ಬೆಂಗಳೂರು: ರಾಜೀನಾಮೆ ಕೊಟ್ಟ ಹಾಗೂ ಅನರ್ಹಗೊಂಡ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ಸದ್ಯದಲ್ಲೇ ನಡೆಯಲಿದೆ ಎಂಬ ಸುಳಿವು ಸಿಕ್ಕಿರುವ ಕಾಂಗ್ರೆಸ್ ನಾಯಕರು, ಕೈಕೊಟ್ಟವರಿಗೆ ಪಾಠ ಕಲಿಸಲು ಚುನಾವಣಾ ತಯಾರಿ ನಡೆಸಿದ್ದಾರೆ.
ರಾಜೀನಾಮೆ ಕೊಟ್ಟಿದ್ದ ರಮೇಶ ಜಾರಕಿಹೊಳಿ(ಗೋಕಾಕ), ಮಹೇಶ ಕುಮಠಳ್ಳಿ(ಅಥಣಿ) ಹಾಗೂ ಪಕ್ಷಾಂತರ ಮಾಡಿದ್ದ ಆರೋಪದ ಮೇಲೆ ಆರ್.ಶಂಕರ್(ರಾಣೆಬೆನ್ನೂರು) ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸಭಾಧ್ಯಕ್ಷ ಕೆ.ಆರ್. ರಮೇಶ್ ಕುಮಾರ್ ತೀರ್ಪು ಕೊಟ್ಟಿದ್ದಾರೆ. ಇನ್ನೂ 14 ಶಾಸಕರ ವಿಚಾರಣೆ ಸಭಾಧ್ಯಕ್ಷರ ಮುಂದಿದೆ.
ಇವರೆಲ್ಲರೂ ಅನರ್ಹಗೊಳ್ಳಬಹುದು ಅಥವಾ ಅವರಲ್ಲಿ ಕೆಲವರ ರಾಜೀನಾಮೆ ಅಂಗೀಕಾರವಾಗಬಹುದು. ಏನೇ ಆದರೂ ಈ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲೇಬೇಕಿದೆ ಎಂಬುದು ಕಾಂಗ್ರೆಸ್ ಅಂದಾಜು. ಒಟ್ಟು 17 ಕ್ಷೇತ್ರಗಳ ಪೈಕಿ 13ರಲ್ಲಿ ಕಾಂಗ್ರೆಸ್ ಗೆದ್ದಿತ್ತು. ರಾಣೆಬೆನ್ನೂರಿನಲ್ಲಿ ಗೆದ್ದಿದ್ದ ಶಂಕರ್ ತಮ್ಮ ಕೆಪಿಜೆಪಿ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ್ದರು. ಈ ಎಲ್ಲ ಕ್ಷೇತ್ರಗಳನ್ನು ಮತ್ತೆ ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ನಾಯಕರು ಅಭ್ಯರ್ಥಿ ಹುಡುಕಾಟ, ಪಕ್ಷ ಬಲವರ್ಧನೆಗೆ ಮುಂದಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಈ ಕುರಿತು ಹಲವು ಸುತ್ತಿನ ಸಭೆ ನಡೆಯಿತು. ಪಕ್ಷದ ಮುಖಂಡರು ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಪಕ್ಷದ ಚಿಹ್ನೆಯಡಿ ಗೆದ್ದು ಅಧಿಕಾರ, ಹಣದ ಆಸೆಗಾಗಿ ಕೈಕೊಟ್ಟು ಬಿಜೆಪಿ ಜತೆಗೆ ಹೋಗಿರುವವರಿಗೆ ಪಾಠ ಕಲಿಸಬೇಕು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಬಾರದು. ಮುಂದೆ ಹೋಗುವವರಿಗೂ ಇದು ಎಚ್ಚರಿಕೆಯಾಗಬೇಕು. ವಿಚಾರಣೆ ಎದುರಿಸುತ್ತಿರುವ 14 ಶಾಸಕರನ್ನು ಅನರ್ಹಗೊಳಿಸುವಂತೆ ಸಭಾಧ್ಯಕ್ಷರಿಗೆ ಮನವರಿಕೆ ಮಾಡಿ, ಅವರಿಗೆ ಮನವಿ ಮಾಡುವ ಕೆಲಸವನ್ನು ಮಾಡಬೇಕು ಎಂಬ ಚರ್ಚೆ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಕೈಕೊಟ್ಟು ಹೋಗಿರುವ ಕಾಂಗ್ರೆಸ್ ಶಾಸಕರ ಕ್ಷೇತ್ರಗಳ ಜತೆಗೆ ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿರುವ ಕ್ಷೇತ್ರಗಳಲ್ಲೂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಗ್ಗೆಯೂ ಚರ್ಚೆ ನಡೆದಿದೆ.
2018ರಲ್ಲಿ ನಡೆದ ವಿಧಾನಸಭೆ ಚುನಾವಣೆಗೆ ಮುನ್ನ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಗಡಿಯ ಎಚ್.ಸಿ. ಬಾಲಕೃಷ್ಣ ಹಾಗೂ ನಾಗಮಂಗಲದ ಎನ್. ಚಲುವರಾಯಸ್ವಾಮಿ ಅವರಿಗೆ ರಾಜಕೀಯ ಮರು ಹುಟ್ಟು ನೀಡುವ ಬಗ್ಗೆ ಸಮಾಲೋಚನೆ ನಡೆದಿದೆ.
ರಾಜೀನಾಮೆ ಕೊಟ್ಟಿರುವ ಜೆಡಿಎಸ್ ಶಾಸಕ ನಾರಾಯಣಗೌಡ ಪ್ರತಿನಿಧಿಸುವ ಕೆ.ಆರ್.ಪೇಟೆಯಲ್ಲಿ ಚಲುವರಾಯಸ್ವಾಮಿ ಹಾಗೂ ಕೆ.ಗೋಪಾಲಯ್ಯ ಪ್ರತಿನಿಧಿಸುವ ಮಹಾಲಕ್ಷ್ಮಿ ಲೇಔಟ್‌ನಲ್ಲಿ ಎಚ್.ಸಿ. ಬಾಲಕೃಷ್ಣ ಅವರಿಗೆ ಟಿಕೆಟ್ ನೀಡುವ ಕುರಿತು ಚರ್ಚೆಯಾಗಿದೆ ಎಂದು ಮೂಲಗಳು ಹೇಳಿವೆ.
ಶಿವಾಜಿನಗರದಿಂದ ರಿಜ್ವಾನ್ ಅರ್ಷದ್?
ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿರುವ ಕಾಂಗ್ರೆಸ್‌ನ ಆರ್. ರೋಷನ್ ಬೇಗ್ ಪ್ರತಿನಿಧಿಸುವ ಶಿವಾಜಿನಗರದಿಂದ ಕಣಕ್ಕೆ ಇಳಿಯಲು ಸಜ್ಜಾಗುವಂತೆ ವಿಧಾನಪರಿಷತ್ತಿನ ಸದಸ್ಯ ರಿಜ್ವಾನ್ ಅರ್ಷದ್‌ಗೆ ಪಕ್ಷ ಸೂಚನೆ ನೀಡಿದೆ.
2014 ಹಾಗೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದಿಂದ ಸ್ಪರ್ಧಿಸಿದ್ದ ರಿಜ್ವಾನ್ ಪರಾಭವಗೊಂಡಿದ್ದರು. ಎರಡು ಚುನಾವಣೆಯಲ್ಲಿ ಸ್ಪರ್ಧಿಸಿ ಒಂದಿಷ್ಟು ಪರಿಚಿತರಾಗಿರುವ ರಿಜ್ವಾನ್ ಅವರನ್ನುಮುಸ್ಲಿಂ ಮತ ಬಾಹುಳ್ಯವಿರುವ ಶಿವಾಜಿನಗರದಲ್ಲಿ ಕಣಕ್ಕೆ ಇಳಿಸಿದರೆ ತೀವ್ರ ಸ್ಪರ್ಧೆ ಒಡ್ಡಬಹುದು ಎಂಬ ಲೆಕ್ಕಾಚಾರ ಕಾಂಗ್ರೆಸ್ ನಾಯಕರದ್ದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.