ADVERTISEMENT

ಲೋಕಸಭೆ ಚುನಾವಣೆ ತಯಾರಿಗೆ ಸುರ್ಜೇವಾಲ ಸೂಚನೆ ನೀಡಲಿದ್ದಾರೆ: ಸಚಿವ ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಜನವರಿ 2024, 7:54 IST
Last Updated 8 ಜನವರಿ 2024, 7:54 IST
<div class="paragraphs"><p>ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ</p></div>

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ

   

ಬೆಂಗಳೂರು: ‘ಪಕ್ಷದ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು ರಾಜ್ಯಕ್ಕೆ ಬರುತ್ತಿದ್ದು, ಇದೇ 10ರಂದು ಶಾಸಕರು, ಸಚಿವರು ಮತ್ತು ಜಿಲ್ಲಾ ಘಟಕಗಳ ಅಧ್ಯಕ್ಷರ ಜೊತೆ ಸಭೆ ನಡೆಸಲಿದ್ದಾರೆ. ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಅವರು ಸೂಚನೆ ಕೊಡಲಿದ್ದಾರೆ’ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಅವರು ಮಾತನಾಡಿದರು.

ADVERTISEMENT

ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಸಮರ್ಥನೆ: ‘ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು’ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಾಟೀಲ, ‘ಲಕ್ಷ್ಮೀ ಹೆಬ್ಬಾಳಕರ ಯಾವ ಅರ್ಥದಲ್ಲಿ ಹೇಳಿದ್ದಾರೆಂದು ಅರ್ಥ ಮಾಡಿಕೊಳ್ಳಿ’ ಎಂದು ಸಮರ್ಥನೆ ನೀಡಿದರು.

‘ಹೈದರಾಬಾದ್‌ಗೆ ಹಿಂದೆ ನಿಜಾಮರ ಕಾಲದಲ್ಲಿ ಬಳ್ಳಾರಿ ಸೇರಿ ಕೆಲವು ಜಿಲ್ಲೆಗಳು ಇದ್ದವು. ವಿಜಯಪುರ, ಬೆಳಗಾವಿ, ಕಾರವಾರ, ಮುಂಬೈ ರಾಜ್ಯದಲ್ಲಿತ್ತು. ಈ ಅರ್ಥದಲ್ಲಿ ಅವರು ಹೇಳಿದ್ದಾರೆ. ಇದು ಸತ್ಯ. ರಾಜ್ಯಗಳ ಪುನರ್ ವಿಂಗಡಣೆಯ ಬಳಿಕ ಎಲ್ಲವೂ ಸರಿಹೋಗಿದೆ. ರಾಜ್ಯಗಳ ಗಡಿ ವಿಚಾರದಲ್ಲಿ ಮಹಾಜನ್ ವರದಿಯೇ ಅಂತಿಮ. ಇತಿಹಾಸದಲ್ಲಿ ಇರುವುದನ್ನು ಹೆಬ್ಬಾಳಕರ ಹೇಳಿದ್ದಾರೆ’ ಎಂದರು.

‘ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕದಲ್ಲಿ ಯಾವ್ಯಾವ ಜಿಲ್ಲೆಗಳು ಇದ್ದುವು ಎನ್ನುವುದು ಗೊತ್ತಿದೆ. ಆ ಕಾರಣದಿಂದ ಅವರು ಹೇಳಿರಬಹುದು. ರಾಜ್ಯ ಪುನರ್ ವಿಂಗಡಣೆಯಾದ ಮೇಲೆ ಎಲ್ಲವೂ ಬದಲಾಗಿದೆ. ಎಲ್ಲ ಗಡಿ ವಿವಾದಗಳಿಗೆ ಮಹಾಜನ್ ವರದಿ ಅಂತಿಮ. ಈ ವಿಚಾರದಲ್ಲಿ ನಮ್ಮ ರಾಜ್ಯದ ನಿಲುವು ಕೂಡ ಬಹಳ ಸ್ಪಷ್ಟವಾಗಿದೆ’ ಎಂದರು.

ಹೈಕಮಾಂಡ್ ತೀರ್ಮಾನ ಬದ್ಧ: ಮೂರು ಉಪ ಮುಖ್ಯಮಂತ್ರಿ ಹುದ್ದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಇದೆಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ’ ಎಂದರು. 

‘ರಹೀಂ ಖಾನ್ ಅವರು ಮುಸ್ಲಿಂ ಸಮುದಾಯಕ್ಕೆ ಡಿಸಿಎಂ ಕೇಳಿರುವುದು ತಪ್ಪೇನಿದೆ? ಅವರ ಸಮುದಾಯಕ್ಕೆ ಬೇಕು ಎಂದು ಕೇಳಿದ್ದಾರೆ. ನಾನು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳುತ್ತದೊ ಅದಕ್ಕೆ ನಾವು ಬದ್ಧ’ ಎಂದರು. 

‘ಉಪ ಮುಖ್ಯಮಂತ್ರಿ ಮಾಡಬೇಕೋ ಬೇಡವೋ? ಎಷ್ಟು ಮಾಡಬೇಕು? ಯಾವ ಯಾವ ವರ್ಗಕ್ಕೆ ಮಾಡಬೇಕು? ಎಂಬುದನ್ನು ಹೈಕಮಾಂಡ್ ತೀರ್ಮಾನಿಸಲಿದೆ. ಹಿಂದೆ ಮಾಡುವ ಸಂದರ್ಭದಲ್ಲಿ ಒಂದೇ ಡಿಸಿಎಂ ಎಂದು ತೀರ್ಮಾನಿಸಿದ್ದರು. ಈಗ ಕೆಲವು ಬೇಡಿಕೆಗಳನ್ನು ನಾನು ಕೂಡ ಗಮನಿಸಿದ್ದೇನೆ. ನನ್ನ ಅಭಿಪ್ರಾಯವನ್ನು ಪಕ್ಷದ ನಾಲ್ಕು ಗೋಡೆ ಮಧ್ಯೆ ಹೇಳುತ್ತೇನೆ. ಮಾಧ್ಯಮಗಳ ಮುಂದೆ ಹೇಳಲ್ಲ’ ಎಂದರು.

ಕಾಂತರಾಜ ವರದಿಗೆ ಯಾರ ವಿರೋಧವೂ ಇಲ್ಲ: ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್‌. ಕಾಂತರಾಜ ವರದಿಯನ್ನು ಜಾರಿಗೊಳಿಸುವಂತೆ ಆಗ್ರಹಿಸಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳು ಮುಖ್ಯಮಂತ್ರಿಯನ್ನು ಭೇಟಿ ಮಾಡಿದ ಬಗ್ಗೆ ಮಾತನಾಡಿದ ಅವರು, ‘ಕಾಂತರಾಜ ವರದಿಗೆ ಯಾರ ವಿರೋಧವೂ ಇಲ್ಲ. ವರದಿಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಹೇಳಿದ್ದೇವೆ’ ಎಂದರು.

‘ಸಮೀಕ್ಷೆಯ ಸಂದರ್ಭದಲ್ಲಿ ಕಾರಣಾಂತರಗಳಿಂದ ಉಪಪಂಗಡ ಬೇರೆ ಬೇರೆ ಬರೆಸಿದ್ದಾರೆ. ಮೀಸಲಾತಿಯ ಕಾರಣಕ್ಕಾಗಿ ಉಪಪಂಗಡ, ಉಪ ಜಾತಿ ಬರೆಸಿದ್ದಾರೆ. ಎಲ್ಲ ಉಪಪಂಗಡಗಳನ್ನು ಒಟ್ಟಿಗೆ ಲೆಕ್ಕ ಮಾಡಬೇಕು ಎಂಬುದು ನಮ್ಮ ಒತ್ತಾಯ. ಆ ರೀತಿ ಉಪಪಂಗಡಗಳನ್ನು ಒಟ್ಟು ಸೇರಿಸಿದರೆ ಲಿಂಗಾಯತ ಜನಸಂಖ್ಯೆ ಶೇ 18ರಿಂದ 22 ಆಗುತ್ತದೆ. ಉಪಪಂಗಡಗಳನ್ನು ಬಿಟ್ಟರೆ ಲಿಂಗಾಯತರ ಸಂಖ್ಯೆ ಕಡಿಮೆಯಾಗುತ್ತದೆ. ಅದನ್ನು ಸರಿಪಡಿಸಿ, ಸಮೀಕ್ಷೆ ಮಾಡಿ ಎನ್ನುವುದು ನಮ್ಮ ಒತ್ತಾಯ. ಈ ವಿಚಾರ ಮುಖ್ಯಮಂತ್ರಿಗಳ ಗಮನದಲ್ಲಿದೆ. ಅವರು ಸರಿಪಡಿಸುವ ವಿಶ್ವಾಸವೂ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.