ADVERTISEMENT

ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆ ಉಳಿಸಿಕೊಂಡಿಲ್ಲ: ರಮೇಶ್ ಬಾಬು

​ಪ್ರಜಾವಾಣಿ ವಾರ್ತೆ
Published 27 ಜೂನ್ 2024, 16:44 IST
Last Updated 27 ಜೂನ್ 2024, 16:44 IST
ರಮೇಶ್‌ ಬಾಬು
ರಮೇಶ್‌ ಬಾಬು   

ಬೆಂಗಳೂರು: ‘ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ನೈತಿಕತೆ ಉಳಿಸಿಕೊಂಡಿಲ್ಲ. ಅವರೊಬ್ಬ ಕಳಂಕಿತ, ಆರೋಪಗಳನ್ನು ಹೊತ್ತಿರುವ ನಾಯಕ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ‌‘ಅಶೋಕ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದಾಗ ಕೆಂಗೇರಿ ಹೋಬಳಿಯ ಬಿ.ಎಂ. ಕಾವಲಿಗೆ ಸಂಬಂಧಪಟ್ಟಂತೆ 2,500 ಎಕರೆ ಭೂಮಿ ಹಂಚಿಕೆಯಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಅಶೋಕ ಅವರ ಮೇಲೆ ಬಿಎಂಟಿಎಫ್‌ನಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದ ಸುದ್ದಿ ಮಾಧ್ಯಮಗಳಲ್ಲಿ ವರದಿ ಬರಬಾರದೆಂದು ಅವರು ತಡೆಯಾಜ್ಞೆ ತಂದಿದ್ದರು. ತಮ್ಮ ಮೇಲೆ ಬಂದಿರುವ ಆರೋಪಗಳಿಗೆ ಉತ್ತರಿಸುವ ಶಕ್ತಿ ಅವರಿಗೆ ಇಲ್ಲ’ ಎಂದರು.

‘ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡುವವರು ಆರೋಪಗಳಿಂದ ಮುಕ್ತರಾಗಿರಬೇಕು. ಆದರೆ, ಅಶೋಕ ಆರೋಪ ಮುಕ್ತರಾಗಿ ಇದ್ದಾರೆಯೇ? ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ಉಳಿಸಿಕೊಂಡಿದ್ದಾರೆಯೇ’ ಎಂದು ಪ್ರಶ್ನಿಸಿದ ರಮೇಶ್ ಬಾಬು, ‘ಬಗರ್ ಹುಕುಂ ಜಮೀನು ಹಂಚಿಕೆ ಹಗರಣದ ಕುರಿತು ಕಾಂಗ್ರೆಸ್ ಸರ್ಕಾರ ಸಮಗ್ರ ತನಿಖೆ ನಡೆಸಬೇಕು’ ಎಂದೂ ಆಗ್ರಹಿಸಿದರು.

ADVERTISEMENT

‘ವಿರೋಧ ಪಕ್ಷದ ನಾಯಕರಾಗಿ ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎನ್ನುವುದು ಅಶೋಕಗೆ ಗೊತ್ತಿಲ್ಲ. ಪ್ರಬುದ್ಧತೆ, ಪಕ್ವತೆ ಇಲ್ಲದಂತೆ ವರ್ತಿಸುತ್ತಿದ್ದಾರೆ. ಯಾವುದೇ ವಿಚಾರದ ಬಗ್ಗೆ ಇವರಿಗೆ ಸ್ಪಷ್ಟತೆ ಇಲ್ಲವಾಗಿದೆ. ಅಸಮರ್ಥ ನಾಯಕನನ್ನು ಬಿಜೆಪಿ ವಿರೋಧ ಪಕ್ಷದ ನಾಯಕನನ್ನಾಗಿ ನೇಮಿಸಿದೆ’ ಎಂದು ದೂರಿದರು.

ಕೆಪಿಸಿಸಿ ಅಧ್ಯಕ್ಷರ ರಾಜಕೀಯ ಹಾಗೂ ಸಂವಹನ ಕಾರ್ಯದರ್ಶಿ ದೀಪಕ್ ತಿಮಯ್ಯ, ಮಾಜಿ ಮೇಯರ್ ರಾಮಚಂದ್ರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.