ADVERTISEMENT

‘ಕ್ರೀಡೆಯಾಗಿ ಯೋಗ ಪರಿಗಣನೆ’

‘ಅಂತರರಾಷ್ಟ್ರೀಯ ಯೋಗಾಸನ, ಕ್ರೀಡಾ ಫೆಡರೇಷನ್‌’ ಸ್ಥಾಪನೆ: ಸಚಿವ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2019, 22:42 IST
Last Updated 15 ನವೆಂಬರ್ 2019, 22:42 IST
ಮೈಸೂರಿನಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಯೋಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಮದೇವ್‌ ಹಾಗೂ ಸಚಿವ ಶ್ರೀಪಾದ್‌ ನಾಯ್ಕ್‌ ಮಾತುಕತೆ ನಡೆಸಿದರು. ಹೈದರಾಬಾದ್‌ನ ರಾಮಚಂದ್ರ ಮಿಷನ್‌ ಅಧ್ಯಕ್ಷ ಕಮಲೇಶ್‌ ಡಿ ಪಟೇಲ್‌ (ಎಡಬದಿ) ಇದ್ದಾರೆ
ಮೈಸೂರಿನಲ್ಲಿ ಶುಕ್ರವಾರ ನಡೆದ ಅಂತರರಾಷ್ಟ್ರೀಯ ಯೋಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ರಾಮದೇವ್‌ ಹಾಗೂ ಸಚಿವ ಶ್ರೀಪಾದ್‌ ನಾಯ್ಕ್‌ ಮಾತುಕತೆ ನಡೆಸಿದರು. ಹೈದರಾಬಾದ್‌ನ ರಾಮಚಂದ್ರ ಮಿಷನ್‌ ಅಧ್ಯಕ್ಷ ಕಮಲೇಶ್‌ ಡಿ ಪಟೇಲ್‌ (ಎಡಬದಿ) ಇದ್ದಾರೆ   

ಮೈಸೂರು: ಯೋಗವನ್ನು ಕ್ರೀಡೆಯಾಗಿ ಪರಿಗಣಿಸಲಾಗುವುದು ಹಾಗೂ ಯೋಗಾಸನಕ್ಕೆ ಉತ್ತೇಜನ ನೀಡಲು ಯೋಗಗುರು ಬಾಬಾ ರಾಮ್‌ದೇವ್‌ ನೇತೃತ್ವದಲ್ಲಿ ‘ಅಂತರರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್‌’ ಆರಂಭಿಸಲಾಗುವುದು ಎಂದು ಕೇಂದ್ರ ಆಯುಷ್‌ ಇಲಾಖೆ ರಾಜ್ಯ ಸಚಿವ ಶ್ರೀಪಾದ ನಾಯ್ಕ್‌ ಶುಕ್ರವಾರ ಇಲ್ಲಿ ಘೋಷಿಸಿದರು.

ಮೈಸೂರಿನಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರರಾಷ್ಟ್ರೀಯ ಯೋಗ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ವಿಷಯ ಪ್ರಕಟಿಸಿದರು.

ಯೋಗವನ್ನು ಕ್ರೀಡೆಯಾಗಿ ಪರಿಗಣಿಸಬೇಕು ಎಂದು ಯೋಗಪಟುಗಳು, ವಿವಿಧ ಯೋಗ ಕೇಂದ್ರಗಳ ಮುಖ್ಯಸ್ಥರು ಕಳೆದ ಕೆಲವು ವರ್ಷಗಳಿಂದ ಕೇಂದ್ರಕ್ಕೆಮನವಿ ಸಲ್ಲಿಸುತ್ತ ಬಂದಿದ್ದರು.

ADVERTISEMENT

ಯೋಗವನ್ನು ಜನರ ಬಳಿ ಕೊಂಡೊಯ್ಯುವ ಉದ್ದೇಶದಿಂದ ಇಲಾಖೆಯು ‘ಯೋಗ ಲೊಕೇಟರ್‌’ ಆ್ಯಪ್‌ ಬಿಡುಗಡೆ ಮಾಡಿದೆ. ಯೋಗ ತರಬೇತುದಾರರು ಮತ್ತು ಯೋಗ ಕೇಂದ್ರಗಳು ಸಮೀಪದಲ್ಲಿ ಎಲ್ಲಿವೆ ಎಂಬುದನ್ನು ಈ ಆ್ಯಪ್‌ ಮೂಲಕ ಸುಲಭದಲ್ಲಿ ಕಂಡುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

ಮೈಸೂರಿನಲ್ಲಿ ಪ್ರಧಾನ ಕಾರ್ಯಕ್ರಮದ ಭರವಸೆ: ಯೋಗ ದಿನಾಚರಣೆಯ ಪ್ರಧಾನ ಕಾರ್ಯಕ್ರಮದ ಆತಿಥ್ಯ ವಹಿಸಲು ಮೈಸೂರು ಕಳೆದ 2–3 ವರ್ಷಗಳಿಂದ ಪ್ರಯತ್ನಿಸುತ್ತಿದೆ. ಮುಂದಿನ ವರ್ಷದ ಪ್ರಧಾನ ಕಾರ್ಯಕ್ರಮ ಮೈಸೂರಿನಲ್ಲಿ ನಡೆಸಲು ಆಯುಷ್‌ ಇಲಾಖೆ ಸಿದ್ಧವಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಪ್ಪಿಸಬೇಕಿದೆ. ಅವರು ಒಪ್ಪಿದರೆ ಕಾರ್ಯಕ್ರಮ ಮೈಸೂರಿನಲ್ಲಿ ನಡೆಯಲಿದೆ ಎಂದರು.

ಯುವಕರು ಮುನ್ನಡೆಸಲಿ: ಪತಂಜಲಿ ಯೋಗಪೀಠದ ಸಂಸ್ಥಾಪಕ, ಯೋಗ ಗುರು ರಾಮದೇವ್‌ ಮಾತನಾಡಿ, ‘ಅಂತರರಾಷ್ಟ್ರೀಯ ಯೋಗಾಸನ ಮತ್ತು ಕ್ರೀಡಾ ಫೆಡರೇಷನ್‌’ಅನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯುವಕರಿಗೆ ನೀಡಬೇಕು. ಫೆಡರೇಷನ್‌ನಲ್ಲಿ ಶೇ 99 ರಷ್ಟು ಯುವಕರೇ ಇರಬೇಕು ಎಂದು ಸಚಿವರಿಗೆ ಮನವಿ ಮಾಡಿದರು.

‘ಯೋಗವನ್ನು ಕ್ರೀಡೆಯಾಗಿ ಪರಿಗಣಿಸಿರುವುದು ಸಂತಸದ ವಿಷಯ. ಒಲಿಂಪಿಕ್ಸ್‌ನಂತಹ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಯೋಗವನ್ನೂ ಸೇರಿಸಬೇಕು’ ಎಂದರು. ‘ಹೃದಯ ಸ್ವಾಸ್ಥ್ಯಕ್ಕಾಗಿ ಯೋಗ’ ವಿಷಯದಲ್ಲಿ ಆಯೋಜಿಸಿರುವ ಎರಡು ದಿನಗಳ ಅಂತರರಾಷ್ಟ್ರೀಯ ಯೋಗ ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳ 700ಕ್ಕೂ ಹೆಚ್ಚು ಹಾಗೂ ವಿದೇಶಗಳಿಂದ 40 ಪ್ರತಿನಿಧಿಗಳು
ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.