ADVERTISEMENT

ತುರ್ತು ಪರಿಸ್ಥಿತಿ:ಕಾಂಗ್ರೆಸ್‌ ಕ್ಷಮೆ ಯಾಚಿಸಲಿ: ಆರ್‌. ಅಶೋಕ

​ಪ್ರಜಾವಾಣಿ ವಾರ್ತೆ
Published 24 ಜೂನ್ 2024, 14:48 IST
Last Updated 24 ಜೂನ್ 2024, 14:48 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ‘ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಕ್ಕಾಗಿ ಕಾಂಗ್ರೆಸ್‌ ಪಕ್ಷವು ಇಡೀ ದೇಶದ ಜನರ ಕ್ಷಮೆ ಯಾಚಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆಗ್ರಹಿಸಿದರು.

ಸ್ವಾತಂತ್ರ್ಯ ಉದ್ಯಾನದ ಹಳೆ ಕಾರಾಗೃಹದ ಬಳಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ತುರ್ತು ಪರಿಸ್ಥಿತಿ ನೆನಪಿನ ಪೋಸ್ಟರ್‌ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ದೆಹಲಿಯ ರಾಮಲೀಲಾ ಮೈದಾನದಲ್ಲಿ ತಲೆಬಾಗಿ ನಿಂತು ಜನರ ಕ್ಷಮೆ ಯಾಚಿಸಬೇಕು’ ಎಂದರು.

‘ಡಾ.ಬಿ.ಆರ್‌. ಅಂಬೇಡ್ಕರ್‌ ರಚಿಸಿದ ಸಂವಿಧಾನವನ್ನು ಮೂಲೆಗೆ ತಳ್ಳಿ ಸರ್ವಾಧಿಕಾರಿ ಧೋರಣೆ ಪ್ರದರ್ಶಿಸಿದ್ದ ಕಾಂಗ್ರೆಸ್‌ ನಾಯಕಿ ಇಂದಿರಾ ಗಾಂಧಿ ಅವರು ದೇಶದಲ್ಲಿ ರಾತ್ರೋರಾತ್ರಿ ತುರ್ತು ಪರಿಸ್ಥಿತಿ ಹೇರಿದ್ದರು. ನ್ಯಾಯಾಂಗ ವ್ಯವಸ್ಥೆಯನ್ನೇ ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡು ಅಟಲ್‌ ಬಿಹಾರಿ ವಾಜಪೇಯಿ, ಎಲ್‌.ಕೆ. ಅಡ್ವಾಣಿ ಸೇರಿದಂತೆ ರಾಜಕೀಯ ನಾಯಕರು ಮತ್ತು ಪತ್ರಕರ್ತರನ್ನು ಜೈಲಿಗೆ ತಳ್ಳಿದ್ದರು’ ಎಂದು ದೂರಿದರು.

ADVERTISEMENT

‘ಆಗ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದ ನಾನು ಆರ್‌ಎಸ್‌ಎಸ್‌ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಇಂದಿರಾ ಗಾಂಧಿ ವಿರುದ್ಧ ಎರಡು ವಾಕ್ಯಗಳ ಘೋಷಣೆ ಕೂಗಿದ್ದೆ. ಪೊಲೀಸರು ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದರು’ ಎಂದು ಅಶೋಕ ನೆನಪಿಸಿಕೊಂಡರು.

‘ಸಂವಿಧಾನಕ್ಕೆ ಅಪಚಾರ ಎಸಗಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್‌ನವರು ಈಗ ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.