ADVERTISEMENT

ಲೀಟರ್‌ ಅಡುಗೆ ಎಣ್ಣೆ ₹126!

ಖಾದ್ಯ ತೈಲ ಬೆಲೆ ಗಗನಕ್ಕೇರಿದ್ದರೂ ಶಿವಮೊಗ್ಗದಲ್ಲಿ ಭಾರಿ ಅಗ್ಗ

ಚಂದ್ರಹಾಸ ಹಿರೇಮಳಲಿ
Published 10 ಮೇ 2022, 1:36 IST
Last Updated 10 ಮೇ 2022, 1:36 IST
   

ಶಿವಮೊಗ್ಗ: ಉಕ್ರೇನ್‌ ಮೇಲೆ ರಷ್ಯಾ ಯುದ್ಧ ಸಾರಿದ ನಂತರ ಜಾಗತಿಕ ಮಟ್ಟದಲ್ಲಿ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿದ್ದರೂ, ಸಮಾಜ ಕಲ್ಯಾಣ ಇಲಾಖೆ ಅಧೀನದ ಜಿಲ್ಲೆಯ ಹಾಸ್ಟೆಲ್‌ಗಳಿಗೆ ಮಾತ್ರ ಅತ್ಯಂತ ಕಡಿಮೆ ಬೆಲೆಗೆ ಪೂರೈಕೆಯಾಗುತ್ತಿದೆ.

ವಿವಿಧ ಕಂಪನಿಗಳ ಸೂರ್ಯಕಾಂತಿ, ತಾಳೆ, ಶೇಂಗಾ ಎಣ್ಣೆ ಕೆಲವು ತಾಲ್ಲೂಕುಗಳಲ್ಲಿ ಲೀಟರ್‌ಗೆ ₹126ಕ್ಕೆ, ಕೆಲವೆಡೆ ₹136ಕ್ಕೆ ಪೂರೈಕೆ ಆಗುತ್ತಿದೆ. ಹಾಸ್ಟೆಲ್‌ಗಳಿಗೆ ಅಗ್ಗದ ದರದಲ್ಲಿ ಪೂರೈಸಲು ಗುತ್ತಿಗೆದಾರರು ಸಲ್ಲಿಸಿದ ಟೆಂಡರ್‌ಗೆ ಜಿಲ್ಲಾಡಳಿತವೂ ಅನುಮೋದನೆ ನೀಡಿದೆ.

ಅಡುಗೆ ಎಣ್ಣೆ ಸೇರಿದಂತೆ ದಿನಸಿ ಸಾಮಗ್ರಿಗಳು ಅತ್ಯಂತ ಕಡಿಮೆ ಬೆಲೆಗೆ ಪೂರೈಸುವುದಕ್ಕೆ ಸಂಬಂಧಿಸಿದ ಟೆಂಡರ್‌ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ADVERTISEMENT

ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ ₹350 ಇರುವ ಕೆಂಪು ಮೆಣಸಿನ ಪುಡಿ ₹105ಕ್ಕೆ, ₹150 ಇರುವ ಡಾಲ್ಡಾ ₹80ಕ್ಕೆ, ₹65 ಇರುವ ಬ್ಲೀಚಿಂಗ್‌ ಪೌಡರ್‌ ₹25ಕ್ಕೆ, ₹165 ಇರುವ ಶೌಚಾಲಯ ಶುಚಿಗೊಳಿಸುವ ಹಾರ್ಪಿಕ್‌ ₹70ಕ್ಕೆ, ₹1,400 ಇರುವ ಮರಾಠಿ ಮೊಗ್ಗು ₹350ಕ್ಕೆ, ₹200 ಇರುವ ಸೋಂಪಿನ ಕಾಳು ₹50ಕ್ಕೆ, ₹60 ಇರುವ ಅಡುಗೆ ಸೋಡಾ ₹35ಕ್ಕೆ ಹಾಗೂ ₹30ಕ್ಕೆ ಇರುವ ಒಂದು ತೆಂಗಿನ ಕಾಯಿಯನ್ನು ₹14ಕ್ಕೆ ಪೂರೈಸಲಾಗುತ್ತಿದೆ.

ಮಾರುಕಟ್ಟೆಯಲ್ಲಿ ನಿತ್ಯ ಏರಿಕೆ ಆಗುತ್ತಿರುವ ತರಕಾರಿಗಳನ್ನೂ ಶೇ 50ರ ರಿಯಾಯಿತಿಯಲ್ಲಿ ಪೂರೈಸಲು ದರ ನಮೂದಿಸಲಾಗಿದೆ. ಕೆ.ಜಿ.ಗೆ ₹80 ಇರುವ ಬೆಳ್ಳುಳ್ಳಿ ₹40ಕ್ಕೆ, ₹1,800 ಇರುವ ಚಕ್ರಮೊಗ್ಗು ₹400ಕ್ಕೆ ದೊರಕುತ್ತಿದೆ. ಪ್ರಸಿದ್ಧ ಕಂಪನಿಗಳ ದಿನಸಿ ಸಾಮಗ್ರಿಗಳೂ ಗರಿಷ್ಠ ಮಾರಾಟ ದರಕ್ಕಿಂತಲೂ ಕಡಿಮೆ ಬೆಲೆಗೆ ಸಿಗುತ್ತಿವೆ. ₹445 ಇರುವ ಎಂಟಿಆರ್ ಸಾಂಬಾರು ಮಸಾಲ ಪೌಡರ್‌ ₹300ಕ್ಕೆ ನೀಡಲಾಗುತ್ತಿದೆ.

ಕೋಳಿಮಾಂಸ, ಮೊಟ್ಟೆಯನ್ನು ಮಾರುಕಟ್ಟೆ ದರಕ್ಕಿಂತ ಶೇ 30ರಷ್ಟು ಕಡಿಮೆ ಬೆಲೆಗೆ ಪೂರೈಸಲಾಗುತ್ತಿದೆ. ರಾಗಿ, ಜೋಳದಹಿಟ್ಟು ಮಾಡಿಸುವ ಮಿಲ್‌ ದರಗಳೂ ಕಡಿಮೆ ಇವೆ. ಬಲ್ಬ್‌, ಫ್ಯಾನ್‌ ಸೇರಿ ವಿವಿಧ ಎಲೆಕ್ಟ್ರಾನಿಕ್ಸ್‌ ಉಪಕರಣಗಳನ್ನೂ ಕಡಿಮೆ ಬೆಲೆಗೆ ನಮೂದಿಸಲಾಗಿದೆ.

‘ಅಗ್ಗದ ದರ ನಮೂದಿಸಿ ಟೆಂಡರ್‌ ಪಡೆಯುವುದರ ಹಿಂದೆ ದೊಡ್ಡ ಲಾಬಿಯೇ ಇದೆ. ಯಾವ ವ್ಯಾಪಾರಿ ನಷ್ಟ ಮಾಡಿಕೊಂಡು ಸಾಮಗ್ರಿ ಪೂರೈಸಲು ಸಾಧ್ಯ? ಮಾರುಕಟ್ಟೆ ದರಕ್ಕಿಂತ ಅತ್ಯಂತ ಕಡಿಮೆ ನಮೂದಿಸುವ ಟೆಂಡರ್‌ ಪರಿಗಣಿಸಬಾರದು ಎಂದು ನಿರ್ದೇಶನ ನೀಡಿದ್ದರೂ ಮತ್ತೆ ಅದೇ ಪ್ರವೃತ್ತಿ ಮುಂದುವರಿದಿದೆ’ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ರಾಮಕೃಷ್ಣ.

ಕಡಿಮೆ ಬೆಲೆಯ ವಂಚನೆ ಹೇಗೆ?

ಗುತ್ತಿಗೆದಾರರು ಕಡಿಮೆ ಬೆಲೆ ನಮೂದಿಸಿ ಟೆಂಡರ್‌ ಪಡೆದರೂ ಪೂರೈಕೆಯ ಲೆಕ್ಕದಲ್ಲಿ ವ್ಯತ್ಯಾಸ ಮಾಡುತ್ತಾರೆ. 500 ಲೀಟರ್ ಅಡುಗೆ ಎಣ್ಣೆ ಪೂರೈಸಿ, ಎರಡು ಸಾವಿರ ಲೀಟರ್‌ಗೂ ಅಧಿಕ ಲೆಕ್ಕ ತೋರಿಸಲಾಗುತ್ತದೆ. ಈ ಅಕ್ರಮದಲ್ಲಿ ಇಲಾಖೆಯ ಉನ್ನತಾಧಿಕಾರಿಗಳು, ಹಾಸ್ಟೆಲ್‌ ವಾರ್ಡನ್‌ಗಳು, ಇತರೆ ಸಿಬ್ಬಂದಿ ಭಾಗಿಯಾಗಿರುತ್ತಾರೆ. ಹಣ ಕೊಡದ ಟೆಂಡರ್‌ಗಳನ್ನು ಮಾನ್ಯ ಮಾಡುವುದೇ ಇಲ್ಲ. ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುತ್ತದೆ ಎನ್ನುತ್ತಾರೆ ಆಹಾರ ಪೂರೈಕೆ ಗುತ್ತಿಗೆದಾರ ಬಸಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.