ADVERTISEMENT

ಮುಂದುವರಿದ ಮಳೆ: ಕುಸಿದ ತಾಪಮಾನ

​ಪ್ರಜಾವಾಣಿ ವಾರ್ತೆ
Published 15 ಮೇ 2024, 18:25 IST
Last Updated 15 ಮೇ 2024, 18:25 IST
<div class="paragraphs"><p> ಮಳೆ </p></div>

ಮಳೆ

   

ಹೊಸಪೇಟೆ/ಬಳ್ಳಾರಿ: ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹರಪನಹಳ್ಳಿ ಸಹಿತ ಜಿಲ್ಲೆಯ ಕೆಲವೆಡೆ ಮಂಗಳವಾರ ರಾತ್ರಿ ಮತ್ತು ಬುಧವಾರ ಮಧ್ಯಾಹ್ನ ಮಳೆಯಾಗಿದೆ. 

ಹರಪನಹಳ್ಳಿ ತಾಲ್ಲೂಕು ಮಾಚಿಹಳ್ಳಿ ತಾಂಡದಲ್ಲಿ ಗಾಳಿ, ಮಳೆಗೆ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಒಂದು ಮನೆ, ದೇವರಾಜ ಅರಸ್ ಪ್ರೌಢಶಾಲೆಯ ಚಾವಣಿ ತಗಡುಗಳು ಹಾರಿ ಹೋಗಿವೆ.

ADVERTISEMENT

ಬಳ್ಳಾರಿ ಜಿಲ್ಲೆಯ ಕುಡತಿನಿ ಪಟ್ಟಣ ಮತ್ತು ಸಿರುಗುಪ್ಪ ತಾಲ್ಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಹೀಗಾಗಿ ತಾಪಮಾನದ ಪ್ರಮಾಣ ಗಣನೀಯವಾಗಿ ಕುಸಿದಿದೆ.

ವಿಜಯಪುರ ವರದಿ: ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ಆಲಮಟ್ಟಿ, ಬಸವನ ಬಾಗೇವಾಡಿ, ತಿಕೋಟಾ, ಇಂಡಿ, ಸಿಂದಗಿ,  ಮುದ್ದೇಬಿಹಾಳ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಉತ್ತಮ ಮಳೆಯಾಗಿದೆ. 

ಚಿಕ್ಕಮಗಳೂರು ವರದಿ: ಜಿಲ್ಲೆಯಲ್ಲಿ  ಎನ್.ಆರ್.ಪುರ, ಮೂಡಿಗೆರೆ, ಕೊಪ್ಪ, ತರೀಕೆರೆ, ಕಡೂರು ಸೇರಿ ಎಲ್ಲೆಡೆ ಮಂಗಳವಾರ ಮಧ್ಯರಾತ್ರಿ ಮಳೆ ಸುರಿದಿದೆ. ಅಜ್ಜಂಪುರ ತಾಲ್ಲೂಕಿನ ಶಿವನಿ ಹೋಬಳಿಯ ಹಲವು ಹಳ್ಳಿಗಳಲ್ಲಿ ಮೊದಲ ಮಳೆಯಾಗಿದೆ. 

ಚಿಕ್ಕಮಗಳೂರು ತಾಲ್ಲೂಕಿನ ಕಳಸಾಪುರ ಸುತ್ತಮುತ್ತ ಕೂಡ ಹಳ್ಳಗಳಲ್ಲಿ ನೀರು ಹರಿಯುವಷ್ಟು ಮಳೆಯಾಗಿದೆ. ಸಿಂದಿಗೆರೆ ಬಳಿ ರಸ್ತೆ ಮೇಲೆ ನೀರು ಹರಿಯಿತು. ಹಲವು ವರ್ಷಗಳ ನಂತರ ಈ ನೀರು ಕಂಡ ಜನ ಸಂತಸಪಟ್ಟರು. ಬಾಳೆಹೊನ್ನೂರು, ಶೃಂಗೇರಿ, ಲಕ್ಕವಳ್ಳಿ ಸುತ್ತಮುತ್ತ‌ ಕೂಡ ಮಳೆಯಾಗಿದೆ.

ದಾವಣಗೆರೆ ವರದಿ: ನಗರ ಸೇರಿದಂತೆ ಜಿಲ್ಲೆಯ ಚನ್ನಗಿರಿ, ನ್ಯಾಮತಿ, ಹರಿಹರ ತಾಲ್ಲೂಕಿನ ಕೆಲವೆಡೆ ಬುಧವಾರ ಮಳೆಯಾಗಿದೆ. 

ಮಲೇಬೆನ್ನೂರಿನಲ್ಲಿ, ಶಿವಮೊಗ್ಗ ಜಿಲ್ಲೆಯ ಕುಂಸಿ ಹಾಗೂ ಶಿಕಾರಿಪುರ ಭಾಗದಲ್ಲೂ ಮಳೆಯಾಗಿದೆ. ದಾವಣಗೆರೆ ನಗರದಲ್ಲಿ ಸಂಜೆ  ಮಳೆ ಸುರಿಯಿತು. 

ಸುಬ್ರಹ್ಮಣ್ಯ ವರದಿ: ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ, ಸುಳ್ಯ, ಕಡಬ, ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಬುಧವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಬಸವನಮೂಲೆಯಲ್ಲಿ ಗಾಳಿಯಿಂದ ಕೂಡಿದ ಮಳೆಗೆ ಮರ ಬಿದ್ದು ಮೀನಾಕ್ಷಿ (65) ಎಂಬುವರು ಮೃತಪಟ್ಟಿದ್ದಾರೆ.

ಬೆಳ್ತಂಗಡಿ  ತಾಲ್ಲೂಕಿನ ಕೊಯ್ಯೂರು ಗ್ರಾಮದ ಮೈಂದಕೋಡಿ ಲೋಕಯ್ಯ ಗೌಡರ ಮನೆ ಸಮೀಪದ ತೆಂಗಿನ ಮರಕ್ಕೆ ಸಿಡಿಲು ಬಡಿದ ಪರಿಣಾಮ ಗರಿಗಳ ನಡುವೆ ಬೆಂಕಿ ಕಾಣಿಸಿಕೊಂಡಿದೆ. ಅರೆ ಕ್ಷಣದಲ್ಲಿ ತೆಂಗಿನ ಮರ ಹೊತ್ತಿ
ಉರಿದಿದೆ. ಕೊಡಗು ಜಿಲ್ಲೆಯ ಕುಶಾಲನಗರ, ಮಡಿಕೇರಿ ಹಾಗೂ ವಿರಾಜಪೇಟೆ, ಹಾಸನ ಜಿಲ್ಲೆಯ ಆಲೂರು ಹಾಗೂ ಚಾಮರಾಜನಗರ ಜಿಲ್ಲೆಯ ವಿವಿಧೆಡೆ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.