ADVERTISEMENT

ಲೋಕಸಭೆ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು: ’ಮೈತ್ರಿ’ ಮುರಿದವರಿಗೆ ಆಪರೇಷನ್ ಹಸ್ತ?

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2023, 22:30 IST
Last Updated 17 ಆಗಸ್ಟ್ 2023, 22:30 IST
ಕಾಂಗ್ರೆಸ್‌ (ಕಡತ ಚಿತ್ರ)
ಕಾಂಗ್ರೆಸ್‌ (ಕಡತ ಚಿತ್ರ)   

ಬೆಂಗಳೂರು: ‘ಆಪರೇಷನ್‌ ಕಮಲ’ದ ಪರಿಣಾಮ ಬಿಜೆಪಿ ತೆಕ್ಕೆಗೆ ಜಾರಿ ಜೆಡಿಎಸ್‌– ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಕಾಂಗ್ರೆಸ್‌ ಶಾಸಕರ ಪೈಕಿ ಎಸ್‌.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌, ಮುನಿರತ್ನ, ಬೈರತಿ ಬಸವರಾಜ್, ಕೆ. ಗೋಪಾಲಯ್ಯ ಮರಳಿ ‘ಕೈ’ ಹಿಡಿಯಲು ಮುಂದಾಗಿದ್ದಾರೆಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮಾತೃ ಪಕ್ಷಕ್ಕೆ ಮರಳುವ ಬಗ್ಗೆ ಈ ಶಾಸಕರು ಬಹಿರಂಗವಾಗಿ ಹೇಳಿಕೊಳ್ಳದಿದ್ದರೂ, ಇತ್ತೀಚಿನ ಕೆಲವು ಬೆಳವಣಿಗೆಗಳು ಎಸ್‌.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಮತ್ತು ಮುನಿರತ್ನ ಕಾಂಗ್ರೆಸ್‌ನತ್ತ ವಾಲುತ್ತಿರುವ ವದಂತಿಗಳಿಗೆ ಕಾರಣವಾಗಿದೆ.‌ 

ಮತ್ತೊಂದೆಡೆ, ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಪಣ ತೊಟ್ಟಿರುವ‌ ಕಾಂಗ್ರೆಸ್‌ ನಾಯಕರು, ಪಕ್ಷದ ಕಡೆ ಒಲವು ಹೊಂದಿರುವ ಬಿಜೆಪಿ, ಜೆಡಿಎಸ್‌ ಶಾಸಕರನ್ನು, ಮಾಜಿ ಶಾಸಕರನ್ನು, ಮುಖಂಡ‌ರನ್ನು ಸೆಳೆಯಲು ಉತ್ಸುಕತೆ ಹೊಂದಿರುವುದು, ಇತರ ಪಕ್ಷಗಳ ಶಾಸಕರು ಕಾಂಗ್ರೆಸ್‌ ಸೇರುವ ಕುರಿತ ಬೆಳವಣಿಗೆಗಳಿಗೆ ಪುಷ್ಠಿ ನೀಡಿದೆ.

ADVERTISEMENT

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಎಸ್‌.ಟಿ. ಸೋಮಶೇಖರ್‌, ಶಿವರಾಮ ಹೆಬ್ಬಾರ್‌ ಮತ್ತು ಮುನಿರತ್ನ ಇತ್ತೀಚೆಗೆ ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಎಸ್.ಟಿ ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಕಾಂಗ್ರೆಸ್‌ಗೆ ಮರಳುವುದು ಬಹುತೇಕ ಖಚಿತ ಎನ್ನುತ್ತವೆ ಅವರಿಬ್ಬರ ಆಪ್ತ ವಲಯ‌. ಬೈರತಿ ಬಸವರಾಜ್ ಮತ್ತು ಗೋಪಾಲಯ್ಯ ಅವರ ಸೇರ್ಪಡೆ ಕುರಿತು ಚರ್ಚೆ ಮುಂದುವರೆದಿದೆ ಎಂದು ಹೇಳಲಾಗಿದೆ.

ಮುನಿರತ್ನ ಅವರನ್ನು ಮರಳಿ ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್‌ ನಾಯಕರು ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಅವರು ತಮ್ಮ ರಾಜರಾಜೇಶ್ವರಿ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಚರ್ಚಿಸಲು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ ಎಂಬ ಮಾಹಿತಿಯೂ ಇದೆ.

ಈ ನಡುವೆ, ಉತ್ತರ ಕರ್ನಾಟಕ ಭಾಗದ ಬಿಜೆಪಿಯ ಕೆಲವು ಮಾಜಿ ಶಾಸಕರನ್ನೂ ಸೆಳೆಯಲು ಕಾಂಗ್ರೆಸ್‌ ಮುಂದಾಗಿದೆ. ‌ಜಗದೀಶ ಶೆಟ್ಟರ್‌ ಅವರ ಆಪ್ತರಾಗಿರುವ ಮಾಜಿ ಸಚಿವರೊಬ್ಬರು ಈಗಾಗಲೇ ಕಾಂಗ್ರೆಸ್‌ ಸೇರಲು ಒಲವು ತೋರಿದ್ದಾರೆ. ಅಲ್ಲದೆ, ಬಿಜೆಪಿ ತೊರೆದು ಜೆಡಿಎಸ್‌ ಸೇರಿರುವ ಮಾಜಿ ಶಾಸಕ ಮತ್ತು ಸಂಸದರೊಬ್ಬರು ಕೂಡಾ ಕಾಂಗ್ರೆಸ್‌ ಸೇರಲು ಮುಂದಾಗಿದ್ದಾರೆಂಬ ಮಾಹಿತಿಯೂ ಇದೆ.

ಈ ಎಲ್ಲ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ. ಪರಮೇಶ್ವರ, ‘ಎಸ್‌.ಟಿ. ಸೋಮಶೇಖರ್‌  ಕಾಂಗ್ರೆಸ್‌ಗೆ ದುಡಿದವರು. ಕಾಂಗ್ರೆಸ್‌ ಪಕ್ಷದಲ್ಲಿಯೇ ಇರುತ್ತಿದ್ದರೆ ಅವರಿಗೂ ಈಗ ಸಚಿವ ಸ್ಥಾನ ಸಿಗಬಹುದಿತ್ತೇನೊ. ಈಗ ಅವರಿಗೆ ಆ ಪಕ್ಷದಲ್ಲಿ ಬೇಸರವಾಗಿದೆ. ಕಾಂಗ್ರೆಸ್‌ಗೆ ವಾಪಸ್ ಬರುತ್ತೇನೆಂದು ನಮ್ಮ ನಾಯಕರ ಜೊತೆ ಮಾತಾಡಿದರೆ ನಾವೆಲ್ಲ ಒಪ್ಪುತ್ತೇವೆ. ಅಡ್ಡಿ ಮಾಡುವುದಿಲ್ಲ. ರಾಜಕೀಯದಲ್ಲಿ ಎಲ್ಲವೂ ಸಾಧ್ಯವಾಗಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.