ADVERTISEMENT

ಚುನಾವಣೆಯಲ್ಲಿ ಭ್ರಷ್ಟಾಚಾರದ ಹಣ ಬಳಸುತ್ತಿರುವ ಕಾಂಗ್ರೆಸ್‌: ಸದಾನಂದ ಗೌಡ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2024, 10:54 IST
Last Updated 7 ನವೆಂಬರ್ 2024, 10:54 IST
ಡಿ.ವಿ. ಸದಾನಂದ ಗೌಡ 
ಡಿ.ವಿ. ಸದಾನಂದ ಗೌಡ    

ಬೆಂಗಳೂರು: ಕಾಂಗ್ರೆಸ್‌ ಮುಖಂಡರು ಭ್ರಷ್ಟಾಚಾರದ ಮೂಲಕ ಕೊಳ್ಳೆ ಹೊಡೆದ ಹಣವನ್ನು ಮೂರು ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಳಸುವ ಪ್ರಯತ್ನದಲ್ಲಿದ್ದಾರೆ. ಈ ವಿಷಯವನ್ನು ಚುನಾವಣಾ ಆಯುಕ್ತರು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಒತ್ತಾಯಿದ್ದಾರೆ.

ಈ ಮೂರೂ ಕ್ಷೇತ್ರಗಳಲ್ಲಿ ಹಣದ ಅಬ್ಬರ ಜಾಸ್ತಿ ಆಗಿರುವುದರಿಂದ ನ್ಯಾಯಸಮ್ಮತ ಚುನಾವಣೆ ನಡೆಯುವುದು ಕಷ್ಟ. ಇದಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಅಗತ್ಯವಿರುವ ಮಾಹಿತಿ ನೀಡಲು ಸಿದ್ಧರಿದ್ದೇವೆ. ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಚುನಾವಣಾ ಆಯೋಗ ನಿಗಾ ಇಡದಿದ್ದರೆ ಹಣದ ಪ್ರಭಾವದಿಂದ ಜನಸಾಮಾನ್ಯರ ತಲೆ ಹಾಳು ಮಾಡಿ ಈ ಚುನಾವಣೆಯನ್ನು ಹಣದ ಪ್ರಭಾವದ ಚುನಾವಣೆಯನ್ನಾಗಿ ಪರಿವರ್ತಿಸಲಿದ್ದಾರೆ. ಇವರ ಆಟಗಳಿಗೆ ಹೆದರುವುದಿಲ್ಲ. ಎನ್‌ಡಿಎ ಕಾರ್ಯಕರ್ತರು ಈ ಷಡ್ಯಂತ್ರವನ್ನು ಬಯಲಿಗೆಳೆಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿದ್ದಾರೆ. ಕಾಂಗ್ರೆಸ್‌ ಪಕ್ಷದ ಚುನಾವಣಾ ಉಸ್ತುವಾರಿಗಳ ಭೂಗತ ಚಟುವಟಿಕೆಗಳನ್ನು ನಿಯಂತ್ರಿಸದೇ ಇದ್ದಲ್ಲಿ, ಸಾಮಾನ್ಯ ಜನರ ಮೇಲೆ ಗಂಭೀರ ಪ್ರಭಾವ ಬೀರಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಸಂಡೂರಿನಲ್ಲಿ ಮಾಜಿ ಸಚಿವ ನಾಗೇಂದ್ರ, ಶಿಗ್ಗಾವಿಯಲ್ಲಿ ಸಚಿವ ಜಮೀರ್‌ ಅಹ್ಮದ್ ಖಾನ್‌ ಮತ್ತು ಚನ್ನಪಟ್ಟಣದಲ್ಲಿ ಉಪಮಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಉಸ್ತುವಾರಿಯನ್ನಾಗಿ ಮಾಡಲಾಗಿದೆ. ಇವರು ಲೂಟಿಯಲ್ಲಿ ನಿಸ್ಸೀಮರು ಚುನಾವಣೆಯನ್ನು ಗೆಲ್ಲುವುದಕ್ಕೆ ಯಾವುದೇ ಅತಿರೇಕಕ್ಕೂ ಹೋಗಲಿದ್ದಾರೆ. ಎಲ್ಲ ಕಡೆಯಿಂದ ಚಕ್ರವ್ಯೂಹವನ್ನು ಪ್ರವೇಶಿಸಿದ ರೀತಿಯಲ್ಲಿ ಅವರು ಈ ಬಾರಿ ಉಪಚುನಾವಣೆ ಎದುರಿಸುತ್ತಿದ್ದಾರೆ ಎಂದು ಸದಾನಂದಗೌಡ ಹೇಳಿದರು.

ಹಗರಣಗಳ ಸರಣಿಯೇ ನಡೆದಿದೆ. ರೈತರ ಭೂ ಕಬಳಿಕ ಆಗುತ್ತಿದೆ. ಮಳೆಯ ಹಾನಿಯ ಪರಿಹಾರ ಕೊಡಲಾಗದ ದಯನೀಯ ಸ್ಥಿತಿ ಮುಂದುವರೆದಿದೆ. ಕಾಂಗ್ರೆಸ್‌ನ ದುರಾಡಳಿತಕ್ಕೆ ಜನರು ಬೇಸತ್ತು ಹೋಗಿದ್ದಾರೆ. ಮೂರಕ್ಕೂ ಮೂರು ಸ್ಥಾನಗಳನ್ನು ಎನ್‌ಡಿಎ ಗೆಲ್ಲಲಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.