ADVERTISEMENT

ರಥೋತ್ಸವ ಸಮಿತಿಗೆ ಮುಸ್ಲಿಂ ವ್ಯಕ್ತಿ ಬಿಜೆಪಿ ಕಿಡಿಗೆ ಕಾಂಗ್ರೆಸ್ ತಣ್ಣೀರು!

ಕಾಂಗ್ರೆಸ್‌ ಪ್ರತಿದಾಳಿಗೆ ಹಿಂದಕ್ಕೆ ಸರಿದ ಕಮಲಪಡೆ l ಪೋಸ್ಟ್‌ ಅಳಿಸಿ ಹಾಕಿದ ಬಿಜೆಪಿ

​ಪ್ರಜಾವಾಣಿ ವಾರ್ತೆ
Published 8 ಮೇ 2024, 23:46 IST
Last Updated 8 ಮೇ 2024, 23:46 IST
<div class="paragraphs"><p>ಸಿದ್ದರಾಮಯ್ಯ ಹಂಚಿಕೊಂಡ ಪೋಸ್ಟ್</p></div>

ಸಿದ್ದರಾಮಯ್ಯ ಹಂಚಿಕೊಂಡ ಪೋಸ್ಟ್

   

ಹೊಸಕೋಟೆ: ನಗರದಲ್ಲಿ ಇದೇ 23ರಿಂದ ನಡೆಯಲಿರುವ ಅವಿಮುಕ್ತೇಶ್ವರ ದೇವಾಲಯದ ರಥೋತ್ಸವ ಸಮಿತಿಯ ಹತ್ತು ಸದಸ್ಯರ ಪೈಕಿ ಮುಸ್ಲಿಂ ವ್ಯಕ್ತಿಯೊಬ್ಬರನ್ನು ನೇಮಕ ಮಾಡಿರುವುದಕ್ಕೆ ಬಿಜೆಪಿ ಕಿಡಿ ಕಾರಿದರೆ, ಕಾಂಗ್ರೆಸ್ ಅದಕ್ಕೆ ತಣ್ಣೀರು ಎರೆಚಿದೆ.

ಶಾಸಕ ಶರತ್ ಬಚ್ಚೇಗೌಡ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ರಥೋತ್ಸವದ ಸಮಿತಿ ರಚಿಸಲಾಗಿತ್ತು. ಹತ್ತು ಸದಸ್ಯರ ಸಮಿತಿಯಲ್ಲಿ ಮುಸ್ಲಿಂ ಸಮುದಾಯದ ನವಾಜ್ ಎಂಬುವರೂ ಇದ್ದರು. ಇದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಷಯ ಮುಂದಿಟ್ಟುಕೊಂಡು ಬಿಜೆಪಿಯು ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ಆರಂಭಿಸಿತ್ತು.

ADVERTISEMENT

‘ಹಿಂದೂ ದೇವಾಲಯದ ರಥೋತ್ಸವ ಸಮಿತಿಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸದಸ್ಯನನ್ನಾಗಿ ನೇಮಕ ಮಾಡಲಾಗಿದೆ. ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಸಾಬೀತುಪಡಿಸಿದೆ. ಅಲ್ಲದೆ, ಹಿಂದೂ ವಿರೋಧಿ ಸಿ.ಎಂ ಸಿದ್ದರಾಮಯ್ಯ ಅವರು ಹಿಂದೂ ದೇವಾಲಯ
ಗಳನ್ನು ನಿಯಂತ್ರಿಸಲು ಮತ್ತು ಅವುಗಳ ಸಂಪತ್ತನ್ನು ದೋಚಲು ಹಿಂದೂಯೇತರ ವ್ಯಕ್ತಿಯನ್ನು ನೇಮಿಸಿರುವುದು ಸರಿಯಲ್ಲ’ ಎಂದು ಬಿಜೆಪಿ ಎಕ್ಸ್‌, ಫೇಸ್‌ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪ ಎತ್ತಿತು.

ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಸಾಮಾಜಿಕ ಜಾಲತಾಣ ಗಳಲ್ಲಿ ದಾಖಲೆ ಸಮೇತ ಪ್ರತಿದಾಳಿ ನಡೆಸಿದರು. ತಕ್ಷಣ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿಯ ಮಾಹಿತಿ ಅಳಿಸಿ ಹಾಕಿತು.

‘ಈ ಹಿಂದೆ ಬಿಜೆಪಿ ಅಧಿಕಾರ ದಲ್ಲಿದ್ದಾಗ ಅಂದಿನ ಸಚಿವ ಎಂ.ಟಿ.ಬಿ. ನಾಗರಾಜ್‌ ಎರಡು ಬಾರಿ ಅವಿಮುಕ್ತೇಶ್ವರ ರಥೋತ್ಸವ ಸಮಿತಿಗೆ ಹಿಂದೂಯೇತರರ ವ್ಯಕ್ತಿ, ಅದರಲ್ಲೂ ಮುಸ್ಲಿಂ ಧರ್ಮೀಯರನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಿದ್ದರು’ ಎಂಬ ಮಾಹಿತಿಯನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿತು.

ಇದಕ್ಕೆ ಸಂಬಂಧಿಸಿದ ದಾಖಲೆಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಯಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಬಿಜೆಪಿ ಒಂದು ಹೆಜ್ಜೆ ಹಿಂದೆ ಸರಿದು ತಾನು ಹಂಚಿಕೊಂಡಿದ್ದ ಪೋಸ್ಟ್‌ಗಳನ್ನು ತಕ್ಷಣ ಅಳಿಸಿ ಹಾಕಿತು.

ಶಾಸಕ ಶರತ್ ಬಚ್ಚೇಗೌಡ ಹಂಚಿಕೊಂಡ ಪೋಸ್ಟ್ 

ಬಿಜೆಪಿ ತನ್ನ ವಾಂತಿ ತಾನೇ ತಿಂದಂತೆ

ಹೊಸಕೋಟೆ ಅವಿಮುಕ್ತೇಶ್ವರ ದೇವಸ್ಥಾನದ ರಥೋತ್ಸವ ಸಮಿತಿಗೆ ಅನ್ಯಧರ್ಮೀಯ ಸದಸ್ಯನನ್ನು ನೇಮಕ ಮಾಡಿದ ಕುರಿತು ತಾನು ಹೇಳಿದ ಸುಳ್ಳನ್ನು ಅಳಿಸಿ ಹಾಕುವುದೆಂದರೆ ತಾನು ವಾಂತಿ ಮಾಡಿ, ಅದನ್ನು ಮಾಡಿದವರೇ ತಿಂದ ಹಾಗೆ. ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡ ರಾಜ್ಯ @ಬಿಜೆಪಿ ಕರ್ನಾಟಕ ನಾವು ಸತ್ಯ ಬಿಚ್ಚಿಟ್ಟ ಕೂಡಲೇ ಸಾಮಾಜಿಕ ಮಾಧ್ಯಮಗಳಲ್ಲಿದ್ದ ತನ್ನ ಸುಳ್ಳು ಆರೋಪದ ಹೇಳಿಕೆ ಅಳಿಸಿ ಹಾಕಿದೆ. ಆದರೆ, ಜನರ ಕ್ಷಮೆ ಕೇಳಿಲ್ಲ. ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಏಕೆ ಬಡಿಸಿಕೊಳ್ಳುತ್ತೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ
-ಸಿದ್ದರಾಮಯ್ಯ, ಮುಖ್ಯಮಂತ್ರಿ

ಬಿಜೆಪಿ ಸ್ವಲ್ಪ ವಿವೇಕದಿಂದ ವರ್ತಿಸಲಿ

ರಥೋತ್ಸವ ಸಮಿತಿಯಲ್ಲಿ ಸರ್ವ ಸಮುದಾಯದ ಸದಸ್ಯರ ನೇಮಕ ಮಾಡುವುದು ದೇವಾಲಯದ ಸಂಪ್ರದಾಯ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ಸಹ ಅಂದು ಸಚಿವರಾಗಿದ್ದ ಎಂ.ಟಿ.ಬಿ ನಾಗರಾಜ 2022ರಲ್ಲಿ ಅಪ್ಸರ್ ಎಂಬುವವರನ್ನು ಸಮಿತಿಗೆ ನೇಮಕ ಮಾಡಿದ್ದು ನಮ್ಮ ಕಣ್ಣ ಮುಂದಿದೆ. ಅಲ್ಲದೆ 2021ರಲ್ಲಿ ಇದೇ ಬಿಜೆಪಿ ಇಮ್ತಿಯಾಜ್ ಪಾಷಾ ಎಂಬುವವರು ಸದಸ್ಯರನ್ನಾಗಿ ಮಾಡಿದ್ದನ್ನು ಮರೆತಂತಿದೆ. ಹಿಂದಿನ ಅವಧಿಯ ಎಲ್ಲ ಪಟ್ಟಿ ಬಿಜೆಪಿ ತೆರೆದು ನೋಡಿ ಸ್ವಲ್ಪ ವಿವೇಕದಿಂದ ವರ್ತಿಸಿದರೆ ಉತ್ತಮ.
-ರಾಮಲಿಂಗಾರೆಡ್ಡಿ, ಮುಜರಾಯಿ ಸಚಿವ

ಬಿಜೆಪಿ ಕುತಂತ್ರ ಫಲಿಸದು 

ಸರ್ವ ಜನಾಂಗದ ಶಾಂತಿಯ ತೋಟ ನಮ್ಮ ಹೊಸಕೋಟೆ. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ರಥೋತ್ಸವಕ್ಕೆ ಹಿಂದೂಯೇತರ ವ್ಯಕ್ತಿಯನ್ನು ನೇಮಿಸಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೂ ಜನರ ನಡುವೆ ಕೋಮು ವಿಷದ ಬೀಜ ಬಿತ್ತುವುದು. ಜನರ ನೆಮ್ಮದಿ ಹಾಳುಗೆಡವುವುದು ಬಿಜೆಪಿ ಪ್ರಮುಖ ಗುರಿ. 2015, 2020, 2022ರಲ್ಲಿ ಮುಸ್ಲಿಂ ವ್ಯಕ್ತಿಯನ್ನು ಸಮಿತಿ ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು. ಶಿಫಾರಸು ಮಾಡಿದ್ದು ಬಿಜೆಪಿ ಶಾಸಕ ಎಂ.ಟಿ.ಬಿ ನಾಗರಾಜ. ಸುಳ್ಳಿನ ಮೇಲೆ ಸುಳ್ಳು ಹೇಳುವ ಬಿಜೆಪಿಗೆ ಆವಿಮುಕ್ತೇಶ್ವರ ಒಳ್ಳೆಯ ಬುದ್ದಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ. 
-ಶರತ್ ಬಚ್ಚೇಗೌಡ, ಹೊಸಕೋಟೆ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.