ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪದಲ್ಲಿ ಜಾಮೀನು ತಿರಸ್ಕೃತವಾದರೂ ಅದನ್ನು ಕೋರ್ಟ್ ಗಮನಕ್ಕೆ ತಾರದೆ ಕೋರ್ಟ್ ಕಣ್ಣಿಗೆ ಮಣ್ಣೆರಚಿ ಸ್ವತಂತ್ರವಾಗಿದ್ದ ಮಹದೇವಪುರ ಠಾಣೆಯ ಪೋಲಿಸ್ ಕಾನ್‌ಸ್ಟೆಬಲ್ ಫಕೀರಪ್ಪ ಹಟ್ಟಿಗೆ ಹೈಕೋರ್ಟ್ ₹1 ಲಕ್ಷ ದಂಡ ವಿಧಿಸಿದೆ.
ಈ ಸಂಬಂಧ ಶಬನಾ ತಾಜ್ (27) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿ ಫಕೀರಪ್ಪ ಅವರನ್ನು ವಶಕ್ಕೆ ಪಡೆಯುವಂತೆ ಡಿಸಿಪಿಗೆ ಆದೇಶಿಸಿದೆ.
‘ಆರೋಪಿಯು ಎರಡು ವಾರಗಳಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ₹1 ಲಕ್ಷ ದಂಡ ಪಾವತಿಸಬೇಕು. ಒಂದು ವೇಳೆ ದಂಡ ಪಾವತಿಸದೇ ಇದ್ದರೆ ರಿಜಿಸ್ಟ್ರಾರ್ ಜನರಲ್ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು’ ಎಂದು ನ್ಯಾಯಪೀಠ ನಿರ್ದೇಶಿಸಿದೆ.
‘ಆರೋಪಿ ಸಂತ್ರಸ್ತೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾರೆ. ನ್ಯಾಯಾಲಯದ ಆದೇಶವನ್ನೂ ಪಾಲಿಸಿಲ್ಲ. ವಾಸ್ತವ ಸಂಗತಿಗಳನ್ನು ಬಹು ಜಾಣ್ಮೆಯಿಂದ ಮುಚ್ಟಿಟ್ಟು ನ್ಯಾಯಾಲಯಗಳ ಹಾದಿ ತಪ್ಪಿಸಿದ್ದಾರೆ. ಇದು ಕಾನೂನಿನ ಸ್ಪಷ್ಟ ದುರುಪಯೋಗ. ಹಾಗಾಗಿ, ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗಿದೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಸಂತ್ರಸ್ತೆಯ ಪರ ಡಿ.ಮೋಹನಕುಮಾರ್ ಹಾಗೂ ಕೆ.ರಾಘವೇಂದ್ರ ಗೌಡ ವಾದ ಮಂಡಿಸಿದ್ದರು.
ಪ್ರಕರಣವೇನು?: ಬೈಲಹೊಂಗಲ ತಾಲ್ಲೂಕಿನ ನೇಗಿನಹಾಳದ ಫಕೀರಪ್ಪ ಅವರು, ಮನೆ ಖಾಲಿ ಮಾಡಿಸುವ ವಿಚಾರದಲ್ಲಿ ಠಾಣೆಗೆ ಬಂದಿದ್ದ ಸಂತ್ರಸ್ತೆಯ ಪರಿಚಯ ಸಂಪಾದಿಸಿ ಆಕೆಯನ್ನು ವಿವಾಹವಾಗುವುದಾಗಿ ನಂಬಿಸಿದ್ದಾರೆ ಮತ್ತು 2019ರಿಂದ 2022ರ ಮಧ್ಯದ ಅವಧಿಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ’ ಎಂಬುದು ಆರೋಪ.
ಈ ಸಂಬಂಧದ ಪ್ರಕರಣದಲ್ಲಿ ಆರೋಪಿಯು ಸೆಷನ್ಸ್ ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು. ಈ ಜಾಮೀನನ್ನು ಹೈಕೋರ್ಟ್ ರದ್ದುಪಡಿಸಿತ್ತು. ಆದರೆ, ‘ಜಾಮೀನು ರದ್ದಾದ ವಿಚಾರವನ್ನು ಫಕೀರಪ್ಪ ಸೆಷನ್ಸ್ ಕೋರ್ಟ್ ಗಮನಕ್ಕೆ ತಾರದೆ ಹಲವು ಸುತ್ತಿನ ವ್ಯಾಜ್ಯಗಳ ಮುಖೇನ ಸ್ವತಂತ್ರವಾಗಿ ತಿರುಗುತ್ತಿದ್ದಾರೆ’ ಎಂದು ಆಕ್ಷೇಪಿಸಿ ದೂರುದಾರಳೂ ಆದ ಸಂತ್ರಸ್ತೆಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.