ADVERTISEMENT

ಕೊರೊನಾ ಗೆದ್ದ ಕ್ಯಾನ್ಸರ್ ಪೀಡಿತರು!

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ರೋಗಿಗಳಲ್ಲಿ ಸೋಂಕು ಪತ್ತೆ

ವರುಣ ಹೆಗಡೆ
Published 5 ಮಾರ್ಚ್ 2021, 21:54 IST
Last Updated 5 ಮಾರ್ಚ್ 2021, 21:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 9 ತಿಂಗಳಲ್ಲಿ ತಪಾಸಣೆಗೆ ಒಳಪಟ್ಟ ಕ್ಯಾನ್ಸರ್ ರೋಗಿಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅವರಲ್ಲಿ ಶೇ 99.73ರಷ್ಟು ಮಂದಿ ಕೋವಿಡ್‌ ಕಾಯಿಲೆಯನ್ನು ಜಯಿಸಿದ್ದಾರೆ.

ಕ್ಯಾನ್ಸರ್ ಪೀಡಿತರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಅವರನ್ನು ಅಪಾಯದ ವಲಯದಲ್ಲಿರುವವರು ಎಂದು ಆರೋಗ್ಯ ಇಲಾಖೆ ಗುರುತಿಸಿದೆ. ಕೋವಿಡ್‌ ಪ್ರಕರಣಗಳು ಏರುಗತಿ ಪಡೆದ ಅವಧಿಯಲ್ಲಿ ನಿಯಮಿತ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಲು ಹಿಂದೇಟು ಹಾಕಿ, ಸ್ವಯಂ ಆರೈಕೆ ವಿಧಾನ ಹಾಗೂ ವಿಡಿಯೋ ಸಂವಾದವನ್ನು ಕ್ಯಾನ್ಸರ್ ರೋಗಿಗಳು ಹೆಚ್ಚಾಗಿ ಅನುಸರಿಸಿದ್ದರು. ಚಿಕಿತ್ಸೆ ಮುಂದೂಡಿದಲ್ಲಿ ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಕಿದ್ವಾಯಿ ಆಸ್ಪತ್ರೆಯು ಹಂತ ಹಂತವಾಗಿ ಎಲ್ಲ ಬಗೆಯ ಚಿಕಿತ್ಸೆಗಳನ್ನು ಪುನರಾರಂಭ ಮಾಡಿದೆ. ರೋಗಿಗಳಿಗೆ ಕೋವಿಡ್‌ ಆರ್‌ಟಿ–ಪಿಸಿಆರ್ ಪರೀಕ್ಷೆಗಳನ್ನು ನಡೆಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ.

ಕೋವಿಡ್‌ಗೂ ಮುನ್ನ ಕಿದ್ವಾಯಿ ಆಸ್ಪತ್ರೆಗೆ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಹೊರರೋಗಿಗಳು ಬರುತ್ತಿದ್ದರು.ಎಲ್ಲೆಡೆ ಕೋವಿಡ್‌ ಪ್ರಕರಣಗಳು ವರದಿಯಾದ ಕಾರಣ ಕಳೆದ ಏಪ್ರಿಲ್ ವೇಳೆಗೆ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆಯಲ್ಲಿ ಶೇ 85 ರಷ್ಟು ಇಳಿಕೆಯಾಗಿತ್ತು. ಬಳಿಕ ಸಂಸ್ಥೆಯು ಎಲ್ಲ ರೋಗಿಗಳಿಗೂ ಪರೀಕ್ಷೆ ನಡೆಸಿ, ಚಿಕಿತ್ಸೆ ಒದಗಿಸುತ್ತಿದೆ. ಕಳೆದ 10 ತಿಂಗಳಿಂದ ಪ್ರತಿ ನಿತ್ಯ ಸರಾಸರಿ 700 ಹೊರರೋಗಿಗಳು ಬರುತ್ತಿದ್ದಾರೆ. ಅಲ್ಲಿಗೆ ತೆರಳಿ, ಪರೀಕ್ಷೆಗೆ ಒಳಪಟ್ಟ ಕ್ಯಾನ್ಸರ್ ರೋಗಿಗಳಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ಅಂತ್ಯಕ್ಕೆ 1,105 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಸಂಸ್ಥೆಯ ಮಾಹಿತಿ ಪ್ರಕಾರ ಅವರಲ್ಲಿ ಮೂವರು ಮಾತ್ರ ಮೃತಪಟ್ಟಿದ್ದು, ಉಳಿದವರು ಚೇತರಿಸಿಕೊಂಡಿದ್ದಾರೆ.

ADVERTISEMENT

ಪ್ರತಿಕಾಯಗಳು ವೃದ್ಧಿ: ‘ಕೋವಿಡ್ ಕಾರಣ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಪ್ರಾರಂಭಿಕ ದಿನಗಳಲ್ಲಿ ಭಯಭೀತರಾಗಿದ್ದ ಕ್ಯಾನ್ಸರ್ ಪೀಡಿತರು ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದರು. ಈಗ ಆಸ್ಪತ್ರೆಗೆ ಬರುವವರ ಸಂಖ್ಯೆ ಏರುಗತಿ ಪಡೆದಿದೆ. ಬಹುತೇಕರಲ್ಲಿ ಪ್ರತಿಕಾಯ ವೃದ್ಧಿಯಾಗಿರುವ ಕಾರಣ ಕೋವಿಡ್‌ ಕಾಯಿಲೆಯ ತೀವ್ರತೆ ಕಡಿಮೆಯಾಗಿದೆ. ಹೀಗಾಗಿ,ಕೊರೊನಾ ಸೋಂಕಿನಿಂದ ಕ್ಯಾನ್ಸರ್ ರೋಗಿಗಳು ಕೂಡ ಬೇಗ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಸಂಸ್ಥೆಯ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

ಸೋಂಕಿತರಿಗೆ ಚಿಕಿತ್ಸೆ ಮುಂದೂಡಿಕೆ

ಸಂಸ್ಥೆಯಲ್ಲಿ ಹೊರರೋಗಿ ಹಾಗೂ ಒಳರೋಗಿಗಳಿಗೆ ಕೋವಿಡ್‌ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ. ಗಂಟಲ ದ್ರವದ ಮಾದರಿಗಳ ಪರೀಕ್ಷೆಗೆ ಅತ್ಯಾಧುನಿಕ ಮಾಲಿಕ್ಯೂಲರ್ ಪ್ರಯೋಗಾಲಯವನ್ನು ಸಂಸ್ಥೆ ಬಳಸಿಕೊಂಡಿದೆ. ಪರೀಕ್ಷೆಗೆ ಒಳಗಾದವರಿಗೆ ವರದಿ ಬಂದ ಬಳಿಕ ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗುತ್ತಿದೆ. ತುರ್ತಾಗಿ ಚಿಕಿತ್ಸೆ ಅಗತ್ಯವಿದ್ದಲ್ಲಿ ಪರೀಕ್ಷೆ ವರದಿ ಬರುವ ಮುನ್ನವೇ ಪ್ರತ್ಯೇಕ ನಿಗಾ ಕೊಠಡಿಯಲ್ಲಿ ಇರಿಸಿ, ಚಿಕಿತ್ಸೆ ಒದಗಿಸಲಾಗುತ್ತಿದೆ. ತುರ್ತಾಗಿ ಚಿಕಿತ್ಸೆ ಇಲ್ಲದವರು ಸೋಂಕಿತರಾದಲ್ಲಿ ಕೋವಿಡ್‌ ವಾಸಿಯಾದ ಬಳಿಕ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.