ಬೆಂಗಳೂರು: ಸಂವಿಧಾನ ಬದಲಾವಣೆ ವಿಚಾರವಾಗಿ ಸಂಸದ ಅನಂತಕುಮಾರ್ ಹೆಗಡೆ ನೀಡಿದ ಹೇಳಿಕೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಭವನದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ನೂರಾರು ಕಾರ್ಯಕರ್ತರು, ಹೆಗಡೆ ಬಂಧನಕ್ಕೆ ಆಗ್ರಹಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ‘ದೇಶದ್ರೋಹಿ ಬಿಜೆಪಿ’, ‘ಸಂವಿಧಾನ ವಿರೋಧಿ ಬಿಜೆಪಿ’ ಎಂದು ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಮಾತನಾಡಿ, ‘ಅನಂತಕುಮಾರ್ ಹೆಗಡೆ ಪ್ರತಿಬಾರಿಯೂ ಈ ರೀತಿ ಹೇಳಿಕೆ ಕೊಟ್ಟು ಗದ್ದಲ ಎಬ್ಬಿಸುತ್ತಾರೆ. ಚುನಾಯಿತ ಪ್ರತಿನಿಧಿಯಾಗಿ ಸಂಸತ್‌ನಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣವಚನ ತೆಗೆದುಕೊಂಡಿರುವ ಅವರಿಗೆ ಸಂವಿಧಾನದ ಬಗ್ಗೆ ಮಾತನಾಡಲು ನೈತಿಕ ಹಕ್ಕು ಇಲ್ಲ’ ಎಂದರು.
‘ರಾಜಕೀಯವಾಗಿ ತಮ್ಮ ಪಕ್ಷದ ಒಬ್ಬ ನಾಯಕ ಮಾತನಾಡುತ್ತಿದ್ದರೆ ಬಿಜೆಪಿ ನಾಯಕರು ಸುಮ್ಮನೆ ಕುಳಿತಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಘಟಕದ ಅಧ್ಯಕ್ಷರು ಈ ಬಗ್ಗೆ ಗಮನಹರಿಸಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತೇನೆಂದು ಪ್ರಮಾಣ ವಚನ ಸ್ವೀಕರಿಸಿರುವ ಹೆಗಡೆ, ಅದನ್ನು ಮರೆತಿರುವುದು ಶೋಭೆ ತರುವಂಥದ್ದಲ್ಲ’ ಎಂದರು.
‘ಅನಂತಕುಮಾರ್ ಹೆಗಡೆ ಮೇಲೆ ಕ್ರಮ ತೆಗೆದುಕೊಳ್ಳಲು ಬಿಜೆಪಿ ನಾಯಕರು ಹಿಂದೇಟು ಹಾಕಿದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ’ ಎಂದೂ ಮುನಿಯಪ್ಪ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.