ಬದಿಯಡ್ಕ (ಕಾಸರಗೋಡು ಜಿಲ್ಲೆ): ಅಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ವಿಭಾಗಕ್ಕೆ ವರ್ಗವಾಗಿರುವ ಕನ್ನಡ ಬಾರದ ಮಲಯಾಳಿ ಶಿಕ್ಷಕಿ ಬೇಡ, ಅವರ ಬದಲು ಕನ್ನಡ ಬರುವ ಶಿಕ್ಷಕರನ್ನು ನಿಯೋಜಿಸುವಂತೆ ಪಾಲಕರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಈ ಶಾಲೆಯ ಮುಖ್ಯ ಶಿಕ್ಷಕರಿಗೇ ಕೇರಳ ಸರ್ಕಾರ ‘ವರ್ಗಾವಣೆ ಶಿಕ್ಷೆ’ ನೀಡಿದೆ.
ಈ ಶಿಕ್ಷಕಿಯನ್ನು ಕರ್ತವ್ಯಕ್ಕೆ ಹಾಜರುಪಡಿಸಿಕೊಳ್ಳಲು ವಿಳಂಬ ಮಾಡಿದ ಹಾಗೂ ಪೋಷಕರು ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಈ ಶಿಕ್ಷಕಿಗೆ ಪೊಲೀಸ್ ಭದ್ರತೆಗೆ ವ್ಯವಸ್ಥೆ ಮಾಡದ ಆರೋಪದಲ್ಲಿ ಅಡೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರನ್ನು ವಯನಾಡ್‌ನ ಸರ್ಕಾರಿ ಪ್ರೌಢ ಶಾಲೆಗೆ ವರ್ಗ ಮಾಡಲಾಗಿದೆ. ಜೂನ್ 30ರಂದು ಅವರು ವಯನಾಡ್‌ನ ಶಾಲೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಆಗಿದ್ದೇನು?: ಅಡೂರಿನ ಈ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಸಮಾಜ ವಿಜ್ಞಾನ ಕಲಿಸಲು ಕನ್ನಡ ಬಾರದ ಶಿಕ್ಷಕಿಯನ್ನು ಕೇರಳ ಸರ್ಕಾರ ನೇಮಿಸಿದಾಗ ಕನ್ನಡಿಗ ವಿದ್ಯಾರ್ಥಿಗಳು ಜೂನ್ 3ರಂದು ಪ್ರತಿಭಟನೆ ನಡೆಸಿದ್ದರು. ಇದರಿಂದ ಕರ್ತವ್ಯಕ್ಕೆ ಹಾಜರಾಗದೇ ವಾಪಸಾಗಿದ್ದ ಶಿಕ್ಷಕಿ, ಪೊಲೀಸರನ್ನು ಕರೆದುಕೊಂಡು ಬಂದು ಕರ್ತವ್ಯಕ್ಕೆ ಹಾಜರಾಗಲು ಯತ್ನಿಸಿದ್ದರು. ಆದರೆ, ಮುಖ್ಯಶಿಕ್ಷಕರು ಅಸ್ವಸ್ಥರಾಗಿದ್ದ ಕಾರಣ ಕರ್ತವ್ಯಕ್ಕೆ ಹಾಜರಾಗಲು ಸಾಧ್ಯವಾಗಿರಲಿಲ್ಲ. ನಂತರ, ಕನ್ನಡ ಬಾರದ ಶಿಕ್ಷಕಿಯ ನೇಮಕದಿಂದ ತಮ್ಮ ಮಕ್ಕಳ ಕಲಿಕೆಯ ಮೇಲೆ ಆಗುವ ದುಷ್ಪರಿಣಾಮದ ಬಗ್ಗೆ ಜಿಲ್ಲಾಧಿಕಾರಿ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಕನ್ನಡ ಶಾಲೆಯ ಪೋಷಕರು ಮನವರಿಕೆ ಮಾಡಿಕೊಟ್ಟಿದ್ದರು.
ಆದರೆ, ಆ ಶಿಕ್ಷಕಿ ಜೂನ್ 16ರಂದು ಶಾಲೆಗೆ ಹಾಜರಾಗಿ ಪಾಠ ಆರಂಭಿಸಿದರು. ಇದರಿಂದ ಕನ್ನಡ ಮಕ್ಕಳು ಮತ್ತು ಅವರ ಪೋಷಕರು ಪ್ರತಿಭಟನೆ ಆರಂಭಿಸಿದರು. ಮಲಯಾಳಿ ಶಿಕ್ಷಕಿ ತರಗತಿಗೆ ಬಂದಾಗ, ಅವರ ಪಾಠ ಅರ್ಥವಾಗುತ್ತಿಲ್ಲ ಎಂದು 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಗತಿಯಿಂದ ಹೊರಹೋಗುತ್ತಿದ್ದಾರೆ. 15 ದಿನಗಳಿಂದ ನಿರಂತರವಾಗಿ ತರಗತಿ ಬಹಿಷ್ಕಾರ ನಡೆಯುತ್ತಿದೆ.
ಹೈಕೋರ್ಟ್‌ಗೆ ಮೊರೆ: ಇದೀಗ ಮಲಯಾಳಿ ಶಿಕ್ಷಕಿಯ ನೇಮಕಾತಿಯಿಂದಾಗಿ ಕನ್ನಡಿಗ ಮಕ್ಕಳು ಮಾತೃಭಾಷಾ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂದು ಅಡೂರಿನ ಕನ್ನಡಿಗ ಪೋಷಕರು ಕನ್ನಡ ಹೋರಾಟ ಕ್ರಿಯಾ ಸಮಿತಿಯನ್ನು ರಚಿಸಿಕೊಂಡು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗೆ ಕ್ರಮ
ಕಾಸರಗೋಡು: ಭಾಷಾ ಅಲ್ಪಸಂಖ್ಯಾತರ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುವುದಾಗಿಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಭಾಷಾ ಅಲ್ಪಸಂಖ್ಯಾತರ ಸಮಿತಿ ಸಭೆಯಲ್ಲಿ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಮತ್ತು ಶಾಸಕರಾದ ಎನ್.ಎ.ನೆಲ್ಲಿಕುನ್ನು, ಎ.ಕೆ.ಎಂ.ಅಶ್ರಫ್ ಭರವಸೆ ನೀಡಿದರು.
ಸಂಸತ್ತು ಮತ್ತು ವಿಧಾನಸಭೆಯಲ್ಲಿ ಈ ವಿಚಾರದಲ್ಲಿ ಧ್ವನಿ ಎತ್ತುವುದಾಗಿ ಆಶ್ವಾಸನೆ ಕೊಟ್ಟರು.
ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗಾಗಿ ವಿವಿಧ ಕ್ರಮಕೈಗೊಳ್ಳುವುದರ ಜೊತೆಗೆ ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಶಿಫಾರಸು ಮಾಡಲಾಗುವುದು. ಕಾಸರಗೋಡಿನಲ್ಲಿ ಶೀಘ್ರವೇ ಸರ್ಕಾರಿ ಕನ್ನಡ ಮುದ್ರಣಾಲಯ ಸ್ಥಾಪಿಸಲು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕನ್ನಡ ಭಾಷಾಂತರ ವಿಭಾಗ ತೆರೆಯಲು, ಜಿಲ್ಲಾ ವಾರ್ತಾ ಕಚೇರಿಯಲ್ಲಿ ಕನ್ನಡ ಭಾಷಾಂತರಕಾರ ಹುದ್ದೆಗಳ ನೇಮಕಾತಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಇನ್ಬಶೇಖರನ್ ತಿಳಿಸಿದರು.
ಮಂಜೇಶ್ವರ, ಕಾಸರಗೋಡು ತಾಲ್ಲೂಕುಗಳಲ್ಲಿ ಸರ್ಕಾರಿ ಕಚೇರಿಗಳ ಫಲಕಗಳನ್ನು ಕನ್ನಡದಲ್ಲೂ ಅಳವಡಿಸುವುದು. ಕನ್ನಡ ಬಲ್ಲ ಕೆಳದರ್ಜೆ ಗುಮಾಸ್ತರನ್ನು ನೇಮಿಸುವ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ, ಎಲ್ಲ ಸರ್ಕಾರಿ ಆದೇಶಗಳು ಕನ್ನಡದಲ್ಲೂ ಸಿಗುವಂತೆ ಆಯಾ ಕಚೇರಿಗಳಿಗೆ ಆದೇಶ ನೀಡಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯ ಭಾಷಾ ಅಲ್ಪಸಂಖ್ಯಾತ ಪ್ರದೇಶಗಳಲ್ಲಿ ಸರ್ಕಾರಿ ಸಿಬ್ಬಂದಿಯಾಗಿ ಕನ್ನಡ, ತುಳು ಭಾಷೆಗಳಲ್ಲಿ ಪ್ರಾವೀಣ್ಯ ಹೊಂದಿದವರನ್ನೇ ನೇಮಿಸಬೇಕು ಎಂದು ಸಭೆಯಲ್ಲಿ ಸದಸ್ಯರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.