ADVERTISEMENT

Karnataka Rains: ಸತತ ಮಳೆಗೆ ತತ್ತರಿಸಿದ ಬೆಂಗಳೂರು ಮಹಾನಗರ

ಬೆಂಗಳೂರು ನಗರ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ l ಮಲೆನಾಡಿನಂತಾದ ಬಯಲುಸೀಮೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 22:00 IST
Last Updated 15 ಅಕ್ಟೋಬರ್ 2024, 22:00 IST
ಬೆಂಗಳೂರಿನ ಮರ್ಫಿ ಟೌನ್‌ನಲ್ಲಿ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲೇ ಶಾಲಾ ವಿದ್ಯಾರ್ಥಿಗಳು ಮಂಗಳವಾರ ಸಾಗಿದರು
ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌
ಬೆಂಗಳೂರಿನ ಮರ್ಫಿ ಟೌನ್‌ನಲ್ಲಿ ರಸ್ತೆಯಲ್ಲಿ ನಿಂತ ಮಳೆ ನೀರಿನಲ್ಲೇ ಶಾಲಾ ವಿದ್ಯಾರ್ಥಿಗಳು ಮಂಗಳವಾರ ಸಾಗಿದರು ಪ್ರಜಾವಾಣಿ ಚಿತ್ರ: ಎಸ್‌.ಕೆ. ದಿನೇಶ್‌   

ಬೆಂಗಳೂರು: ನಗರದ ಎಲ್ಲೆಡೆ ಮಂಗಳವಾರ ಮುಂಜಾನೆಯಿಂದ ಮಧ್ಯಾಹ್ನದವರೆಗೆ ಸುರಿದ ಸತತ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು, ಅತಿ ಹೆಚ್ಚಿನ ವಾಹನ ದಟ್ಟಣೆ ಉಂಟಾಯಿತು.

ಯಲಹಂಕ ಹಾಗೂ ಕೆ.ಆರ್‌. ಪುರ ಭಾಗಗಳಲ್ಲಿ ಕೆಲವು ಮನೆಗಳಿಗೆ ಮಳೆ ನೀರು ನುಗ್ಗಿತು.  ಯಲಹಂಕದ ಚೌಡೇಶ್ವರಿ ಬಡಾವಣೆ, ವಿದ್ಯಾರಣ್ಯಪುರ, ಎಚ್‌ಎಎಲ್‌ ವಿಮಾನ ನಿಲ್ದಾಣದಲ್ಲಿ ಅತಿಹೆಚ್ಚು (8.5 ಸೆಂ.ಮೀ) ಮಳೆಯಾಯಿತು. ವಿದ್ಯಾರ್ಥಿಗಳು ಶಾಲೆ–ಕಾಲೇಜುಗಳಿಗೆ ಮಳೆಯಲ್ಲೇ ಸಾಗಿದರು. ಕಚೇರಿಗಳಿಗೆ ಹೋಗಲು ನಾಗರಿಕರು ಪರದಾಡಿದರು.

ಹವಾಮಾನ ಇಲಾಖೆ ಎರಡು ದಿನ ‘ಆರೆಂಜ್‌ ಅಲರ್ಟ್‌’ ಸೂಚನೆ ನೀಡಿರು
ವುದರಿಂದ ಬೆಂಗಳೂರು ನಗರ ಜಿಲ್ಲೆಯ ಅಂಗನವಾಡಿ, ಖಾಸಗಿ, ಅನುದಾನಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ಅ.16ರಂದು (ಬುಧವಾರ) ರಜೆ ಘೋಷಿಸಲಾಗಿದೆ. 17ರಂದು ವಾಲ್ಮೀಕಿ ಜಯಂತಿಯಾಗಿದ್ದು, ಅಂದು ಸರ್ಕಾರಿ ರಜೆ ಇರುತ್ತದೆ ಎಂದೂ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್ ತಿಳಿಸಿದ್ದಾರೆ.

ADVERTISEMENT

ನಗರದಲ್ಲಿರುವ ಐ.ಟಿ. ಬಿ.ಟಿ ಕಂಪನಿಗಳ ಉದ್ಯೋಗಿಗಳಿಗೆ ಅ.14ರಂದು ಮನೆ
ಯಿಂದಲೇ ಕೆಲಸ ನಿರ್ವಹಿಸಲು ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಪ್ರಧಾನ ವ್ಯವಸ್ಥಾಪಕರು ಸೂಚಿಸಿದ್ದಾರೆ.

ಬೆಂಗಳೂರು ಗ್ರಾಮಾಂತರ: ಬಯಲುಸೀಮೆಯ ಜಿಲ್ಲೆಗಳು ಬೆಳಗ್ಗೆಯಿಂದ ಇಡೀ ದಿನ ಬಿಟ್ಟು ಬಿಡದೆ ಸುರಿದ ಮಳೆಯಿಂದ ಮಲೆನಾಡಿನಂತಾಗಿದ್ದವು.

ತುಮಕೂರು ಜಿಲ್ಲೆಯಾದ್ಯಂತ ಸೋಮವಾರ ರಾತ್ರಿ ಹಾಗೂ ಮಂಗಳವಾರ ಒಂದೇ ಸಮನೆ ಮಳೆ ಸುರಿಯಿತು. ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಾಧಾರಣ ಮತ್ತು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಿನವಿಡೀ ತುಂತುರು ಮಳೆಯಾಯಿತು.

ಚಿಕ್ಕಬಳ್ಳಾಪುರ ತಾಲ್ಲೂಕಿನ ‍ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟವನ್ನು ಸಂಪೂರ್ಣವಾಗಿ ಮಂಜು ಆವರಿಸಿತ್ತು.

ಬಿರುಸಿನ ಮಳೆ (ಹುಬ್ಬಳ್ಳಿ ವರದಿ): ಧಾರವಾಡ, ಉತ್ತರ ಕನ್ನಡ, ಬೆಳಗಾವಿ, ಗದಗ ಜಿಲ್ಲೆಗಳಲ್ಲಿ ವಿವಿಧೆಡೆ ಗುಡುಗು ಸಹಿತ ಬಿರುಸಿನ ಮಳೆ ಸುರಿಯಿತು. ಗದಗ ತಾಲ್ಲೂಕಿನಲ್ಲಿ ರಾತ್ರಿ ಉತ್ತಮ ಮಳೆ ಸುರಿಯಿತು.

3 ಗೇಟ್‌ನಿಂದ ನೀರು ಹೊರಕ್ಕೆ: ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣದಲ್ಲಿ ಇಳಿಕೆ ಆಗಿರುವುದರಿಂದ ಮಂಗಳವಾರ ಮೂರು ಕ್ರಸ್ಟ್‌ಗೇಟ್‌ಗಳಿಂದ 34 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಯಿತು. ಹೀಗಾಗಿ ಹಂಪಿಯ ಪುರಂದರ ಮಂಟಪ ಮತ್ತೆ ಗೋಚರಿಸಿತು.

ಮೈಸೂರು ವರದಿ: ಮೈಸೂರು ಭಾಗದಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಬಿಟ್ಟೂ ಬಿಟ್ಟು ಸಾಧಾರಣ ಮಳೆ ಬಿದ್ದಿತು. ದಿನವಿಡೀ ಶೀತಗಾಳಿ ಬೀಸುತ್ತಿತ್ತು. ಮಂಡ್ಯ ಜಿಲ್ಲೆಯ ನಾಗಮಂಗಲ ಸೇರಿದಂತೆ ವಿವಿಧೆಡೆ ಬಿರುಸಿನ ಮಳೆಯಾಗಿದೆ. ಹಾಸನ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದ ತುಂತುರು ಮಳೆ ಬಿದ್ದಿತು. ಚಾಮರಾಜನಗರದಲ್ಲೂ ತುಂತುರು ಮಳೆಯಾಗಿದೆ.

(ದಾವಣಗೆರೆ ವರದಿ): ಚಿತ್ರದುರ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆ ಸುರಿದ ಕಾರಣ ಸಾರ್ವಜನಿಕರು ಚಳಿಯಿಂದ ನಡುಗಿದರು.

ನಸುಕಿನಲ್ಲೇ ಆರಂಭವಾಗಿದ್ದ ಮಳೆ ಬೆಳಿಗ್ಗೆ 10 ಗಂಟೆವರೆಗೂ ಸುರಿಯಿತು. ಮೊಳಕಾಲ್ಮುರು ಪಟ್ಟಣಕ್ಕೆ ಹೊಂದಿಕೊಂಡಿರುವ ಬೆಟ್ಟದಲ್ಲಿನ ಸೀಗಲಗುಂದಿ ಕೆರೆ ಕೋಡಿ ಬಿದ್ದಿದೆ. ದಾವಣಗೆರೆ ನಗರ, ಚನ್ನಗಿರಿ, ಹೊನ್ನಾಳಿ, ನ್ಯಾಮತಿ, ಸಂತೇಬೆನ್ನೂರು, ಸಾಸ್ವೆಹಳ್ಳಿ ಹಾಗೂ ಮಾಯಕೊಂಡದಲ್ಲಿ ಮಳೆ ಬಿದ್ದಿದೆ. ಶಿವಮೊಗ್ಗ ಜಿಲ್ಲೆಯ ವಿವಿಧೆಡೆಯೂ ಹದ ಮಳೆಯಾಗಿದೆ.

ಚಿಕ್ಕಮಗಳೂರು ವರದಿ: ಜಿಲ್ಲೆಯಾದ್ಯಂತ ದಿನವಿಡೀ ಜಿಟಿಜಿಟಿ ಮಳೆ ಸುರಿಯಿತು. ಚಿಕ್ಕಮಗಳೂರು, ತರೀಕೆರೆ ಸುತ್ತಮುತ್ತ ಜೋರು ಮಳೆಯಾಗಿದ್ದು, ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ತಾಲ್ಲೂಕಿನಲ್ಲಿ ಸಣ್ಣದಾಗಿ ಮಳೆ ಸುರಿಯಿತು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಮಿಂಚುಗಳಿಂದ ಕೂಡಿದ ಬಿರುಸಿನ ಮಳೆಯಾಗಿದೆ. ಕೆಲವೆಡೆ ಮಂಗಳವಾರ ಬೆಳಿಗ್ಗೆ ಬಿಟ್ಟು ಬಿಟ್ಟು ಸಾಧಾರಣ ಮಳೆಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗಿದೆ.

ಬಂಡೆ ಉರುಳಿ ಇಬ್ಬರು ಮಕ್ಕಳು ಸೇರಿ ಮೂವರ ಸಾವು

ಕಲಬುರಗಿ: ಕಲ್ಯಾಣ ಕರ್ನಾಟಕದ ರಾಯಚೂರು ಹಾಗೂ ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ಉತ್ತಮ ಮಳೆ ಸುರಿದಿದ್ದು ಮಳೆ ಸಂಬಂಧಿ ಅವಘಡದಿಂದಾಗಿ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಗೌಡೂರು ತಾಂಡಾದ ಜಮೀನಿನಲ್ಲಿ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದಾರೆ. ಮಂಜುನಾಥ (9) ವೈಶಾಲಿ (7) ಹಾಗೂ ರಘು ಮಾನಪ್ಪ (18) ಮೃತರು.ಮಂಜುನಾಥ ಹಾಗೂ ವೈಶಾಲಿ ಪಾಲಕರೊಂದಿಗೆ ಹೊಲಕ್ಕೆ ಹೋಗಿದ್ದರು. ದನ ಮೇಯಿಸುತ್ತಿದ್ದಾಗ ಜಿಟಿ ಜಿಟಿ ಮಳೆ ಸುರಿದ ಕಾರಣ ಮಕ್ಕಳು ಕಲ್ಲು ಬಂಡೆಯ ಬಳಿ ಕುಳಿತುಕೊಂಡಿದ್ದರು. ಈ ವೇಳೆ ಮಣ್ಣು ಕುಸಿದು ಬಂಡೆ ಮಕ್ಕಳ ಮೇಲೆ ಉರುಳಿದೆ. ಮಕ್ಕಳ ಚೀರಾಟ ಕೇಳಿ ಪೋಷಕರು ಬಂಡೆ ಎತ್ತಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಮಂಜುನಾಥ ಹಾಗೂ ವೈಶಾಲಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ರಕ್ಷಣೆ ಮಾಡಲು ಹೋಗಿದ್ದ ರಘು ಮಾನಪ್ಪ ಅವರ ಕಾಲು ಮುರಿದಿತ್ತು. ಲಿಂಗಸುಗೂರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆದಲ್ಲಿ ಸಾವನ್ನಪ್ಪಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. ಕಲಬುರಗಿ ನಗರ ಸೇರಿದಂತೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮಳೆ ಸುರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.