ADVERTISEMENT

ಕಾಂಗ್ರೆಸ್‌ನವರೇ ಸ್ಯಾಂಟ್ರೊ ರವಿಯ ಮಹಾಪೋಷಕರು: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2023, 11:00 IST
Last Updated 12 ಜನವರಿ 2023, 11:00 IST
ಸ್ಯಾಂಟ್ರೊ ರವಿ
ಸ್ಯಾಂಟ್ರೊ ರವಿ    

ಬೆಂಗಳೂರು: ಹಲವು ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿರುವ, ಸರ್ಕಾರದ ಮಟ್ಟದಲ್ಲಿ ಪ್ರಭಾವ ಹೊಂದಿರುವ ದೂರು ಇರುವ ಸ್ಯಾಂಟ್ರೊ ರವಿಯ ಮಹಾಪೋಷಕರೇ ಕಾಂಗ್ರೆಸ್‌ನವರು ಎಂದು ಬಿಜೆಪಿ ಗುರುವಾರ ಆರೋಪಿಸಿದೆ. ಆತ ಯಾವ ಯಾವ ನಾಯಕರುಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಎಲ್ಲ ಸತ್ಯ ತನಿಖೆಯಿಂದ ಹೊರಬರಲಿದೆ ಎಂದು ಹೇಳಿದೆ.

ಸ್ಯಾಂಟ್ರೊ ರವಿಗೆ ಸರ್ಕಾರದ ಮಟ್ಟದಲ್ಲಿ ಇರುವ ನಂಟು, ಆತನ ಆಕ್ರಮಗಳ ಕುರಿತು ಕಾಂಗ್ರೆಸ್‌ ಪಕ್ಷವು ನಿತ್ಯ ಬಿಜೆಪಿ ವಿರುದ್ಧ ಟೀಕೆ ಮಾಡುತ್ತಿದೆ. ಈ ಮಧ್ಯೆ, ತಾನು ಬಿಜೆಪಿ ಕಾರ್ಯಕರ್ತ ಎಂದು ರವಿ ಹಿಂದೊಮ್ಮೆ ಪೊಲೀಸರ ಎದುರೇ ಹೇಳಿಕೊಂಡಿದ್ದ ವಿಚಾರವೂ ಬಯಲಾಗಿದೆ.

ಈ ಹಿನ್ನೆಲೆಯಲ್ಲಿ ಗುರುವಾರ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ರವಿ ಅನೈತಿಕ ಜಾಲ ಬೆಳದಿದ್ದೇ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಎಂದು ಆರೋಪಿಸಿದೆ. ಆತನ ಮಹಾಪೋಷಕರೇ ಕೈ ಪಕ್ಷ ಎಂದಿದೆ.

ADVERTISEMENT

‘ಜೈಲಿಗೆ ಹೋದ ಸ್ಯಾಂಟ್ರೊ ರವಿ ಹೊರ ಬಂದದ್ದು ಕಾಂಗ್ರೆಸ್‌ ಅವಧಿಯಲ್ಲೇ. ಅವನ ವಿಳಾಸ ಕಾಂಗ್ರೆಸ್ ನಾಯಕರಿಗೆ ಗೊತ್ತಿರಬೇಕು. ಗೊತ್ತಿದೆ ಸಹ. ಈಗಾಗಲೇ ಮುಖ್ಯಮಂತ್ರಿ ಬೊಮ್ಮಾಯಿ ಅವರು ಸ್ಯಾಂಟ್ರೊ ರವಿಯ ವಿರುದ್ದ ಸಮಗ್ರ ತನಿಖೆಗೆ ಆದೇಶ ನೀಡಿರುವುದು ಕಾಂಗ್ರೆಸ್ ನಾಯಕರಿಗೆ ನಡುಕ ಹುಟ್ಟಿಸಿದೆ’ ಎಂದು ಹೇಳಿದೆ.

‘ಸ್ಯಾಂಟ್ರೊ ರವಿಯ ಅಕ್ರಮಕ್ಕೆ 20 ವರ್ಷಗಳ ಇತಿಹಾಸವಿದ್ದು, ಆತ ಯಾವ ಯಾವ ನಾಯಕರುಗಳೊಂದಿಗೆ ಸಂಪರ್ಕ ಹೊಂದಿದ್ದ ಎನ್ನುವ ಎಲ್ಲ ಸತ್ಯ ತನಿಖೆಯಿಂದ ಹೊರಬರಲಿದೆ’ ಎಂದು ಬಿಜೆಪಿ ಹೇಳಿದೆ.

ನಾನು ಬಿಜೆಪಿ ಕಾರ್ಯಕರ್ತ: ಸ್ಯಾಂಟ್ರೊ ರವಿ ಹೇಳಿಕೆ

ಮೈಸೂರು: ಬೆಂಗಳೂರಿನ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ದೂರೊಂದರ ಸಂಬಂಧ ಹೇಳಿಕೆ ನೀಡುವಾಗ, ಕೆ.ಎಸ್‌.ಮಂಜುನಾಥ್‌ ಅಲಿಯಾಸ್‌ ಸ್ಯಾಂಟ್ರೊ ರವಿ, ‘ನಾನು ಬಿಜೆಪಿ ಕಾರ್ಯಕರ್ತ’ ಎಂದು ಹೇಳಿಕೊಂಡಿದ್ದಾರೆ.

‘ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ’ ಎಂದು ಬೆಂಗಳೂರಿನ ಜಗದೀಶ್‌ ಎಂಬುವರು 2022ರ ಜ.21ರಂದು ದೂರು ನೀಡಿದ್ದರು. ಮರು ದಿನವೇ ಪೊಲೀಸರಿಗೆ ಮೇಲಿನಂತೆ ಹೇಳಿಕೆಯನ್ನು ಸ್ಯಾಂಟ್ರೊ ರವಿ ನೀಡಿ ಸಹಿ ಹಾಕಿದ್ದರು. ದಾಖಲೆ ಪ್ರತಿಯು ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಇವುಗಳನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.