ADVERTISEMENT

ಕಾಂಗ್ರೆಸ್‌ನಿಂದ ಕನ್ನಡಿಗರಿಗೆ ಬೆಲೆ ಏರಿಕೆ ಶಿಕ್ಷೆ: ಅಶೋಕ ಟೀಕೆ

ಗ್ಯಾರಂಟಿಗಳಿಂದಾಗಿ ಸರ್ಕಾರದ ಬಳಿ ಹಣ ಇಲ್ಲ: ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 15:26 IST
Last Updated 16 ಜೂನ್ 2024, 15:26 IST
 ಆರ್. ಅಶೋಕ 
 ಆರ್. ಅಶೋಕ    

ಬೆಂಗಳೂರು: ‘ಗ್ಯಾರಂಟಿಗಳಿಂದಾಗಿ ಸರ್ಕಾರದ ಬಳಿ ಹಣ ಇಲ್ಲ. ನೌಕರರಿಗೆ ಸಂಬಳ ಕೊಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತೈಲ ಬೆಲೆ ಏರಿಕೆ ಮಾಡಿ ₹3,000 ಕೋಟಿಯಿಂದ ₹4,000 ಕೋಟಿ ಸಂಗ್ರಹಿಸಲು ಜನ ಸಾಮಾನ್ಯರ ಮೇಲೆ ಬರೆ ಹಾಕಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಕಿಡಿಕಾರಿದರು.

‘ಬೆಲೆ ಏರಿಕೆ ಪರಿಣಾಮ ಬಸ್‌, ಆಟೊ, ಕ್ಯಾಬ್‌, ಹೋಟೆಲ್ ತಿಂಡಿಗಳ ಬೆಲೆಯೂ ಗಗನಕ್ಕೆ ಏರುತ್ತದೆ. ಕಾಂಗ್ರೆಸ್‌ ಸರ್ಕಾರ ಕನ್ನಡಿಗರನ್ನು ಶಿಕ್ಷಿಸುತ್ತಿರುವ ವಿಧಾನವಿದು. ಜನರ ತಲೆ ಮೇಲೆ ಚಪ್ಪಡಿ ಕಲ್ಲನ್ನೇ ಹಾಕಿದ್ದಾರೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

‘ಸಿದ್ದರಾಮಯ್ಯ ‘ಔಟ್‌ ಗೋಯಿಂಗ್‌ ಮುಖ್ಯಮಂತ್ರಿ’, ಹೀಗಾಗಿ ವಿಧಾನಸೌಧವನ್ನೇ ಅಡ ಇಟ್ಟರೂ ಅಚ್ಚರಿ ಇಲ್ಲ. ಅಷ್ಟರ ಮಟ್ಟಿಗೆ ರಾಜ್ಯವನ್ನು ದಿವಾಳಿ ಎಬ್ಬಿಸಿದ್ದಾರೆ. 15 ಬಾರಿ ಬಜೆಟ್‌ ಮಂಡಿಸಿದ ಅವರು ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ’ ಎಂದರು.

ADVERTISEMENT

‘ನಮ್ಮ ಅವಧಿಯಲ್ಲಿ ಸಣ್ಣ ಪ್ರಮಾಣದಲ್ಲಿ ಪೆಟ್ರೋಲ್‌– ಡೀಸೆಲ್‌ ಬೆಲೆ ಏರಿಕೆ ಮಾಡಿದಾಗ ಸಿದ್ದರಾಮಯ್ಯ– ಡಿ.ಕೆ.ಶಿವಕುಮಾರ್‌ ತಮ್ಮ ಹೆಗಲ ಮೇಲೆ ಸ್ಕೂಟರ್ ಶವಯಾತ್ರೆ ಮಾಡಿದ್ದರು. ಈಗ ಯಾವ ಯಾತ್ರೆ ಮಾಡುತ್ತಾರೆ? ಬೆಲೆ ಏರಿಕೆ ಮೂಲಕ ಬಡವರ ಮೇಲೆ ದೊಡ್ಡ ಹೊಡೆತವನ್ನೇ ಕೊಟ್ಟಿದ್ದಾರೆ. ತೈಲ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆಯೂ ಜಾಸ್ತಿ ಆಗುತ್ತದೆ. ಸಿದ್ದರಾಮಯ್ಯಗೆ ಮಾನ, ಮಾರ್ಯಾದೆ ಏನಾದರೂ ಇದೆಯಾ? ಮಾತೆತ್ತಿದರೆ ಅಶೋಕನಿಗೆ ಜ್ಞಾನ ಇಲ್ಲ ಎನ್ನುತ್ತಾರೆ. ನಿನಗೆ ಜ್ಞಾನ ಇದೆಯಾ? ನಾಚಿಕೆ ಆಗೋದಿಲ್ವಾ’ ಎಂದು ಏಕವಚದಲ್ಲೇ ಹರಿಹಾಯ್ದರು.

‘ಮುಂಬರುವ ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜನತೆ ಇವರಿಗೆ ಬುದ್ಧಿ ಕಲಿಸಲಿದ್ದಾರೆ. ನಮಗೆ ಕಾಂಗ್ರೆಸ್ಸಿಗರು ಚೊಂಬು ತೋರಿಸಿದ್ದರು. ಬಿಬಿಎಂಪಿ ಚುನಾವಣೆಯಲ್ಲಿ ಜನ ಚೊಂಬು ಕೊಡುವುದು ಶತಸಿದ್ಧ’ ಎಂದರು.

‘ಬೆಲೆ ಏರಿಕೆ ವಿಚಾರವಾಗಿ ಯಾರೂ ಬಾಯಿ ಬಿಡಬಾರದು ಎಂದು ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇವೆಲ್ಲ ನೋಡಿದರೆ ಕಾಂಗ್ರೆಸ್‌ ಸರ್ಕಾರ ಹೆಚ್ಚು ದಿನ ಇರುವುದಿಲ್ಲ ಎಂಬುದು ಖಾತರಿ ಆಗುತ್ತದೆ’ ಎಂದು ಅಶೋಕ ಹೇಳಿದರು.

ತೈಲ ದರ ಏರಿಕೆ: ರಾಜ್ಯಾದ್ಯಂತ ಪ್ರತಿಭಟನೆ

ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಸೋಮವಾರ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನ ಮತ್ತು ರಾಜ್ಯದ ಎಲ್ಲ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಾ.ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದರು. ಕಾಂಗ್ರೆಸ್‌ ಸರ್ಕಾರವು ಆಸ್ತಿ ತೆರಿಗೆ ಕುಡಿಯುವ ನೀರಿನ ದರ ವಿದ್ಯುತ್‌ ಶುಲ್ಕ ವಾಹನಗಳ ತೆರಿಗೆ ಮತ್ತು ಆಸ್ತಿ ತೆರಿಗೆಯನ್ನೂ ಹೆಚ್ಚಿಸಿದೆ. ಸಾಲ ಪಡೆಯಲು ಬ್ಯಾಂಕಿಗೆ ಹೋದರೆ ನೋಂದಣಿ ದರವನ್ನೂ ಹೆಚ್ಚಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು. ಬಿಜೆಪಿ ಆಡಳಿತ ಇರುವ ಹರಿಯಾಣದಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹95.54 ಉತ್ತರ ಪ್ರದೇಶದಲ್ಲಿ ₹94.55 ಗುಜರಾತ್‌ನಲ್ಲಿ ₹94.50 ಅಸ್ಸಾಂನಲ್ಲಿ ₹97 ಇದೆ. ಆದರೆ ಕಾಂಗ್ರೆಸ್‌ ಮತ್ತು ಅದರ ಮಿತ್ರ ಪಕ್ಷಗಳು ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಮಾತ್ರ ಪೆಟ್ರೋಲ್‌ ದರ ₹103 ರಿಂದ ₹109 ರವರೆಗೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.