ADVERTISEMENT

ದಂಡ ಪಡೆದು ಕೃಷಿ ಜಮೀನು ಪರಿವರ್ತಿಸಿ: ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2022, 18:25 IST
Last Updated 29 ನವೆಂಬರ್ 2022, 18:25 IST
   

ಬೆಂಗಳೂರು: ‘ಕೃಷಿ ಜಮೀನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗಿದ್ದರೆ, ನಿಗದಿತ ಶುಲ್ಕ ಪಡೆದು ಆ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸುವುದಕ್ಕಾಗಿ ಭೂ ಪರಿವರ್ತನೆಗೆ ಅನುಮತಿ ನೀಡಬೇಕಾಗುತ್ತದೆ’ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಈ ಸಂಬಂಧ ಜುನೈದ್ ಎಂಬುವರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಕಲಂ 95ರ ಅನುಸಾರ ಕೃಷಿ ಜಮೀನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿದ್ದರೆ, ಅಂತಹ ಜಮೀನನ್ನು ಯಾವ ಉದ್ದೇಶಕ್ಕೆ ಗೊತ್ತುಪಡಿಸಲಾಗಿದೆಯೋ, ಅದಕ್ಕಾಗಿ ಪರಿವರ್ತಿಸಲು ಕೋರಿದರೆ ದಂಡ ಪಾವತಿಯ ಷರತ್ತಿಗೆ ಒಳಪಟ್ಟು ಅನುಮತಿ ನೀಡ ಬೇಕಾಗುತ್ತದೆ’ ಎಂದು ಹೈಕೋರ್ಟ್ ತಿಳಿಸಿದೆ.

ಇದೇ ವೇಳೆ ಪ್ರಕರಣದಲ್ಲಿ ಭೂ ಪರಿವರ್ತನೆ ಕೋರಿ ಅರ್ಜಿದಾರ ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿ ಧಾರವಾಡ ಜಿಲ್ಲಾಧಿಕಾರಿಯು 2022ರ ಸೆಪ್ಟೆಂಬರ್ 3ರಂದು ನೀಡಿದ್ದ ಹಿಂಬರಹವನ್ನು ಕೋರ್ಟ್‌ ರದ್ದುಪಡಿಸಿದೆ.

ADVERTISEMENT

ಧಾರವಾಡ ಜಿಲ್ಲೆಯ ಛಬ್ಬಿ ಹೋಬಳಿಯ ರಾಯನಾಳ ಗ್ರಾಮದ ಸರ್ವೇ ನಂಬರ್ 82/18ರಲ್ಲಿನ ಸುಮಾರು ಎರಡೂವರೆ ಗುಂಟೆ ಜಮೀನನ್ನು ವಸತಿ ಉದ್ದೇಶಕ್ಕೆ ಬಳಸಲು ಅನುಮತಿ ನೀಡುವಂತೆ ಕೋರಿ ಅರ್ಜಿದಾರ ಜುನೈದ್ ಅವರು, ಧಾರವಾಡ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದ್ದರು.

ಈ ಮನವಿಯನ್ನು ತಿರಸ್ಕರಿಸಿದ್ದ ಜಿಲ್ಲಾಧಿಕಾರಿ ಅವರು, ‘ಜಾಗದ ಪಕ್ಕದ ಜಮೀನು ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ವಿಸ್ತರಣೆಗೆ ಅಧಿಸೂಚಿತವಾಗಿದೆ’ ಎಂಬ ಹಿಂಬರಹ ನೀಡಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.