ಹೊಸಪೇಟೆ: ಕೃತಿಚೌರ್ಯಕ್ಕೆ ಸಂಬಂಧಿಸಿದಂತೆ ‘ಕುವೆಂಪು ಪತ್ರಗಳು’ ಪುಸ್ತಕದ ಲೇಖಕ, ಹಿರಿಯ ಸಾಹಿತಿ ಪುಸ್ತಕಮನೆ ಹರಿಹರಪ್ರಿಯ ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಐವರಿಗೆ ಕಾನೂನು ರೀತ್ಯ ನೋಟಿಸ್ ಕಳುಹಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸ.ಚಿ. ರಮೇಶ, ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ, ಪ್ರಸಾರಾಂಗದ ನಿರ್ದೇಶಕ ಪ್ರೊ.ಎಚ್.ಡಿ. ಪ್ರಶಾಂತ್, ಕುವೆಂಪು ಸಮಗ್ರ ಸಾಹಿತ್ಯದ ಸಂಪಾದಕ ಕೆ.ಸಿ. ಶಿವಾರೆಡ್ಡಿ ಹಾಗೂ ಸಲಹಾ ಸಮಿತಿ ಸದಸ್ಯ ವೀರೇಶ್ ಬಡಿಗೇರ್ ಅವರಿಗೆ ವಕೀಲರ ಮೂಲಕ ನೋಟಿಸ್ ನೀಡಿದ್ದಾರೆ.
‘ಕೃತಿಚೌರ್ಯದ ವಿಷಯ ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗುತ್ತಿದ್ದಂತೆ ಸತ್ಯಶೋಧನಾ ಸಮಿತಿ ರಚಿಸಿ ಸತ್ಯಾಸತ್ಯತೆ ತಿಳಿದುಕೊಳ್ಳಲಾಗುವುದು ಎಂದು ವಿಶ್ವವಿದ್ಯಾಲಯದ ಕುಲಸಚಿವರು ತಿಳಿಸಿದ್ದಾರೆ. ಆದರೆ, ಇದುವರೆಗೆ ನನಗೆ ಆ ಕುರಿತು ಯಾವುದೇ ರೀತಿಯಲ್ಲಿ ತಿಳಿಸಿಲ್ಲ. ಸ್ವತಃ ನಾನೇ ಅವರನ್ನು ಸಂಪರ್ಕಿಸಿದರೂ ಸರಿಯಾಗಿ ಸ್ಪಂದಿಸಿಲ್ಲ. ಅವರ ವರ್ತನೆಗೆ ಬೇಸತ್ತು ಕಾನೂನು ನೋಟಿಸ್ ಕಳುಹಿಸಿದ್ದೇನೆ’ ಎಂದು ಪುಸ್ತಕಮನೆ ಹರಿಹರಪ್ರಿಯ ತಿಳಿಸಿದ್ದಾರೆ.
‘ಡಿ. 15ರಂದು ಅವರಿಗೆ ಅಂಚೆ ಮೂಲಕ ನೋಟಿಸ್ ಕಳುಹಿಸಿರುವೆ. ಹತ್ತು ದಿನಗಳ ಒಳಗೆ ಪ್ರತಿಕ್ರಿಯಿಸಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಮೊರೆ ಹೋಗಿ ಪುಸ್ತಕ ಮಾರಾಟಕ್ಕೆ ತಡೆಯಾಜ್ಞೆ ತರುವೆ’ ಎಂದು ಎಚ್ಚರಿಸಿದ್ದಾರೆ.
ಕುಲಪತಿ ಪ್ರೊ.ಸ.ಚಿ. ರಮೇಶ ಅವರನ್ನು ಸಂಪರ್ಕಿಸಿದಾಗ, ‘ಸತ್ಯಶೋಧನಾ ಸಮಿತಿ ವರದಿ ಕೊಟ್ಟ ನಂತರ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ... ಹಂಪಿ ಕನ್ನಡ ವಿ.ವಿ: ಕೃತಿಚೌರ್ಯದ ಆರೋಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.