ADVERTISEMENT

ಬಿಬಿಸಿ,ನೆಟ್‌ಫ್ಲಿಕ್ಸ್‌ ವಿರುದ್ಧದ ನ್ಯಾಯಾಂಗ ನಿಂದನೆ: ವಿಚಾರಣೆಗೆ ದಿನಾಂಕ ನಿಗದಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 21:47 IST
Last Updated 18 ಜನವರಿ 2024, 21:47 IST
ಹೈಕೋರ್ಟ್‌
ಹೈಕೋರ್ಟ್‌   

ಪ್ರಜಾವಾಣಿ ವಾರ್ತೆ

ಬೆಂಗಳೂರು: ಹೈಕೋರ್ಟ್‌ ನೀಡಿದ್ದ ಮಧ್ಯಂತರ ನಿರ್ಬಂಧಕ ಆದೇಶವನ್ನು ಲೆಕ್ಕಿಸದೆ, ಕರ್ನಾಟಕದ ಸಂಪದ್ಭರಿತ ಜೀವವೈವಿಧ್ಯವನ್ನು ಪ್ರಸ್ತುತಪಡಿಸುವ 52 ನಿಮಿಷಗಳ ಸಾಕ್ಷ್ಯಚಿತ್ರವನ್ನು ವಿವಿಧ ದೃಶ್ಯ ಮಾಧ್ಯಮಗಳ ಮೂಲಕ ಪ್ರಸಾರ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಮತ್ತು ಕೆಲವು ಸಂಸ್ಥೆಗಳ ಮೇಲೆ ನ್ಯಾಯಾಂಗ ನಿಂದನೆಯ ದೋಷಾರೋಪಣೆ ನಿಗದಿಪಡಿಸಿರುವ ಹೈಕೋರ್ಟ್, ಫೆಬ್ರುವರಿ 8ರಿಂದ ವಿಚಾರಣೆ ಕೈಗೆತ್ತಿಕೊಳ್ಳಲಿದೆ. 

ಈ ಕುರಿತಂತೆ ಉತ್ತರ ಕನ್ನಡ ಜಿಲ್ಲೆಯ ಜೊಯಿಡಾ ತಾಲ್ಲೂಕಿನ ಸೋನಾರ್‌ವಾಡ ನಿವಾಸಿಯಾದ ರವೀಂದ್ರ ಎನ್‌.ರೆಡ್‌ಕರ್‌ ಮತ್ತು ಬೆಂಗಳೂರಿನ ಆರ್‌.ಕೆ.ಉಲ್ಲಾಸ್ ಕುಮಾರ್ ಸಲ್ಲಿಸಿರುವ ಸಿವಿಲ್‌ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ದೋಷಾರೋಪ ನಿಗದಿಪಡಿಸಿದ ನಂತರ ಫೆಬ್ರುವರಿ 8ರಿಂದ ವಿಚಾರಣೆ ಆರಂಭಿಸುವುದಾಗಿ ಆದೇಶಿಸಿತು. ವಿಚಾರಣೆ ವೇಳೆ ಪ್ರಕರಣದ ಎಲ್ಲಾ ಆರೋಪಿಗಳು ಭೌತಿಕವಾಗಿ ಮತ್ತು ವಿದೇಶದಲ್ಲಿರುವ ವ್ಯಕ್ತಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಾಪದಲ್ಲಿ ಹಾಜರಾಗಿದ್ದರು. 

ADVERTISEMENT

ಆರೋಪಿಗಳಾದ ಬೆಂಗಳೂರಿನ ಶರತ್‌ ಚಂಪಾಟಿ, ಕಲ್ಯಾಣ ವರ್ಮಾ, ಜೆ.ಎಸ್.ಅಮೋಘವರ್ಷ, ಮೆಸರ್ಸ್‌ ವೈಲ್ಡ್‌ ಕರ್ನಾಟಕ ಸಂಸ್ಥೆ, ಮೆಸರ್ಸ್‌ ಮಡ್‌ಸ್ಕಿಪ್ಪರ್‌ ಲ್ಯಾಬ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ನಿರ್ದೇಶಕ (ಜೆ.ಎಸ್.ಅಮೋಘವರ್ಷ), ಮೆಸರ್ಸ್‌ ಐಕಾನ್‌ ಫಿಲ್ಮ್ಸ್‌ ಲಿಮಿಟೆಡ್‌ ಕಂಪನಿಯ ಪ್ರತಿನಿಧಿ ಲಾರಾ ಮಾರ್ಷಲ್‌, ಮೆಸರ್ಸ್‌ ಐಟಿವಿ ಸ್ಟುಡಿಯೋಸ್‌ ಗ್ಲೋಬಲ್‌ ಡಿಸ್ಟ್ರಿಬ್ಯೂಷನ್‌ ಲಿಮಿಟೆಡ್‌ ಕಂಪನಿಯ ಪ್ರತಿನಿಧಿ ಭಾರ್ತಿ ಮಿತ್ತಲ್‌, ಮೆಸರ್ಸ್‌ ಡಿಸ್ಕವರಿ ಕಮ್ಯುನಿಕೇಷನ್‌ ಇಂಡಿಯಾದ ಶ್ರೀಮತಿ ಮೇಘಾ ಅರಿಯೇಝ್‌ ಟಾಟಾ, ಬ್ರಿಟಿಷ್‌ ಬ್ರಾಡ್‌ಕಾಸ್ಟಿಂಗ್‌ ಕಾರ್ಪೊರೇಷನ್‌ (ಬಿಬಿಸಿ) ಕಂಪನಿಯ ನವದೆಹಲಿ ಪ್ರತಿನಿಧಿ ನೀರಜ್‌ ನಿರಾಶ್‌ ಮತ್ತು ಮುಂಬೈನ ಮೆಸರ್ಸ್‌ ನೆಟ್‌ಫ್ಲಿಕ್ಸ್‌ ಎಂಟರ್‌ಟೈನ್‌ಮೆಂಟ್‌ ಸರ್ವೀಸಸ್‌ ಇಂಡಿಯಾ ಲಿಮಿಟೆಡ್‌ ಕಂಪನಿಯ ನಿರ್ದೇಶಕ ಕಿರಣ್‌ ಕುಮಾರ್ ದೇಸಾಯಿ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆಯ ವಿವಿಧ ಕಲಂಗಳ ಅಡಿಯಲ್ಲಿ ದೋಷಾರೋಪ ನಿಗದಿಪಡಿಸಲಾಯಿತು.

ಅರ್ಜಿದಾರರ ಪರ ಹಿರಿಯ ವಕೀಲ ಬಿ.ಕೆ.ಸಂಪತ್‌ ಕುಮಾರ್ ವಾದ ಮಂಡಿಸಿದರು. ಸೂರಜ್‌ ಸಂಪತ್‌ ಪ್ರಕರಣದ ವಕಾಲತ್ತು ವಹಿಸಿದ್ದಾರೆ.

ಪ್ರಕರಣವೇನು?: ‘ಸಾಕ್ಷ್ಯಚಿತ್ರದ ಭಾಗಗಳು ಅಥವಾ ಕಚ್ಚಾ ದೃಶ್ಯಗಳನ್ನು ಪ್ರಸಾರ ಮಾಡಬಾರದು’ ಎಂದು ಹೈಕೋರ್ಟ್ 2021ರ ಜೂನ್‌ 29ರಂದು ಮಧ್ಯಂತರ ಆದೇಶ ನೀಡಿತ್ತು. ‘ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠ ನೀಡಿದ್ದ ಈ ಮಧ್ಯಂತರ ಆದೇಶದ ಹೊರತಾಗಿಯೂ, ಆರೋಪಿಗಳು ಸಾಕ್ಷ್ಯಚಿತ್ರದ ತುಣುಕುಗಳನ್ನು ವಿವಿಧ ವಿಧಾನಗಳ ಮೂಲಕ ಹಲವಾರು ದೇಶಗಳಲ್ಲಿ 2023ರ ಡಿಸೆಂಬರ್‌ವರೆಗೆ ಪ್ರಸಾರ ಮಾಡಿದ್ದಾರೆ’ ಎಂಬುದು ದೂರುದಾರರ ಆರೋಪ.

ಆರೋಪಕ್ಕೆ ಸಂಬಂಧಿಸಿದಂತೆ ಆರೋಪಿಗಳು ಈ ಹಿಂದಿನ ವಿಚಾರಣೆ ವೇಳೆ ಕ್ಷಮಾಪಣೆ ಕೋರಿ ಸಾಂಕೇತಿಕವಾಗಿ ಡಾಲರ್‌ ಮತ್ತು ಪೌಂಡುಗಳಲ್ಲಿ ಪರಿಹಾರದ ಮೊತ್ತ ನೀಡುವುದಾಗಿ ತಿಳಿಸಿದ್ದರು. ಆದರೆ, ಇದನ್ನು ಒಪ್ಪದ ನ್ಯಾಯಪೀಠ, ‘ಎಲ್ಲ ಆರೋಪಿಗಳ ವಿರುದ್ಧ ವಿಚಾರಣೆ ಅಗತ್ಯವಿದೆ’ ಎಂಬ ತೀರ್ಮಾನದೊಂದಿಗೆ ದೋಷಾರೋಪ ನಿಗದಿಪಡಿಸಿ ವಿಚಾರಣೆಗೆ ಆದೇಶಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.