ಬೆಂಗಳೂರು: ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಆರ್ಥಿಕ ‘ಹೊರೆ’ ಆಗುತ್ತಿರುವ ಕಾರಣ ಗುತ್ತಿಗೆ, ಹೊರ ಗುತ್ತಿಗೆ ಆಧಾರದಲ್ಲಿ ನಿವೃತ್ತ ಸರ್ಕಾರಿ ನೌಕರರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹಾಗಿದ್ದರೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಂಗಳಿಗೆ ₹2.50 ಲಕ್ಷ ಸಂಭಾವನೆ ನಿಗದಿಪಡಿಸಿ ತಾಂತ್ರಿಕ ಸಲಹೆಗಾರರನ್ನು ನೇಮಕ ಮಾಡಲಾಗಿದೆ.
ಭಾರತೀಯ ತೈಲ ನಿಗಮದಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಹೈದರಾಬಾದಿನ ಕೊಂದಪುರ ನಿವಾಸಿ ನಾಗೇಶ್ವರ ರಾವ್ ನಂದಿಪಟಿ ಎಂಬವರನ್ನು ಪ್ರಾಧಿಕಾರಕ್ಕೆ ಒಂದು ವರ್ಷಕ್ಕೆ ನೇಮಿಸಿಕೊಳ್ಳಲಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಯಲ್ಲಿದ್ದ ಅವಧಿಯಲ್ಲಿಯೇ (ಜೂನ್ 5) ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ನಾಗೇಶ್ವರ ರಾವ್ ನೇಮಕಾತಿ ಆದೇಶ ಹೊರಡಿಸಿದೆ.
ವಿವಿಧ ಇಲಾಖೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ನಿವೃತ್ತ ಸರ್ಕಾರಿ ನೌಕರರನ್ನು ತಕ್ಷಣ ಕರ್ತವ್ಯದಿಂದ ಬಿಡುಗಡೆಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯ ಕಾರ್ಯದರ್ಶಿಗೆ (ಸಿ.ಎಸ್) ಇದೇ ಜನವರಿಯಲ್ಲಿ ಮುಖ್ಯಮಂತ್ರಿ ಸೂಚಿಸಿದ್ದರು. ಅಲ್ಲದೆ, ಆ ಹುದ್ದೆಗಳಿಗೆ ಹಾಲಿ ಸರ್ಕಾರಿ ಕೆಲಸದಲ್ಲಿರುವ ಅಧಿಕಾರಿ, ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು ಎಂದೂ ಅವರು ತಿಳಿಸಿದ್ದರು. ಅದರಂತೆ, ಕೆಲವು ಇಲಾಖೆ, ನಿಗಮ, ಪ್ರಾಧಿಕಾರಗಳು ನಿವೃತ್ತ ಸರ್ಕಾರಿ ನೌಕರರನ್ನು ಕೆಲಸದಿಂದ ಬಿಡುಗಡೆ ಮಾಡಿದ್ದವು.
ಆದರೆ, ಕೇಂದ್ರ ಸರ್ಕಾರದ ಉದ್ಯೋಗದಿಂದ ನಿವೃತ್ತರಾದವರನ್ನು ತಾಂತ್ರಿಕ ಸಲಹೆಗಾರನ್ನಾಗಿ ಮುಖ್ಯಮಂತ್ರಿ ಸೂಚನೆಯನ್ನು ಬದಿಗಿಟ್ಟು ಪ್ರಾಧಿಕಾರ ನೇಮಿಸಿಕೊಂಡಿರುವುದು ಇಲಾಖೆಯ ಒಳಗೆ ಅಸಮಾಧಾನಕ್ಕೆ ಕಾರಣವಾಗಿದೆ.
‘ತೈಲ ಕೈಗಾರಿಕೆ ಕ್ಷೇತ್ರದಲ್ಲಿ 30 ವರ್ಷ ಅನುಭವ ಹೊಂದಿರುವ, 2016–2022ರವರೆಗೆ ಒಡಿಶಾ ರಾಜ್ಯದ ಕೌಶಲ ಅಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸಿರುವ ನಾಗೇಶ್ವರ ರಾವ್, ಕೌಶಲ ಅಭಿವೃದ್ಧಿಯ ಬೃಹತ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಅಲ್ಲದೆ, ಅದರ ನಿರ್ವಹಣೆ ಕೆಲಸವನ್ನೂ ನೋಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಭುವನೇಶ್ವರದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮಾದರಿ ಕೌಶಲ ಅಕಾಡೆಮಿ ಸ್ಥಾಮಿಸುವಲ್ಲಿ ಮತ್ತು ಅದರ ನಿರ್ವಹಣೆಯಲ್ಲಿ ಯಶಸ್ವಿ ಆಗಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಕೌಶಲ ಅಭಿವೃದ್ಧಿ ಕ್ಷೇತ್ರದಲ್ಲಿನ ಅವರ ಅಪಾರ ಅನುಭವ ಗಮನದಲ್ಲಿಟ್ಟು ಪ್ರಾಧಿಕಾರದಲ್ಲಿ ತಾಂತ್ರಿಕ ಸಲಹೆಗಾರರಾಗಿ ನೇಮಿಸಿಕೊಳ್ಳಲಾಗಿದೆ’ ಎಂದು ನೇಮಕಾತಿ ಆದೇಶದಲ್ಲಿ ವಿವರಿಸಲಾಗಿದೆ.
‘ಭಾರತೀಯ ತೈಲ ನಿಗಮದಲ್ಲಿ ಉನ್ನತ ಅಧಿಕಾರಿಯಾಗಿ ನಿವೃತ್ತಿ ಹೊಂದುವಾಗ ಅವರ ಒಟ್ಟು ಮಾಸಿಕ ವೇತನ ಸುಮಾರು ₹4.40 ಲಕ್ಷ ಪಡೆಯುತ್ತಿದ್ದರು. ಈ ಕಾರಣದಿಂದ ಪ್ರಾಧಿಕಾರದಲ್ಲಿ ಅವರಿಗೆ ಸಂಭಾವನೆಯಾಗಿ ಮಾಸಿಕ ₹2.50 ಲಕ್ಷ ನೀಡಲು ಪ್ರಾಧಿಕಾರದ ಅಧ್ಯಕ್ಷರು ಶಿಫಾರಸು ಮಾಡಿದ್ದಾರೆ. ಆರ್ಥಿಕ ಇಲಾಖೆಯು ಅವರ ನೇಮಕಾತಿಗೆ ಅನುಮತಿ ನೀಡಿದೆ’ ಎಂದೂ ಆದೇಶದಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯರ್ಶಿ ಉಮಾ ಮಹದೇವನ್ ಅವರಿಗೆ ಕರೆ ಮಾಡಿದರೂ, ಅವರು ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.