ಬೆಂಗಳೂರು: ಬಡವಾಣೆ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಬದಲಾಗಿ ಅದರ ಮಾಲೀಕರಿಗೆ ಐದು ದಶಕ ಕಳೆದರೂ ಪರಿಹಾರ ನೀಡದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಡೆಗೆ ಕಿಡಿ ಕಾರಿರುವ ಹೈಕೋರ್ಟ್, ‘ಬಿಡಿಎ ಬುದ್ಧಿ ಕಲಿಯಲಿ ಮತ್ತು ಭವಿಷ್ಯದಲ್ಲಿ ಇಂತಹ ನಿರ್ಲಕ್ಷ್ಯ ಮರುಕಳಿಸಬಾರದು‘ ಎಂದು ಎಚ್ಚರಿಸಿ ₹ 25 ಸಾವಿರ ದಂಡ ವಿಧಿಸಿದೆ.
ಈ ಸಂಬಂಧ ಆರ್.ಟಿ.ನಗರದ ಕಾವಲ್ ಭೈರಸಂದ್ರ ನಿವಾಸಿ ಎ.ಲಕ್ಷ್ಮೀಪತಿ ಸಲ್ಲಿಸಿದ್ದ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರಾಳೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
‘ಭೂ ಮಾಲೀಕರಿಗೆ ಪಾವತಿಸಬೇಕಾದ ₹45,150 ಪರಿಹಾರ ಮೊತ್ತ ಹಾಗೂ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ ₹ 25 ಸಾವಿರವನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು‘ ಎಂದು ಆದೇಶಿಸಿ ಅರ್ಜಿ ವಿಲೇವಾರಿ ಮಾಡಿತು.
‘ಮಠದಹಳ್ಳಿಯಲ್ಲಿ ಅರ್ಜಿದಾರರಿಗೆ ಸೇರಿದ 3 ಎಕರೆ ಜಮೀನನ್ನು ಬಿಡಿಎ ಬಡಾವಣೆ ನಿರ್ಮಾಣಕ್ಕಾಗಿ 1972–73ರಲ್ಲೇ ಸ್ವಾಧೀನಪಡಿಸಿ ಕೊಂಡಿದೆ. ಇದಕ್ಕಾಗಿ ₹45,150 ಪರಿಹಾರವೂ ನಿಗದಿಯಾಗಿತ್ತು. ಆದರೆ, ಐದು ದಶಕ ಕಳೆದರೂ ಪರಿಹಾರ ಸಿಕ್ಕಿಲ್ಲ. ಭೂಮಿ ಕಳೆದುಕೊಂಡವರು ನ್ಯಾಯ ಪಡೆದುಕೊಳ್ಳಲು ಕೋರ್ಟ್, ಕಚೇರಿ ಅಲೆದಿದ್ದಾರೆ. ಭೂಮಾಲೀಕರ ಪರವಾಗಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠವೂ ಆದೇಶ ಮಾಡಿದೆ. ಆದರೂ ಆದೇಶ ಪಾಲನೆ ಮಾಡಿಲ್ಲ. ಇದು ಬಿಡಿಎ ನಿರ್ಲಕ್ಷ್ಯಕ್ಕೆ ಕೈಗನ್ನಡಿ‘ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಭೂ ಪರಿಹಾರ ಸಂಬಂಧ 2022ರ ನವೆಂಬರ್ 3ರಂದು ಏಕಸದಸ್ಯ ನ್ಯಾಯಪೀಠ ಆದೇಶಿಸಿತ್ತು. ‘ಬಿಡಿಎ ಈ ಆದೇಶ ಪಾಲನೆ ಮಾಡಿಲ್ಲ‘ ಎಂದು ಆರೋಪಿಸಿ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿತ್ತು. ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಡಿಎ ಆಯುಕ್ತ ಕುಮಾರ ನಾಯ್ಕ್, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.