ಬೆಂಗಳೂರು: ಉಪ ಚುನಾವಣೆ ನಡೆಯಲಿರುವ ಮೂರೂ ಕ್ಷೇತ್ರಗಳಲ್ಲಿ ಶತಾಯಗತಾಯ ಗೆಲ್ಲಲು ರಣತಂತ್ರ ರೂಪಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಈ ಕ್ಷೇತ್ರಗಳ ಜಿಲ್ಲಾ ಪಂಚಾಯಿತಿ ಮಟ್ಟಕ್ಕೆ ಸಚಿವರು, ತಾಲ್ಲೂಕು ಪಂಚಾಯಿತಿ ಮಟ್ಟಕ್ಕೆ ಶಾಸಕರ ತಂಡಗಳನ್ನು ನಿಯೋಜಿಸಲು ನಿರ್ಧರಿಸಿದ್ದಾರೆ.
ಸಂಡೂರು, ಚನ್ನಪಟ್ಟಣ, ಶಿಗ್ಗಾವಿ ಕ್ಷೇತ್ರಗಳ ಉಪಚುನಾವಣೆ ಕುರಿತು ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಮುಖಂಡರ ಜೊತೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಭಾನುವಾರ ವಿಡಿಯೊ ಸಂವಾದ ನಡೆಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಇದ್ದರು. ಪಕ್ಷದ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ದೆಹಲಿಯಿಂದ ಭಾಗವಹಿಸಿದರು.
‘ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಜಿಲ್ಲಾ ಪಂಚಾಯಿತಿ ಮಟ್ಟದ ಹೊಣೆಯನ್ನು ಸಚಿವರಿಗೆ ನೀಡಲಾಗುವುದು. ತಾಲ್ಲೂಕು ಮಟ್ಟದಲ್ಲಿ ಶಾಸಕರು ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಕೆಲವೇ ದಿನಗಳಲ್ಲಿ ಹೊಣೆಗಾರಿಕೆ ಹಂಚಿಕೆ ಆಗಲಿದೆ. ತಕ್ಷಣದಿಂದ ಕಾರ್ಯಪ್ರವೃತ್ತರಾಗಬೇಕು’ ಎಂದು ಇಬ್ಬರು ನಾಯಕರೂ ಸಲಹೆ ನೀಡಿದ್ದಾರೆ.
‘ಸ್ಥಳೀಯ ಮಟ್ಟದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಎಲ್ಲರನ್ನೂ ಒಗ್ಗೂಡಿಸಿ ಚುನಾವಣಾ ಪ್ರಚಾರ ನಡೆಸಬೇಕು. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದೆ. ಹೀಗಾಗಿ, ಮೂರೂ ಕ್ಷೇತ್ರಗಳನ್ನು ಗೆಲ್ಲಲೇ ಬೇಕಾಗಿದೆ. ಇಲ್ಲವಾದರೆ ತಪ್ಪು ಸಂದೇಶ ರವಾನೆ ಆಗಲಿದೆ. ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ ಪಂಚ ಗ್ಯಾರಂಟಿಗಳು ಉಪ ಚುನಾವಣೆಯ ವೇಳೆಗೆ ಅನುಷ್ಠಾನಗೊಂಡು, ಜನರಿಗೆ ತಲುಪಿವೆ. ಈ ಜನಪರ ಯೋಜನೆಗಳ ಬಗ್ಗೆ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು. ಭಿನ್ನಮತ, ಅಸಮಾಧಾನ ಇದ್ದರೆ ಶಮನಗೊಳಿಸಿ ಕಾರ್ಯಕರ್ತರನ್ನು ಹುರಿದುಂಬಿಸಬೇಕು’ ಎಂದೂ ನಿರ್ದೇಶನ ನೀಡಿದ್ದಾರೆ.
‘ರಾಜ್ಯ ಸರ್ಕಾರದ ಮೇಲೆ ಬಿಜೆಪಿ– ಜೆಡಿಎಸ್ ನಾಯಕರು ಭ್ರಷ್ಟಾಚಾರ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ, ಮುಡಾ ಪ್ರಕರಣ ಮುಂದಿಟ್ಟು ಸುಳ್ಳುಪ್ರಚಾರ ಮಾಡಬಹುದು. ಅದರ ವಿರುದ್ಧ ಗಟ್ಟಿಯಾಗಿ ನಿಂತು ಸತ್ಯವನ್ನು ಜನರಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು. ಉಸ್ತುವಾರಿ ಸಚಿವರು, ಶಾಸಕರು, ಮಾಜಿ ಶಾಸಕರು ಕ್ಷೇತ್ರದಲ್ಲಿ ಸಕ್ರಿಯವಾಗಿ ಪಕ್ಷದ ಅಭ್ಯರ್ಥಿ ಪರ ಮತಯಾಚನೆ ಮಾಡಬೇಕು’ ಎಂದು ಸೂಚನೆ ನೀಡಿದರು.
ಆಯಾ ಭಾಗದ ಸಚಿವರು ಶಾಸಕರಿಗೆ ಹೊಣೆ
ಶಿಗ್ಗಾವಿ ಕ್ಷೇತ್ರಕ್ಕೆ ಕಿತ್ತೂರು ಕರ್ನಾಟಕ ಸಂಡೂರು ಕ್ಷೇತ್ರಕ್ಕೆ ಕಲ್ಯಾಣ ಕರ್ನಾಟಕ ಚನ್ನಪಟ್ಟಣ ಕ್ಷೇತ್ರಕ್ಕೆ ಹಳೆ ಮೈಸೂರು ಭಾಗದ ಸಚಿವರು ಶಾಸಕರಿಗೆ ಚುನಾವಣೆಯ ಜವಾಬ್ದಾರಿ ಹಂಚಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಹೊಣೆ ವಹಿಸಿಕೊಂಡವರು ‘ನಾವೇ ಅಭ್ಯರ್ಥಿ ನಮ್ಮದೇ ಚುನಾವಣೆ’ ಎಂದು ಭಾವಿಸಿಕೊಂಡು ಪ್ರಚಾರದಲ್ಲಿ ತೊಡಗಿಸಿಕೊಳ್ಳಬೇಕು.
ಲೋಕಸಭೆ ಚುನಾವಣೆ ಫಲಿತಾಂಶದ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಧಿಸಿದ ಅಧಿಪತ್ಯವನ್ನು ಉಪಚುನಾವಣೆ ಗೆಲ್ಲುವ ಮೂಲಕ ಮುಂದುವರಿಸಬೇಕು’ ಎಂದು ಸಚಿವರು ಶಾಸಕರಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಸಲಹೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.