ಬೆಂಗಳೂರು: ಪರಿಶಿಷ್ಟರ ಮೇಲಿನ ದೌರ್ಜನ್ಯದ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯದ (ಡಿಸಿಆರ್‌ಇ) 33 ಘಟಕಗಳನ್ನು ‘ವಿಶೇಷ ಪೊಲೀಸ್ ಠಾಣೆ’ಗಳೆಂದು ಘೋಷಿಸಲು ಮತ್ತು ಈ ಠಾಣೆಗಳ ನಿರ್ವಹಣೆಗೆ 450 ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಸೋಮವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ,
ಪ್ರತಿ ಜಿಲ್ಲೆಗೊಂದು ಠಾಣೆ ಮತ್ತು ಬೆಂಗಳೂರಿನಲ್ಲಿ ಎರಡು ಈ ವಿಶೇಷ ಪೊಲೀಸ್ ಠಾಣೆಗಳಿರಲಿವೆ. ಪರಿಶಿಷ್ಟರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಎಲ್ಲ ಪ್ರಕರಣಗಳನ್ನು ಈ ಠಾಣೆಗಳಿಗೆ ವರ್ಗಾಯಿಸಲಾಗುವುದು ಎಂದರು.
ಸಿಆರ್‌ಪಿಸಿ ಕಾಯ್ದೆ 1973 ರ ಕಲಂ 2 ಎಸ್ ಅಡಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಕೆಲವು ರಾಜ್ಯಗಳಲ್ಲಿ ಈಗಾಗಲೇ ವಿಶೇಷ ಪೊಲೀಸ್ ಠಾಣೆಗಳು ಇವೆ. ಕರ್ನಾಟಕದಲ್ಲಿ 2022 ರ ಡಿಸೆಂಬರ್‌ವರೆಗೆ 7,633 ಪ್ರಕರಣಗಳು ಮಾತ್ರ ನ್ಯಾಯಾಲಯಕ್ಕೆ ಬಂದಿವೆ. ಈ ಪೈಕಿ 1,723 ಪ್ರಕರಣಗಳು ವಿಲೇವಾರಿ ಆಗಿವೆ. 1,363 ಪ್ರಕರಣಗಳು ಖುಲಾಸೆ ಆಗಿದ್ದು, ಕೇವಲ 68 ಪ್ರಕರಣಗಳಲ್ಲಿ ಶಿಕ್ಷೆ ಆಗಿದೆ. ರಾಜ್ಯದಲ್ಲಿ ಶಿಕ್ಷೆ ಪ್ರಮಾಣ ಶೇ 4 ಎಂದು. ಉತ್ತರಪ್ರದೇಶ ಮತ್ತು ಇತರ ರಾಜ್ಯಗಳಲ್ಲಿ ಶಿಕ್ಷೆ ಪ್ರಮಾಣ ಶೇ 50 ರಷ್ಟಿದೆ ಎಂದು ಅವರು ವಿವರಿಸಿದರು.
ಪ್ರತ್ಯೇಕ ಪೊಲೀಸ್ ಠಾಣೆಗಳೆಂದು ಘೋಷಿಸಲು ಮತ್ತು 450 ಸಿಬ್ಬಂದಿ ನೇಮಕಕ್ಕೆ ₹15.45 ಕೋಟಿ ವೆಚ್ಚವಾಗಲಿದೆ. ಹೆಚ್ಚುವರಿ ಸಿಬ್ಬಂದಿಗೆ ತಗಲುವ ಆವರ್ತಕ ವೆಚ್ಚ ₹37.79 ಕೋಟಿ ಆಗಲಿದೆ. ವೆಚ್ಚದ ಶೇ 50 ರಷ್ಟನ್ನು ಕೇಂದ್ರ ಸರ್ಕಾರ ಭರಿಸಲಿದೆ ಎಂದು ಮಹದೇವಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.