ಬೆಂಗಳೂರು: ‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ವಿರೋಧ ಪಕ್ಷಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಶನಿವಾರ ಆರೋಪಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಚನ್ನಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಸಾವಿರಾರು ಮಂದಿ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸೇರಿದ್ದರು. ಎನ್‌ಡಿಎ ನಾಯಕರೂ ಇದ್ದರು. ಇದರಿಂದ ಕಾಂಗ್ರೆಸ್‌ಗೆ ಕಣ್ಣು ಕುಕ್ಕಿದ್ದು, ಸಭೆಗೆ ಬಂದಿದ್ದವರಿಗೆ ನೋಟಿಸ್ ನೀಡಿದ್ದಾರೆ’ ಎಂದು ಆರೋಪಿಸಿದರು.
‘ಕಾರ್ಯಕ್ರಮಕ್ಕೆ ಬಂದ ಜನರಿಗೆ, ವಾಹನಗಳಿಗೆ, ಕ್ಷೇತ್ರದ ಜೆಡಿಎಸ್ ಅಧ್ಯಕ್ಷರಿಗೆ ನೋಟಿಸ್ ನೀಡಿದ್ದಾರೆ. ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅವರೂ ಚನ್ನಪಟ್ಟಣಕ್ಕೆ ಬಂದಿದ್ದರು. ಆಗ ನೂರಾರು ವಾಹನಗಳು ಬಂದಿದ್ದವು. ಅವಕ್ಕೆಲ್ಲಾ ನೋಟಿಸ್ ನೀಡಿದ್ದಾರೆಯೇ’ ಎಂದು ಪ್ರಶ್ನಿಸಿದರು.
‘ಕಾಂಗ್ರೆಸ್, ದಬ್ಬಾಳಿಕೆ ಮೂಲಕ ಚುನಾವಣೆ ಎದುರಿಸುತ್ತಿದೆ. ಇದಕ್ಕೆಲ್ಲಾ ನಾವು ಹೆದರುವುದಿಲ್ಲ. ಜನರ ಬಳಿ ಮತ ಕೇಳುತ್ತೇವೆ. ಜನರೇ ತೀರ್ಪು ನೀಡುತ್ತಾರೆ’ ಎಂದರು.
‘ತಾವು ಮೂರೂ ಕ್ಷೇತ್ರ ಗೆದ್ದಾಗಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಅಧಿಕಾರ, ಹಣದ ದುರ್ಬಳಕೆಯಿಂದ ಗೆದ್ದಾಗಿದೆ ಎಂದು ಬೀಗುತ್ತಿದ್ದಾರೆ. ಚನ್ನಪಟ್ಟಣದಲ್ಲಿ ನಿಲ್ಲಿಸೋಕೆ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಇರಲಿಲ್ಲ. ಹೀಗಾಗಿಯೇ ಬಿಜೆಪಿ ಅಭ್ಯರ್ಥಿಯನ್ನು ಹೈಜಾಕ್ ಮಾಡಿದರು’ ಎಂದರು.
‘ನಾನು ಮಂಡ್ಯಕ್ಕೆ ಮಾತ್ರ ಸೀಮಿತ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ನನ್ನ ಸಚಿವಾಲಯದ ಕೆಲಸಗಳ ಕಾರಣಕ್ಕೆ ದೇಶದ ಹಲವು ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ನನ್ನ ಕ್ಷೇತ್ರದ ಜನರ ಕಷ್ಟ ಕೇಳಲು ಮಂಡ್ಯಕ್ಕೆ ಬರಬಾರದಾ’ ಎಂದು ಪ್ರಶ್ನಿಸಿದರು.
ನಾನು ಜನರ ಕಷ್ಟ ನೋಡಿ ಕಣ್ಣೀರು ಹಾಕುತ್ತಿದ್ದೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವತ್ತೂ ಜನರ ಎದುರು ಕಣ್ಣೀರಿಟ್ಟಿಲ್ಲವೇ?ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.