ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ ಅವಮಾನಿಸಿದೆ ಎಂದು ಕಾಂಗ್ರೆಸ್ ಹೇಳಿದೆ. ಯಡಿಯೂರಪ್ಪನವರನ್ನು ‘ಟಿಶ್ಯೂ‘ ಪೇಪರ್ ರೀತಿಯಲ್ಲಿ ಬಳಸಿ ಬಿಜೆಪಿ ನಾಯಕರು ಅವಮಾನ ಮಾಡಿದ್ದಾರೆ ಎಂದು ಹೇಳಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಅಭ್ಯರ್ಥಿಗಳ ಪಟ್ಟಿ ಅಖೈರುಗೊಳಿಸುವ ನಿಟ್ಟಿನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಸೋಮವಾರ ದೆಹಲಿಯಲ್ಲಿ ಸಭೆ ನಡೆದಿದೆ. ರಾಜ್ಯ ಬಿಜೆಪಿಯ ಪ್ರಮುಖ ನಾಯಕ, ಲಿಂಗಾಯಿತ ಸಮುದಾಯದ ಪ್ರತಿನಿಧಿ ಯಡಿಯೂರಪ್ಪನವರನ್ನು ಹೊರಗಿಟ್ಟು ಸಭೆ ನಡೆಸಲಾಗಿತ್ತು. ಈ ಬಗ್ಗೆ ಪ್ರಜಾವಾಣಿಯಲ್ಲಿ ಪ್ರಕರಟವಾಗಿರುವ ವರದಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ.
‘ಬಿಎಸ್‌ವೈ ಅವರನ್ನೇ ಹೊರಗಿಟ್ಟು ಇತರೇ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿದ್ದು ಲಿಂಗಾಯತ ಸಮುದಾಯದ ಹಿರಿಯ ನಾಯಕನಿಗೆ ಮಾಡಿದ ಘೋರ ಅವಮಾನ. ಕರ್ನಾಟಕದಲ್ಲಿ ಬಿಜೆಪಿ ಕಟ್ಟಿದ ಬಿಎಸ್‌ವೈ ಅವರಿಗೆ ಸಭೆಯಲ್ಲಿ ಕುರ್ಚಿ ಇರಲಿಲ್ಲವೇ? ಟಿಕೆಟ್ ನಿರ್ಧರಿಸುವ ಸ್ವತಂತ್ರವಿಲ್ಲವೇ? ಬಿಎಸ್‌ವೈ ಅವರು ಬಿಜೆಪಿ ಬಳಸಿ ಬಿಸಾಡುವ ಟಿಶ್ಯೂ ಪೇಪರ್ ಆಗಿದ್ದಾರೆ‘ ಎಂದು ಕಾಂಗ್ರೆಸ್ ತನ್ನ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಇದೇ ಮೇ 10ಕ್ಕೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪ್ರಮುಖ ಮೂರು ಪಕ್ಷಗಳು ಚುನಾವಣಾ ಅಖಾಡಕ್ಕೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಮಗ್ನವಾಗಿವೆ. ಪ್ರಾದೇಶಿಕ ಪಕ್ಷ ಜೆಡಿಎಸ್ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದರೆ, ಕಾಂಗ್ರೆಸ್ ತನ್ನ ಎರಡನೇ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಿದೆ. ಚುನಾವಣೆ ಹತ್ತಿರವಾಗುತ್ತಿದ್ದರೂ ಆಡಳಿತ ಪಕ್ಷ ಬಿಜೆಪಿ ಪಟ್ಟಿ ಬಿಡುಗೆಡೆ ಮಾಡದೇ ಇರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.