ಹುಬ್ಬಳ್ಳಿ: ತೀವ್ರ ಕುತೂಹಲ ಕೆರಳಿಸಿದ್ದ ಕುಂದಗೋಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಕುಸುಮಾವತಿ ಶಿವಳ್ಳಿ ಅವರು ಬಿಜೆಪಿಯ ಎಸ್.ಐ. ಚಿಕ್ಕನಗೌಡ್ರ ವಿರುದ್ಧ 1,601 ಮತಗಳ ಅಂತರದ ಜಯ ಸಾಧಿಸಿದರು. ಕಳೆದ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಿಂದ ಪರಾಭವಗೊಂಡಿದ್ದ ಚಿಕ್ಕನಗೌಡ್ರ ಈ ಬಾರಿಯೂ ಕಡಿಮೆ ಅಂತರದಲ್ಲಿ ಸೋಲೊಪ್ಪಿಕೊಂಡರು.
ಧಾರವಾಡದ ಕೃಷಿ ವಿಶ್ವವಿದ್ಯಾಲಯದದಲ್ಲಿ ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಯಿತು. ಮೊದಲು ಅಂಚೆ ಮತಗಳನ್ನು ಎಣಿಕೆ ಮಾಡಲಾಯಿತು. ಆ ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳ ಮತಗಳನ್ನು ಎಣಿಕೆಗೆ ಚಾಲನೆ ನೀಡಲಾಯಿತು. 16 ಸುತ್ತುಗಳಲ್ಲಿ ಮತ ಎಣಿಕೆ ನಡೆಯಿತು. ಮಧ್ಯಾಹ್ನ 1.45 ವೇಳೆಗೆ ಮತ ಎಣಿಕೆ ಮುಕ್ತಾಯವಾಯಿತು. ಐದು ಮತ ಖಾತ್ರಿ ಯಂತ್ರಗಳ (ವಿ.ವಿ. ಪ್ಯಾಟ್) ಮತಗಳನ್ನು ಇವಿಎಂನೊಂದಿಗೆ ತಾಳೆ ಮಾಡಿದ ನಂತರ ಅಧಿಕೃತವಾಗಿ ಫಲಿತಾಂಶ ಘೋಷಣೆ ಮಾಡಲಾಯಿತು.
ಸಹೋದರ ಹಾಗೂ ಬೆಂಬಲಿಗರೊಂದಿಗೆ ಮತ ಎಣಿಕೆ ಕೇಂದ್ರಕ್ಕೆ ಬಂದ ಕುಸುಮಾವತಿ ಶಿವಳ್ಳಿ ಅವರು ಚುನಾವಣಾಧಿಕಾರಿ ವಿ. ಪ್ರಸವನ್ನ ಅವರಿಂದ ಪ್ರಮಾಣ ಪತ್ರ ಸ್ವೀಕರಿಸಿದರು. ಆನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಕ್ಷೇತ್ರದ ಜನರ ಆಶೀರ್ವಾದದಿಂದ ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ಸಚಿವ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಎಲ್ಲಹಿರಿಯ ನಾಯಕರು ನನ್ನ ಪರವಾಗಿ ಪ್ರಚಾರ ಮಾಡಿದ್ದು ಅನುಕೂಲವಾಯಿತು. ಈ ಗೆಲುವನ್ನು ಪತಿ ದಿ. ಶಿವಳ್ಳಿ ಅವರಿಗೆ ಅರ್ಪಿಸುತ್ತೇನೆ’ ಎಂದು ಹೇಳಿದರು.
‘ಪತಿ ಶಿವಳ್ಳಿ ಅವರು ಕ್ಷೇತ್ರದ ಅಭಿವೃದ್ಧಿಯ ಕನಸು ಕಂಡಿದ್ದರು. ಹಲವಾರು ಯೋಜನೆಗಳನ್ನು ತಂದು ಅಭಿವೃದ್ಧಿ ಕಾರ್ಯ ಆರಂಭಿಸಿದ್ದರು. ಅವರ ಅಕಾಲಿಕ ಮರಣದಿಂದಾಗಿ ಅಭಿವೃದ್ಧಿ ಕಾರ್ಯಗಳು ಅರ್ಧಕ್ಕೆ ನಿಂತಿವೆ. ಅವುಗಳನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಈ ವಿಷಯದಲ್ಲಿ ಎಲ್ಲ ನಾಯಕರು ಸಹಕಾರು ಪಡೆದುಕೊಳ್ಳುತ್ತೇನೆ’ ಎಂದು ಅವರು ಹೇಳಿದರು.
ಪೌರಾಡಳಿತ ಸಚಿವರಾಗಿದ್ದ ಸಿ.ಎಸ್. ಶಿವಳ್ಳಿ ಅವರ ನಿಧನದಿಂದಾಗಿ ಕುಂದಗೋಳ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದ ಕಾಂಗ್ರೆಸ್– ಬಿಜೆಪಿ ಭರ್ಜರಿ ಪ್ರಚಾರ ನಡೆಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.