದಾಲಿಸಲಾಗಿತ್ತು.ಶರಣಗೌಡರು ಕರೆಯನ್ನು ರೆಕಾರ್ಡ್‌ ಮಾಡಿರಲಿಲ್ಲ. ಬದಲಿಗೆ, ದೂರವಾಣಿ ಸೇವಾ ಸೌಲಭ್ಯ ಒದಗಿಸಿದ ಸಂಸ್ಥೆಯ ಸಹಕಾರದಿಂದ ರೆಕಾರ್ಡ್‌ ಮಾಡಲಾಗಿತ್ತು ಎಂದು ಉನ್ನತ ಮೂಲಗಳು ತಿಳಿಸಿವೆ.

ಇದಾದ ಬಳಿಕ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಮಿತ್ರ ಪಕ್ಷಗಳ ನಾಯಕರು ಎಚ್ಚೆತ್ತುಕೊಂಡರು. ಇದರಿಂದಾಗಿ ಹಿಂದಿನ ಸರ್ಕಾರ ಜುಲೈ ಮೂರನೇ ವಾರದವರೆಗೂ ಉಳಿಯಿತು. ಇಲ್ಲದಿದ್ದರೆ, ಫೆಬ್ರುವರಿಯಲ್ಲೇ ಬಿದ್ದು ಹೋಗುತಿತ್ತು ಎಂದೂ ಮೂಲಗಳು ಸ್ಪಷ್ಟಪಡಿಸಿವೆ. ಸರ್ಕಾರ ಉರುಳಿಸಲು ಬಿಜೆಪಿ ಜೊತೆ ಕೈಜೋಡಿಸಿ, ಅನರ್ಹಗೊಂಡಿರುವ 17 ಶಾಸಕರು, ಕಮಲ ಪಾಳಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದ 12 ಶಾಸಕರು ಹಾಗೂ ಅವರ ಆಪ್ತರ ದೂರವಾಣಿ ಕರೆಗಳನ್ನು ಕದ್ದಾಲಿಸಲಾಯಿತು. ಇದರಿಂದಾಗಿಯೇ ಕೆಲವರ ‘ಮನವೊಲಿಸಿ’ ಪಕ್ಷದಲ್ಲೇ ಉಳಿಸಿಕೊಳ್ಳಲಾಯಿತು ಎಂದೂ ಮೂಲಗಳು ವಿವರಿಸಿವೆ. ಬಿಜೆಪಿ ನಾಯಕರ ಜತೆ ಸಂಪರ್ಕದಲ್ಲಿದ್ದ ಭೀಮಾನಾಯ್ಕ್‌ ಅವರಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಇದರ ನಡುವೆಯೇ ಎಚ್‌.ಡಿ. ರೇವಣ್ಣ ಅವರೂ ಲಾಬಿ ಮಾಡಿದ್ದರು. ಇದರಿಂದ ಬೇಸತ್ತ ಭೀಮಾನಾಯ್ಕ್‌ ಪಕ್ಷ ತ್ಯಜಿಸುವ ತೀರ್ಮಾನಕ್ಕೆ ಬಂದಿದ್ದರು. ದೂರವಾಣಿ ಸಂಭಾಷಣೆ ಕದ್ದು ಕೇಳಿದ್ದರಿಂದಾಗಿ ಎಲ್ಲರ ಚಲನವಲನವೂ ತಿಳಿಯುತಿತ್ತು ಎನ್ನಲಾಗಿದೆ.

ADVERTISEMENT

ಬೆಂಗಳೂರು ಪೊಲೀಸ್‌ ಕಮಿಷನರ್‌ ಭಾಸ್ಕರರಾವ್‌ ಅವರ ದೂರವಾಣಿ ಕರೆಗಳನ್ನು ಕದ್ದಾಲಿಸಿದ ಸುದ್ದಿ ಬಯಲಾಗುತ್ತಿದ್ದಂತೆ, ರಾಜಕೀಯ ಮುಖಂಡರ ಸಂಭಾಷಣೆಗಳನ್ನು ಕದ್ದು ಕೇಳಿಸಿಕೊಳ್ಳಲಾಗಿದೆ ಎಂದು ಕೇಳಿಬಂದ ಆರೋಪ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಆನಂತರ, ಸರ್ಕಾರ 2018ರ ಆಗಸ್ಟ್‌ 1ರಿಂದ ಈ ತಿಂಗಳ 19ರವರೆಗಿನ ದೂರವಾಣಿ ಕದ್ದಾಲಿಕೆ ಕುರಿತು ಸಿಬಿಐ ತನಿಖೆಗೆ ಆದೇಶಿಸಿದೆ.

ಫೋನ್‌ ಕದ್ದಾಲಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐಗೆ ಹಸ್ತಾಂತರಿಸಲು ಪೊಲೀಸರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಪೊಲೀಸರ ‘ತಲೆದಂಡ‘!
ದೂರವಾಣಿ ಕದ್ದಾಲಿಕೆಗೆ ಸಂಬಂಧಿಸಿದಂತೆ ಕೆಲವು ಪೊಲೀಸ್‌ ಅಧಿಕಾರಿಗಳ ‘ತಲೆದಂಡ’ ಆಗುವ ಸಾಧ್ಯತೆ ಇದೆ.

‘ಫೋನ್‌ ಕದ್ದಾಲಿಕೆಗೆ ಒಪ್ಪಿಗೆ ಪಡೆಯುವ ಮುನ್ನ ನಿರ್ದಿಷ್ಟ ಕಾರಣ ಕೊಡಬೇಕು. ಆದರೆ, ರಾಜ್ಯ ಸರ್ಕಾರಕ್ಕೆ ಹತ್ತಿರದಲ್ಲಿದ್ದ ಕೆಲ ಅಧಿಕಾರಿಗಳುಹಿಂದುಮುಂದು ನೋಡದೆ ಫೋನ್‌ ಕದ್ದಾಲಿಕೆಗೆ ಸಹಕಾರ ನೀಡಿದ್ದಾರೆ’ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಯಾರ ಫೋನ್‌ಗಳನ್ನು ಕದ್ದಾಲಿಸಬೇಕೆಂದುಕೆಳಹಂತದ ಪೊಲೀಸ್‌ ಅಧಿಕಾರಿಗಳು ದಾಖಲೆ ಸಿದ್ಧಪಡಿಸುತ್ತಾರೆ. ಅದನ್ನು ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಹಾಗೂ ಪೊಲೀಸ್‌ ಕಮಿಷನರ್‌ ಅವರ ಶಿಫಾರಸಿನೊಂದಿಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾಗುತ್ತದೆ. ಅವರು ಇದಕ್ಕೆ ಒಪ್ಪಿಗೆ ಕೊಡುತ್ತಾರೆ. ಆದರೆ, ಅವರಿಗೆ ದೂರವಾಣಿ ಸಂಖ್ಯೆಗಳನ್ನು ಮಾತ್ರ ಕಳುಹಿಸಲಾಗುತ್ತದೆ ವಿನಾ ಹೆಸರು ಮತ್ತು ವಿವರಗಳನ್ನು ಕೊಡುವುದಿಲ್ಲ ಎಂದೂ ಮೂಲಗಳು ಹೇಳಿವೆ. ಈ ಬಗ್ಗೆ ಪ್ರತಿಕ್ರಿಯೆಗೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಿಗಲಿಲ್ಲ.

ಇನ್ನಷ್ಟು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.