ADVERTISEMENT

ನಿರಂತರ ಪಠ್ಯಪುಸ್ತಕ ಪರಿಷ್ಕರಣೆ: ಕನ್ನಡ ಶಾಲೆ ಕೊಲ್ಲುವ ಯತ್ನ- ಚಕ್ರತೀರ್ಥ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 12:58 IST
Last Updated 28 ಸೆಪ್ಟೆಂಬರ್ 2023, 12:58 IST
<div class="paragraphs"><p>ರೋಹಿತ್ ಚಕ್ರತೀರ್ಥ</p></div>

ರೋಹಿತ್ ಚಕ್ರತೀರ್ಥ

   

ಶಿರಸಿ: ಅಸಾಂವಿಧಾನಿಕವಾಗಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಸರ್ವಾಧಿಕಾರ ಧೋರಣೆ ತೋರಿರುವ ರಾಜ್ಯ ಸರ್ಕಾರವು ಸರ್ಕಾರಿ ಕನ್ನಡ ಶಾಲೆಗಳನ್ನು ಕೊಲ್ಲುವ ಯತ್ನ ಮಾಡುತ್ತಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ನಿಕಟಪೂರ್ವ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಾಗ್ದಾಳಿ ನಡೆಸಿದರು.

ಶಿರಸಿಯ ಸೋದೆಯಲ್ಲಿ ಗುರುವಾರ ಪತ್ರಕರ್ತರ ಜತೆ ಮಾತನಾಡಿದ ಅವರು, ತರಾತುರಿಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ಮಾಡಿ ಈಗಿರುವ ಪಾಠಗಳನ್ನು ತೆಗೆದು ಯಾವ ಪಾಠಗಳನ್ನು ಸೇರಿಸುತ್ತಾರೆ ಎಂಬುದನ್ನು ತಿಳಿಸಿಲ್ಲ. ಬಿಜೆಪಿ ಸರ್ಕಾರ ಮಾಡಿದ ಪರಿಷ್ಕರಣೆ ಎಂಬ ಅಜೆಂಡಾ ಮುಂದಿಟ್ಟು, ಆಗಿನ ಪಠ್ಯಗಳನ್ನು ತೆಗೆದು ಹಾಕಲಾಗಿದೆ ಎಂದರು.

ADVERTISEMENT

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, 16 ಪಾಠಗಳನ್ನು ಏಕಾಏಕಿ ತೆಗೆಯಲಾಗಿದೆ. ಅದಕ್ಕೆ ಶಿಕ್ಷಣ ಇಲಾಖೆಯಲ್ಲಿ ಆಸ್ಪದವಿಲ್ಲ. ಸಮಿತಿ ರಚಿಸಿ, ಪತ್ರದ ಮೂಲಕ ಸರ್ಕಾರಕ್ಕೆ ಯಾವ ಪಾಠ ತೆಗೆಯಲಾಗುತ್ತದೆ ಎಂಬ ಮಾಹಿತಿ ನೀಡಿ, ಅನುಮತಿ ಪಡೆದು ಪರಿಷ್ಕರಣೆ ಮಾಡಬೇಕು. ಇವೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರಂತರ ಮತ್ತು ಅವೈಜ್ಞಾನಿಕ ಪಠ್ಯಪುಸ್ತಕ ಪರಿಷ್ಕರಣೆಯಿಂದ ಗೊಂದಲ ಸೃಷ್ಟಿಯಾಗಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹಿಂದೇಟು ಹಾಕುತ್ತಾರೆ. ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಸಾಯಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ.  ಇದರಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಕನಿಷ್ಠ ಸೌಜನ್ಯಕ್ಕೂ ನನ್ನ ಬಳಿ ಚರ್ಚಿಸಿಲ್ಲ. ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿರುವುದು ತಪ್ಪು. ಇದು ಮಕ್ಕಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.