ADVERTISEMENT

ಕಾಂಗ್ರೆಸ್‌ಗೆ ಸಂವಿಧಾನ, ಅಂಬೇಡ್ಕರ್‌ ಬಗ್ಗೆ ತಿರಸ್ಕಾರವಿತ್ತು: ಬೊಮ್ಮಾಯಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 11:15 IST
Last Updated 26 ನವೆಂಬರ್ 2024, 11:15 IST
ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ   

ಬೆಂಗಳೂರು: ಕಾಂಗ್ರೆಸ್‌ಗೆ ಆರಂಭದಿಂದಲೂ ಸಂವಿಧಾನ ಮಾತ್ರವಲ್ಲದೇ, ಶ್ರೇಷ್ಠ ಸಂವಿಧಾನ ಕೊಟ್ಟ ಡಾ. ಅಂಬೇಡ್ಕರ್ ಅವರ ಬಗ್ಗೆ ತಿರಸ್ಕಾರವಿತ್ತು. ಆದ್ದರಿಂದಲೇ ಕಾಂಗ್ರೆಸ್‌ ಆಡಳಿತದಲ್ಲಿ ಸಂವಿಧಾನದ ಮೂಲ ಆಶಯವನ್ನು ಬದಲಿಸುವ ಪ್ರಯತ್ನ ಮಾಡಿತ್ತು ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಸಂವಿಧಾನ ದಿನಾಚರಣೆಯ ಪ್ರಯುಕ್ತ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾದ ‘ಸಂವಿಧಾನ ಸನ್ಮಾನ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂವಿಧಾನದ ಮೂಲ ರಚನೆಯನ್ನೇ ಬದಲಿಸಲು ಮುಂದಾದಾಗ ಅದನ್ನು ಕೇರಳದ ಕೇಶವಾನಂದ ಭಾರತೀ ಸ್ವಾಮಿಜಿ ಸುಪ್ರೀಂಕೋರ್ಟ್‌ನ ಸಂವಿಧಾನಪೀಠದಲ್ಲಿ ಪ್ರಶ್ನಿಸಿದರು. ಸಂವಿಧಾನದ ಮೂಲ ರಚನೆಯನ್ನು ಬದಲಿಸಬಾರದು ಎಂದು ಸುಪ್ರೀಂಕೋರ್ಟ್‌ ಹೇಳಿತ್ತು ಎಂದು ಬೊಮ್ಮಾಯಿ ವಿವರಿಸಿದರು.

ADVERTISEMENT

ಇದರಿಂದಾಗಿ ಸಂವಿಧಾನ ಬದಲಿಸುವ ಕಾಂಗ್ರೆಸ್‌ನ ಮೊದಲ ಪ್ರಯತ್ನಕ್ಕೆ ಹಿನ್ನಡೆ ಆಗಿತ್ತು. ಆ ಬಳಿಕ ಕಾಂಗ್ರೆಸ್‌ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿತ್ತು. ವ್ಯಕ್ತಿಯ ಸ್ವಾತಂತ್ರ್ಯ, ಸಾರ್ವಜನಿಕ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾಧ್ಯಮಗಳ ಸ್ವಾತಂತ್ರ್ಯವೂ ಸೇರಿ ಎಲ್ಲ ರೀತಿಯ ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಮೊಟಕುಗೊಳಿಸಿದ್ದರು. ಇಂದಿರಾ ಗಾಂಧಿ ಅವರ ಪ್ರಧಾನಿ ಕುರ್ಚಿ ಉಳಿಸುವ ಸಲುವಾಗಿ, ವೈಯಕ್ತಿಕ ಕಾರಣಗಳಿಗಾಗಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿದರು ಎಂದರು.

ರಾಜೀವ್‌ಗಾಂಧಿಯವರು ಪ್ರಧಾನಿ ಆಗಿದ್ದಾಗ ಶಾಬಾನೊ ಪ್ರಕರಣದಲ್ಲಿ ಹೆಣ್ಣು ಮಕ್ಕಳ ಜೀವನೋಪಾಯ ಕೊಡುವುದನ್ನು ವಿರೋಧಿಸಿ ಸಂವಿಧಾನ ತಿದ್ದುಪಡಿ ಮಾಡಿದ್ದರು. ಸುಪ್ರೀಂಕೋರ್ಟ್‌ ಆದೇಶ ಜಾರಿ ಆಗದಂತೆ ನೋಡಿಕೊಂಡರು ಎಂದು ಬೊಮ್ಮಾಯಿ ಇತಿಹಾಸ ಮೆಲುಕು ಹಾಕಿದರು.

ಕಾಂಗ್ರೆಸ್‌ ಪಕ್ಷವು ಸಂವಿಧಾನವನ್ನೇ ಬುಡಮೇಲು ಮಾಡಲು ಮಂದಾಗಿದ್ದರೆ, ಸಂವಿಧಾನ ಉಳಿಸುವ ಕೆಲಸವನ್ನು ಸುಪ್ರೀಂಕೋರ್ಟ್‌ ಮಾಡಿದೆ. ಕೇಶವಾನಂದ ಭಾರತೀಯವರ ತೀರ್ಪು ಮತ್ತು ಎಸ್‌.ಆರ್‌.ಬೊಮ್ಮಾಯಿಯವರ ಒಕ್ಕೂಟ ವ್ಯವಸ್ಥೆ ಕುರಿತ ತೀರ್ಪಿನಿಂದ ಸಂವಿಧಾನದ ರಕ್ಷಣೆಯಾಗಿದೆ. ಖಾಲಿ ಪುಟಗಳ ಸಂವಿಧಾನ ಎಂಬುದು ಸಂವಿಧಾನದ ಕುರಿತ ಕಾಂಗ್ರೆಸ್ಸಿನ ಶೂನ್ಯ ನಂಬಿಕೆಯನ್ನು ತಿಳಿಸುತ್ತದೆ ಎಂದರು.

ಭಾರತವು ಯಶಸ್ವಿ ದೇಶವಾಗಲು ಸಂವಿಧಾನವು ಯಶಸ್ವಿಯಾಗಬೇಕು ಮತ್ತು ಸಂವಿಧಾನದ ಆಶಯಗಳು ಈಡೇರಬೇಕು. ಸ್ವಾತಂತ್ರ್ಯಾನಂತರದಲ್ಲಿ ಸಂವಿಧಾನ ರಚನೆ ಬಹು ದೊಡ್ಡ ಸವಾಲಾಗಿತ್ತು. ಆಗ ಸಂವಿಧಾನ ಸಮಿತಿಯು ಸುದೀರ್ಘ- ಎಲ್ಲ ಆಯಾಮಗಳಲ್ಲಿ ಚರ್ಚೆ ಮಾಡಿ, ಬಾಬಾಸಾಹೇಬ ಅಂಬೇಡ್ಕರರ ಮಾನವೀಯ ತತ್ವಗಳನ್ನು ಸೇರಿಸಿದ್ದರಿಂದ ನಮ್ಮ ಸಂವಿಧಾನವು ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನ ಎನಿಸಿದೆ ಎಂದು ಅವರು ವಿಶ್ಲೇಷಣೆ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನಪರಿಷತ್ ವಿರೋಧಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.