ADVERTISEMENT

ಮಹಾ ಮಳೆ | ಬೆಂಗಳೂರು ಹೊಳೆ; ರಾಜ್ಯದಲ್ಲಿ ಇಬ್ಬರ ಜೀವ ಹಾನಿ

ರಾಜ್ಯದಲ್ಲಿ ಇಬ್ಬರ ಜೀವಹಾನಿ l ದೋಣಿ ಬಳಸಿ ಸಂತ್ರಸ್ತರ ರಕ್ಷಣೆ l ಬುಡಮೇಲಾದ ಬೃಹತ್‌ ಕಟ್ಟಡ

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2024, 16:32 IST
Last Updated 22 ಅಕ್ಟೋಬರ್ 2024, 16:32 IST
ಕಾರ್ಗಲ್–ಜೋಗ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 9ರಲ್ಲಿ ಶನಿವಾರ ಗುಡ್ಡವೊಂದು ಕುಸಿದು, ಮಣ್ಣು ಮನೆಯ ಹಿಂಭಾಗವನ್ನು ಆವರಿಸಿತ್ತು.  ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಮತ್ತು ಮುಖ್ಯಾಧಿಕಾರಿ ಎಂ.ಕೆ. ಸುರೇಶ್ ಭೇಟಿ ನೀಡಿದರು. ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಲಾಯಿತು
ಕಾರ್ಗಲ್–ಜೋಗ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 9ರಲ್ಲಿ ಶನಿವಾರ ಗುಡ್ಡವೊಂದು ಕುಸಿದು, ಮಣ್ಣು ಮನೆಯ ಹಿಂಭಾಗವನ್ನು ಆವರಿಸಿತ್ತು.  ಯಾವುದೇ ಜೀವ ಹಾನಿ ಸಂಭವಿಸಿಲ್ಲ. ಸ್ಥಳಕ್ಕೆ ತಹಶೀಲ್ದಾರ್ ಚಂದ್ರಶೇಖರ್ ಮತ್ತು ಮುಖ್ಯಾಧಿಕಾರಿ ಎಂ.ಕೆ. ಸುರೇಶ್ ಭೇಟಿ ನೀಡಿದರು. ಜೆಸಿಬಿ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಲಾಯಿತು   

ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದ್ದು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಜನವಸತಿ ಪ್ರದೇಶಗಳು ಜಲಾವೃತವಾಗಿವೆ. ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಮಹಾ ಮಳೆಗೆ ಬೆಳೆಗಳು ಕೊಚ್ಚಿಹೋಗಿವೆ.

ಬೆಂಗಳೂರಿನಲ್ಲಿ ಮಳೆಯಿಂದಾಗಿ ನಿರ್ಮಾಣ ಹಂತದ ಕಟ್ಟಡ ಕುಸಿದು ಒಬ್ಬರು ಮೃತಪಟ್ಟಿದ್ದರೆ, ಚಿತ್ರದುರ್ಗದಲ್ಲಿ ವೃದ್ಧರೊಬ್ಬರು ಹಳ್ಳದಲ್ಲಿ ಕೊಚ್ಚಿಹೋಗಿ ಸಾವಿಗೀಡಾಗಿದ್ದಾರೆ.

ಬೆಂಗಳೂರಿನ ಬಾಬುಸಾ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ ಬೃಹತ್‌ ಕಟ್ಟಡವೊಂದು ಮಂಗಳವಾರ ಮಧ್ಯಾಹ್ನ ಬುಡಮೇಲಾಗಿ ಧರೆಗುರುಳಿದೆ. ಕಟ್ಟಡದ ನಿರ್ಮಾಣದಲ್ಲಿ ತೊಡಗಿದ್ದ 20 ಮಂದಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಐವರು ನಾಪತ್ತೆಯಾಗಿದ್ದಾರೆ. 14 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಉಳಿದವರ ರಕ್ಷಣೆಗೆ ಕಾರ್ಯಾಚರಣೆ ಮುಂದುವರಿದಿದೆ.

ADVERTISEMENT

ಭಾರಿ ಮಳೆಯಿಂದ ರಾಜಧಾನಿಯಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಒಂದು ಸಾವಿರಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ. ಸೋಮವಾರ ರಾತ್ರಿ ಧಾರಾಕಾರ ಮಳೆ ಸುರಿದಿದ್ದು, ಯಲಹಂಕ ಹಾಗೂ ದಾಸರಹಳ್ಳಿ ಭಾಗದಲ್ಲಿ ಹಲವು ಬಡಾವಣೆಗಳು ಜಲಾವೃತಗೊಂಡಿವೆ. ಮಂಗಳವಾರವೂ ಮಳೆ ಮುಂದುವರಿದಿದ್ದು, ಹಲವು ಬಡಾವಣೆಗಳಲ್ಲಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಜಲಾವೃತ ಬಡಾವಣೆಗಳಲ್ಲಿರುವ ಮನೆಗಳಲ್ಲಿನ ನಿವಾಸಿಗಳಿಗೆ ತಿಂಡಿ, ಊಟ ಹಾಗೂ ಕುಡಿಯುವ ನೀರನ್ನು ಬಿಬಿಎಂಪಿ ಸಿಬ್ಬಂದಿ ಒದಗಿಸಿದರು. ನಿವಾಸಿಗಳನ್ನು ವಿಪತ್ತು ನಿರ್ವಹಣೆ ತಂಡದ ಸಿಬ್ಬಂದಿ ದೋಣಿ ಹಾಗೂ ಟ್ರ್ಯಾಕ್ಟರ್‌ಗಳ ಮೂಲಕ ರಕ್ಷಿಸಿದರು. ಪ್ರವಾಹ ಮಟ್ಟ ತಗ್ಗಿಸುವ ಪ್ರಯತ್ನ ಮುಂದುವರಿದಿದೆ.

ಅಕ್ಟೋಬರ್‌ 1ರಿಂದ 22ರವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ 24.1 ಸೆಂ.ಮೀ. ಮಳೆಯಾಗಿದೆ. ಇದು 124 ವರ್ಷಗಳಲ್ಲಿ ಸುರಿದ ಅತಿ ಹೆಚ್ಚು ಮಳೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ಜಲಾವೃತಗೊಂಡು ತಾಸುಗಟ್ಟಲೆ ವಾಹನ ದಟ್ಟಣೆ ಉಂಟಾಯಿತು.

ಬೆಂಗಳೂರಿನಲ್ಲಿ ಮೂರು ದಿನ ಹೆಚ್ಚಿನ ಮಳೆಯಾಗುವ ‘ಆರೆಂಜ್‌ ಅಲರ್ಟ್‌’ ಇರುವುದರಿಂದ ಜಿಲ್ಲಾಧಿಕಾರಿ ಜಗದೀಶ್‌ ಅವರು, ಶಾಲೆಗಳಿಗೆ ಅ. 23ರಂದು ರಜೆ ಘೋಷಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಿಕ್ಕಜಾಜೂರು ಸಮೀಪದ ರಾಮಘಟ್ಟ ಗ್ರಾಮದ ನಿವಾಸಿ ಕಾಲ್ಕೆರೆ ರಾಜಪ್ಪ (75) ಎಂಬುವವರು ದನ ಮೇಯಿಸಲು ಹೋಗಿದ್ದಾಗ ಸೋಮವಾರ ಸಂಜೆ ಹಿರೇಹಳ್ಳದಲ್ಲಿ ಕೊಚ್ಚಿಹೋಗಿದ್ದರು. ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.

12 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’

ರಾಜ್ಯದ ವಿವಿಧೆಡೆ ಬುಧವಾರವೂ ಭಾರಿ ಮಳೆ ಸುರಿಯುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು 12 ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.

ಬೆಳಗಾವಿ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ತುಮಕೂರು, ಹಾಸನ, ಕೊಡಗು, ರಾಮನಗರ, ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಿಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದೆ. ದಕ್ಷಿಣ ಒಳನಾಡು, ಕರಾವಳಿಯ ಉಳಿದ ಜಿಲ್ಲೆಗಳ ಹಲವೆಡೆ ಹಾಗೂ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಕೊಚ್ಚಿಹೋದ ಕಾರು, ಟ್ರ್ಯಾಕ್ಟರ್‌ ಪಲ್ಟಿ

ಚಿತ್ರದುರ್ಗ/ಹಾಸನ: ಸೋಮವಾರ ರಾತ್ರಿ ಧಾರಾಕಾರ ಸುರಿದ ಮಳೆಗೆ ವಿವಿಧೆಡೆ ರಸ್ತೆಗಳು, ಮನೆಗಳು ಜಲಾವೃತವಾಗಿವೆ. ಚಿತ್ರದುರ್ಗ ಜಿಲ್ಲೆಯಲ್ಲಿ 120 ಮನೆಗಳಿಗೆ ಹಾನಿಯಾಗಿದೆ.

ಗಜ್ಜುಗಾನಹಳ್ಳಿ ಬಳಿ ನೀರಿನ ರಭಸಕ್ಕೆ ಕಲ್ಲು ತುಂಬಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿದ್ದು, ಪಕ್ಕಕ್ಕೆ ಹೋಗಿ ಬಿದ್ದಿದೆ. ಬೋಸೆದೇವರಹಟ್ಟಿ ಬಳಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕಾರು ಹಾಗೂ ಮನಮೈನಹಟ್ಟಿ ಬಳಿ ಆಟೊಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಒಳಗಿದ್ದವರು ಕೆಳಗಿಳಿದು ಪಾರಾಗಿದ್ದಾರೆ.

ಚಿಕ್ಕಬಳ್ಳಾಪುರ ರಾಷ್ಟ್ರೀಯ ಹೆದ್ದಾರಿ 44ರ ಕೆಳ ಸೇತುವೆಯಲ್ಲಿ ಸಂಗ್ರಹವಾಗಿರುವ ಮಳೆ ನೀರಿನಲ್ಲಿ ಎರಡು ಕಾರು ಮುಳುಗಿದ್ದವು. ಕಾರಿನಲ್ಲಿದ್ದ ಆರು ಮಂದಿಯನ್ನು ರಕ್ಷಿಸಲಾಗಿದೆ. ಸಬ್ಬೇನಹಳ್ಳಿ ಮಂಚನಬಲೆ ಗ್ರಾಮದ ನಡುವೆ ಕೇಳ ಸೇತುವೆಯಲ್ಲಿಯೂ ಹಲವು ವಾಹನಗಳು ಮಳೆ ನೀರಿನಲ್ಲಿ ಸಿಲುಕಿದ್ದವು.

ಇಂದು ರಜೆ

ಬೆಂಗಳೂರಿನಲ್ಲಿ ಮೂರು ದಿನ ಹೆಚ್ಚಿನ ಮಳೆಯಾಗುವ ‘ಆರೆಂಜ್‌ ಅಲರ್ಟ್‌’ ಇರುವುದರಿಂದ ಜಿಲ್ಲಾಧಿಕಾರಿ ಜಗದೀಶ್‌ ಅವರು, ಶಾಲೆಗಳಿಗೆ ಅ. 23ರಂದು ರಜೆ ಘೋಷಿಸಿದ್ದಾರೆ.

ಮಳೆ ಅನಾಹುತ ವರದಿ ತರಿಸಿಕೊಂಡಿದ್ದು, ಪರಿಹಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅನಾಹುತಗಳ ಕುರಿತು ನಿಗಾ ವಹಿಸಿದ್ದು,‌ ಸ್ಥಳ ಸಮೀಕ್ಷೆ ನಡೆಯುತ್ತಿದೆ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.