ಬೆಂಗಳೂರು: ಮುಂದಿನ ಮೂರು ವರ್ಷಗಳಲ್ಲಿ 64 ಹೊಸ ತಾಲ್ಲೂಕುಗಳಿಗೆ ಸ್ವಂತ ಆಡಳಿತ ಕಚೇರಿ ನಿರ್ಮಾಣ ಮಾಡಿಕೊಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಭರವಸೆ ನೀಡಿದರು.
ವಿಧಾನಸಭೆಯಲ್ಲಿ ಸೋಮವಾರ ಬಿಜೆಪಿಯ ಭಾಗೀರಥಿ ಮುರುಳ್ಯ ಅವರ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದರು.
‘ಹೊಸ ತಾಲ್ಲೂಕುಗಳಲ್ಲಿ ಎಲ್ಲಾ ಇಲಾಖೆಗಳ ಕಚೇರಿಗಳನ್ನು ಆರಂಭಿಸುವ ಬಗ್ಗೆ ನಾನು ಉತ್ತರ ನೀಡುವುದು ಸಮಂಜವಲ್ಲ. ಮುಖ್ಯಮಂತ್ರಿಯವರ ಕಡೆಯಿಂದ ಉತ್ತರ ಕೊಡಿಸಲು ಪ್ರಯತ್ನಿಸುತ್ತೇನೆ. ಆದರೆ, ಹೊಸ ತಾಲ್ಲೂಕುಗಳಿಗೆ ಸ್ವಂತ ಆಡಳಿತ ಕಚೇರಿ ಮುಂದಿನ ಮೂರು ವರ್ಷ ನಿರ್ಮಿಸಿಕೊಡುತ್ತೇವೆ’ ಎಂದು ಹೇಳಿದರು.
‘ಹೊಸ ತಾಲ್ಲೂಕುಗಳು ರಚನೆಯಾಗಿ 6 ವರ್ಷಗಳಾಗಿದ್ದರೂ 14 ತಾಲ್ಲೂಕುಗಳಲ್ಲಿ ಮಾತ್ರ ಸ್ವಂತ ಕಟ್ಟಡ ನಿರ್ಮಿಸಲಾಗಿದೆ. ಉಳಿದ ತಾಲ್ಲೂಕುಗಳಿಗೆ ಇನ್ನೂ ಸರ್ಕಾರಿ ಕಟ್ಟಡಗಳು ಮಂಜೂರೇ ಆಗಿಲ್ಲ. ಈ ಬಗ್ಗೆ ನಾನು ಹಿಂದಿನ ಅಧಿವೇಶನದಲ್ಲೇ ಹೇಳಿದ್ದೇನೆ’ ಎಂದು ಕೃಷ್ಣಬೈರೇಗೌಡ ಹೇಳಿದರು.
ಕಂಬಳಕ್ಕೆ ಹೆಚ್ಚು ಅನುದಾನ ಸಿಎಂ ಜತೆ ಚರ್ಚೆ:
ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜಿಲ್ಲಾ ಸಮಿತಿಗಳಿಂದ ನಡೆಯುವ 10 ಕಂಬಳಗಳಿಗೆ ತಲಾ ₹10 ಲಕ್ಷ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ತಿಳಿಸಿದರು. ಕಾಂಗ್ರೆಸ್‌ನ ಅಶೋಕ್ ಕುಮಾರ್ ರೈ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು. ಬಿಜೆಪಿ ಅವಧಿಯಲ್ಲಿ ತಲಾ ₹10 ಲಕ್ಷ ನೀಡಲಾಗುತ್ತಿತ್ತು. ಆ ಬಳಿಕ ಅದನ್ನು ಇಳಿಸಲಾಯಿತು. ತಲಾ ₹10 ಲಕ್ಷವೇ ನೀಡಬೇಕು ಎಂದು ಬಿಜೆಪಿ ವಿ.ಸುನಿಲ್‌ಕುಮಾರ್ ಆಗ್ರಹಿಸಿದರು.
ಉನ್ನತ ಶಿಕ್ಷಣ ಸಚಿವರ ಜತೆ ಚರ್ಚೆ
ಗಂಗೂಬಾಯಿ ಹಾನಗಲ್ ಗುರುಕುಲದ ಆಡಳಿತವನ್ನು ಮೈಸೂರು ವಿಶ್ವವಿದ್ಯಾಲಯದ ಬದಲಿಗೆ ಕನ್ನಡ ಸಂಸ್ಕೃತಿ ಇಲಾಖೆಗೆ ವಹಿಸುವ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜತೆ ಸಭೆ ನಡೆಸಲು ಕೋರಲಾಗುವುದು ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.
ಬಿಜೆಪಿಯ ಮಹೇಶ್ ಟೆಂಗಿನಕಾಯಿ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿದರು.
ಈ ಗುರುಕುಲಕ್ಕೆ ₹1.45 ಕೋಟಿ ಅನುದಾನ ಬೇಕಾಗುತ್ತದೆ. ಅದನ್ನು ಈಗ ನಿಲ್ಲಿಸಲಾಗಿದೆ. ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಗುರುಕುಲವನ್ನು ಉನ್ನತ ಶಿಕ್ಷಣ ಇಲಾಖೆಗೆ ವರ್ಗಾಯಿಸಿ, ಹೊಣೆಗಾರಿಕೆಯನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ನೀಡಲಾಗಿದೆ. ಆದರೆ, ಮೈಸೂರು ವಿಶ್ವವಿದ್ಯಾಲಯವೇ ಮುಳುಗುವ ಹಡಗಾಗಿದೆ ಎಂದು ಮಹೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.