ADVERTISEMENT

ಅವರು ಸಾಯ್ತಾರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು?: ಬಿಜೆಪಿ ಸಂಸದ ಸುರೇಶ್‌ ಅಂಗಡಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 13:56 IST
Last Updated 24 ಏಪ್ರಿಲ್ 2020, 13:56 IST
ಸುರೇಶ ಅಂಗಡಿ
ಸುರೇಶ ಅಂಗಡಿ   

ಬೆಳಗಾವಿ: ‘ಸತ್ತರೆ ಅವರು ಸಾಯ್ತಾರೆ ನಾವ್ಯಾಕೆ ತಲೆ ಕೆಡಿಸಿಕೊಳ್ಳಬೇಕು?’. – ಕ್ವಾರಂಟೈನ್‌ ಕೇಂದ್ರಗಳಲ್ಲಿ ಅಂತರ ಕಾಯ್ದುಕೊಳ್ಳುತ್ತಿಲ್ಲವೆಂಬ ಆರೋಪಕ್ಕೆ ಸಂಬಂಧಿಸಿದಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಪ್ರತಿಕ್ರಿಯಿಸಿದ್ದು ಹೀಗೆ.

‘ಸಂಬಂಧಿಸಿದ ಪ್ರದೇಶದ ಪೊಲೀಸರು ಇರುತ್ತಾರೆ. ಆ ಬಗ್ಗೆ ಗಮನಹರಿಸುತ್ತಾರೆ. ನಿರ್ಲಕ್ಷ್ಯ ವಹಿಸಿದಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ’ ಎಂದರು.

‘ರೋಗಿಗಳು ಸುಧಾರಿಸುತ್ತಿದ್ದಾರೆ.ಅಂತರ ಕಾಯ್ದುಕೊಳ್ಳದಿದ್ದಲ್ಲಿ ಹೇಗೆ ಸುಧಾರಿಸುತ್ತಿದ್ದರು. ಯಾರು ಅಂತರ ಕಾಯ್ದುಕೊಳ್ಳುತ್ತಿಲ್ಲ ಹೇಳಿ. ಅವರನ್ನು ಇಲ್ಲಿಗೇ ಕರೆಸುತ್ತೇನೆ’ ಎಂದರು.

ADVERTISEMENT

‘ಆರೋಗ್ಯ ಕಾಪಾಡಿಕೊಳ್ಳುವುದು ಅವರವರ ಜವಾಬ್ದಾರಿ. ಈಗಾಗಲೇ ಎಲ್ಲರಿಗೂ ಎಚ್ಚರಿಕೆ ಕೊಟ್ಟಿದ್ದೇವೆ; ಸಲಹೆ ನೀಡಿದ್ದೇವೆ. ಹೇಳುವುದನ್ನೆಲ್ಲಾ ಹೇಳಿದ್ದೇವೆ. ಸರ್ಕಾರ ಹೇಳಿದೆ, ಜಿಲ್ಲಾಧಿಕಾರಿ, ವೈದ್ಯರೆಲ್ಲರೂ ಹೇಳಿದ್ದಾರೆ. ಇಷ್ಟಾಗಿಯೂ ಅಂತರ ಕಾಯ್ದುಕೊಳ್ಳದಿದ್ದರೆ ಜವಾಬ್ದಾರಿ ಯಾರು ತಗೊಬೇಕು? ನೀವು, ನಾವು ತೆಗೆದುಕೊಳ್ಳುವುದಕ್ಕೆ ಆಗುತ್ತದೆಯೇ? ಅವರವರೇ ಎಚ್ಚರ ವಹಿಸಬೇಕು’ ಎಂದರು.

‘ಉಜ್ವಲಾ ಯೋಜನೆಯಲ್ಲಿ ಅಡುಗೆ ಅನಿಲ ಸಿಲಿಂಡರ್‌ಗಳನ್ನು ಉಚಿತವಾಗಿ ನೀಡಲಾಗುವುದು. ಜನರು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. 14.2 ಕೆ.ಜಿ.ಯ ಅಡುಗೆ ಅನಿಲ ಸಿಲಿಂಡರ್ ಅನ್ನು ಮನೆಮನೆಗೆ ಒದಗಿಸಲಾಗುತ್ತದೆ. ಜಿಲ್ಲೆಯಲ್ಲಿ 2.27 ಲಕ್ಷ ಫಲಾನುಭವಿಗಳಿದ್ದಾರೆ. ಇಲ್ಲಿವರೆಗೆ ಶೇ. 46ರಷ್ಟು ಮಂದಿ ಸಿಲಿಂಡರ್ ಪಡೆದಿದ್ದಾರೆ. ಉಳಿದವರೂ ಪಡೆಯಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.