ADVERTISEMENT

ಬಾಲಬ್ರೂಯಿಯಲ್ಲೇ ‘ಸಾಂವಿಧಾನಿಕ ಕ್ಲಬ್‌’

ಪಾರಂಪರಿಕ ಕಟ್ಟಡದ ಸ್ವರೂಪ ಬದಲಿಸದೆ, ಆವರಣದಲ್ಲಿನ ಮರ ಕಡಿಯದೆ ಶಾಸಕರಿಗೆ ‘ಕ್ಲಬ್‌’

ರಾಜೇಶ್ ರೈ ಚಟ್ಲ
Published 6 ಡಿಸೆಂಬರ್ 2021, 1:54 IST
Last Updated 6 ಡಿಸೆಂಬರ್ 2021, 1:54 IST
ಬಾಲಬ್ರೂಯಿ ಅತಿಥಿ ಗೃಹ
ಬಾಲಬ್ರೂಯಿ ಅತಿಥಿ ಗೃಹ   

ಬೆಂಗಳೂರು: ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ ‘ಬಾಲಬ್ರೂಯಿ ಅತಿಥಿಗೃಹ’ವನ್ನು ‘ಕರ್ನಾಟಕ ವಿಧಾನಮಂಡಲದ ಸಾಂವಿಧಾನಿಕ ಕ್ಲಬ್‌’ (ಕಾನ್‌ಸ್ಟಿಟ್ಯೂಷನ್‌ ಕ್ಲಬ್‌) ಆಗಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಆ ಮೂಲಕ, ಈ ಪಾರಂಪರಿಕ ಕಟ್ಟಡ ಶಾಸಕರ ಮನೋರಂಜನಾ ಕ್ಲಬ್‌ ಆಗಿ ಪರಿವರ್ತನೆ ಆಗಲಿದೆ.

‘ಸದ್ಯ ಇರುವ ಅತಿಥಿಗೃಹ ಕಟ್ಟಡದ ಮಾರ್ಪಾಡಿಗೆ ಕಾರಣವಾಗುವ ಯಾವುದೇ ಹೊಸ ನಿರ್ಮಾಣಕ್ಕೆ ಅವಕಾಶ ನೀಡದೆ ಮತ್ತು ಆವರಣದಲ್ಲಿರುವ ಮರಗಳನ್ನು ಕಡಿಯದೆಯೇ ಕ್ಲಬ್‌ ಆಗಿ ಬಳಸಲು ಅವಕಾಶ ನೀಡಬಹುದು. ಕ್ಲಬ್‌ ಆಗಿ ಮಾಡಲು ಅಗತ್ಯವಿರುವ ಸೌಲಭ್ಯಗಳು‌ ಮತ್ತು ವಾಸ್ತುಶಿಲ್ಪ ವಿನ್ಯಾಸದ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ವಿಧಾನಮಂಡಲ ಸಚಿವಾಲಯಕ್ಕೆ ಸೂಚಿಸಬಹುದು’ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಅವರು ಬರೆದ ಟಿಪ್ಪಣಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಆರ್‌ಟಿಐ ಕಾರ್ಯಕರ್ತರೊಬ್ಬರು ಪಡೆದ ಮಾಹಿತಿಯಿಂದ ಈ ವಿಷಯ ಗೊತ್ತಾಗಿದೆ.

ADVERTISEMENT

ಲೋಕಸಭಾ ಸದಸ್ಯರ ಅನುಕೂಲಕ್ಕಾಗಿ ನವದೆಹಲಿಯಲ್ಲಿರುವ ‘ಸಾಂವಿಧಾನಿಕ ಕ್ಲಬ್‌’ ಮಾದರಿಯಂತೆ ರಾಜ್ಯದಲ್ಲಿಯೂ ಕರ್ನಾಟಕ ವಿಧಾನಮಂಡಲದ ಸದಸ್ಯರಿಗೆ ಕ್ಲಬ್‌ ಆರಂಭಿಸುವ ಉದ್ದೇಶದಿಂದ ಬಾಲಬ್ರೂಯಿ ಅತಿಥಿಗೃಹವನ್ನು ವಿಧಾನಸಭೆ ಸಚಿವಾಲಯಕ್ಕೆ ಹಸ್ತಾಂತರಿಸಲು ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌. ಯಡಿಯೂರಪ್ಪ 2009ರಲ್ಲಿಯೇ ಆದೇಶಿಸಿದ್ದರು.ಆದರೆ, ಈ ಪ್ರಸ್ತಾವನಾನಾ ಕಾರಣಗಳಿಂದಾಗಿ ನನೆಗುದಿಗೆ ಬಿದ್ದಿತ್ತು.

ಸಾಂವಿಧಾನಿಕ ಕ್ಲಬ್‌ ಸ್ಥಾಪಿಸಲು ಸೂಕ್ತ ಜಾಗ ಇಲ್ಲದೇ ಇರುವುದರಿಂದ ಈ ಮೊದಲೇ ಗುರುತಿಸಿದ್ದ ಬಾಲಬ್ರೂಯಿ ಅತಿಥಿಗೃಹವನ್ನು ಈ ಉದ್ದೇಶಕ್ಕೆ ಮಂಜೂರು ಮಾಡುವಂತೆ ವಿಧಾನಪರಿಷತ್‌ ಬಿಜೆಪಿ ಸದಸ್ಯ ಎನ್. ರವಿಕುಮಾರ್‌ ಅವರುಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇತ್ತೀಚೆಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲಿಸಿ, ತಕ್ಷಣ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದರು.

‘ಸದ್ಯ ಇಲ್ಲಿ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ಕಚೇರಿ (ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆಯ ಹಾನಿ ವಸೂಲಿಗೆ ಸರ್ಕಾರ ರಚಿಸಿದ ಕ್ಲೈಮ್‌ ಕಮಿಷನ್‌) ಕಾರ್ಯನಿರ್ವಹಿಸುತ್ತಿದೆ. ಐತಿಹಾಸಿಕ ಮಹತ್ವ ಪಡೆದಿರುವ ಈ ಅತಿಥಿಗೃಹಕ್ಕೆ ಹಿಂದೆ ಮಹಾತ್ಮ ಗಾಂಧಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ ಟ್ಯಾಗೋರ್‌ ಭೇಟಿ ನೀಡಿದ್ದಾರೆ. ಹೀಗಾಗಿ,ಈ ಕಟ್ಟಡವನ್ನು 'ಬಾಲಬ್ರೂಯಿ ಅತಿಥಿಗೃಹ'ವೆಂದು ಯಥಾಸ್ಥಿತಿಯಲ್ಲಿ ಮುಂದುವರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಮುಖ್ಯಮಂತ್ರಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್‌) ಕಾರ್ಯದರ್ಶಿ ಕಡತ ಮಂಡಿಸಿದ್ದರು. ಆದರೆ, ಈ ಬಗ್ಗೆ ಮರು ಚರ್ಚಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಭಾಧ್ಯಕ್ಷರು ನಡೆಸಿದ ಪರಿಶೀಲನಾ ಸಭೆಗೆ ಕಡತ ಮಂಡಿಸಲಾಗಿತ್ತು.

‘ಬಾಲಬ್ರೂಯಿ ಅತಿಥಿಗೃಹವನ್ನು ಸಾಂವಿಧಾನಿಕ ಕ್ಲಬ್‌ ಆಗಿ ಪರಿವರ್ತಿಸುವ ವಿಷಯದಲ್ಲಿ ಸಾರ್ವಜನಿಕರ ವಿರೋಧ ಇರುವುದರಿಂದ ಮತ್ತು ಈಗಾಗಲೇ ಈ ವಿಚಾರದಲ್ಲಿ ಕೋರ್ಟ್‌ಗೆ ಸಾರ್ವನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಕೆ ಆಗಿರುವುದರಿಂದ ಕ್ಲಬ್‌ ಆಗಿ ಪರಿವರ್ತಿಸುವ ಪ್ರಸ್ತಾವಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯುವುದು ಸೂಕ್ತ' ಎಂದೂಮುಖ್ಯ ಕಾರ್ಯದರ್ಶಿ ಅಭಿಪ್ರಾಯಪಟ್ಟಿದ್ದಾರೆ.

‘ಬಾಲಬ್ರೂಯಿ’ ಇತಿಹಾಸ

ಬಾಲಬ್ರೂಯಿ ಅತಿಥಿಗೃಹ ಕಟ್ಟಡ ಸದ್ಯ ಡಿಪಿಎಆರ್ ಅಧೀನದಲ್ಲಿದೆ. 1850ರಲ್ಲಿ ನಿರ್ಮಾಣವಾಗಿರುವ ಈ ಕಟ್ಟಡ, ಆರಂಭದಲ್ಲಿ ಮೈಸೂರು ಸಂಸ್ಥಾನದ ಮುಖ್ಯ ಆಯುಕ್ತರಾಗಿದ್ದ ಬ್ರಿಟಿಷ್‌ ಸೇನಾಧಿಕಾರಿ ಸರ್‌. ಮಾರ್ಕ್‌ ಕಬ್ಬನ್‌ ಅವರ ನಿವಾಸವಾಗಿತ್ತು. ಬ್ರಿಟಿಷರು ಬಾಲಬ್ರೂಯಿಯನ್ನು ಮೈಸೂರು ದೊರೆ ಚಾಮರಾಜ ಒಡೆಯರ್‌ ಅವರಿಗೆ ನೀಡಿದ್ದು, 14 ಎಕರೆಯಲ್ಲಿ ಈ ಜಾಗ ಹರಡಿದೆ. ಈ ಕಟ್ಟಡ 1947ರವರೆಗೆ ವಿವಿಧ ಆಯುಕ್ತರ ಅಧಿಕೃತ ನಿವಾಸ ಆಗಿತ್ತು. ಬಳಿಕ ಸರ್‌. ಎಂ ವಿಶ್ವೇಶ್ವರಯ್ಯನವರ ಕಚೇರಿಯೂ ಇಲ್ಲಿತ್ತು. ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಸಿ. ರೆಡ್ಡಿ, ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ. ಜತ್ತಿ, ಎಸ್‌. ನಿಜಲಿಂಗಪ್ಪ ಮತ್ತು ದೇವರಾಜ ಅರಸು ಅವರು ಇದನ್ನು ಅಧಿಕೃತ ನಿವಾಸವಾಗಿ ಮಾಡಿಕೊಂಡಿದ್ದರು. ಎಸ್‌. ಆರ್‌. ಬೊಮ್ಮಾಯಿ ಕೂಡಾ ತಮ್ಮ ಅಧಿಕಾರ ಅವಧಿಯಲ್ಲಿ ಸ್ವಲ್ಪ ಅವಧಿ ಇಲ್ಲಿ ವಾಸವಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.