ADVERTISEMENT

ಕೋವಿಡ್‌ಗೆ ಮೊದಲ ಬಲಿ | ರೋಗಿಯ ಜೊತೆಗಿದ್ದ 43 ಜನರ ಮೇಲೆ ನಿಗಾ, ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2020, 18:12 IST
Last Updated 12 ಮಾರ್ಚ್ 2020, 18:12 IST
ಶರತ್ ಬಿ.
ಶರತ್ ಬಿ.   

ಕಲಬುರ್ಗಿ: ‘ಸೌದಿ ಅರೇಬಿಯಾದಿಂದ ವಾಪಸಾಗಿದ್ದ ನಗರದ 76 ವರ್ಷದ ವೃದ್ಧರೊಬ್ಬರು ಮಾ.10ರಂದು ಕೋವಿಡ್‌ 19 ವೈರಸ್‌ನಿಂದಲೇ ಮೃತಪಟ್ಟಿರುವುದರಿಂದ ಅವರ ಒಡನಾಟದಲ್ಲಿದ್ದ 43 ಜನರಿಗೆ ಪ್ರತ್ಯೇಕ ಸ್ಥಳದಲ್ಲಿರಿಸಿ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಸ್ಪಷ್ಟಪಡಿಸಿದರು.

‘ಈ 43 ಜನರ ಆರೋಗ್ಯದಲ್ಲಿ ಈ ವರೆಗೂ ವ್ಯತ್ಯಾಸವಾಗಿಲ್ಲ. ಇವರಲ್ಲಿ 9 ಜನ ಅವರ ಕುಟುಂಬ ಸದಸ್ಯರು, ನಾಲ್ಕು ಜನ ಅವರಿಗೆ ಚಿಕಿತ್ಸೆ ನೀಡಿದವರು ಹಾಗೂ ಉಳಿದವರು ಅಕ್ಕಪಕ್ಕದ ಮನೆಯವರು ಇದ್ದಾರೆ’ ಎಂದರು.

‘ಸದ್ಯಕ್ಕೆ ಕುಟುಂಬ ಸದಸ್ಯರನ್ನು ನಗರದ ಅವರ ಮನೆ ಇರುವ ಎಂ.ಎಸ್.ಕೆ. ಮಿಲ್‌ ಬಡಾವಣೆಯಲ್ಲಿಯೇ ತಪಾಸಣೆ ನಡೆಸಲಾಗಿದೆ. ಕೊರೊನಾ ಸೋಂಕು ಕಂಡು ಬಂದರೆ ತಕ್ಷಣ ಅವರನ್ನು ಸ್ಥಳಾಂತರಿಸಲು ನಗರದ ಸೇಡಂ ರಸ್ತೆಯಲ್ಲಿರುವ ಇಎಸ್‌ಐ ಆಸ್ಪತ್ರೆಯಲ್ಲಿ 400 ಹಾಸಿಗೆಗಳ ವಿಭಾಗವನ್ನು ತೆರೆಯಲಾಗಿದೆ’ ಎಂದು ಹೇಳಿದರು.

‘ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್‌)ಯಲ್ಲಿಯೇ ಪ್ರಯೋಗಾಲಯ ಆರಂಭಿಸಲು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಅಗತ್ಯ ಉಪಕರಣಗಳಿದ್ದು, ಕೇಂದ್ರ ಸರ್ಕಾರ ವೈದ್ಯಕೀಯ ಕಿಟ್‌ವೊಂದನ್ನು ನೀಡಬೇಕಾಗುತ್ತದೆ. ಈ ಬಗ್ಗೆ ರಾಜ್ಯ ಆರೋಗ್ಯ ಇಲಾಖೆ ಕೇಂದ್ರ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದು, ಜಿಮ್ಸ್‌ನಲ್ಲಿ ಪ್ರಯೋಗಾಲಯ ಆರಂಭಿಸಲು ಒಂದೆರಡು ದಿನಗಳಲ್ಲಿ ಒಪ್ಪಿಗೆ ದೊರೆಯಲಿದೆ’ ಎಂದು ಹೇಳಿದರು.

ಬಳ್ಳಾರಿಯ ವಿಮ್ಸ್‌, ಉಡುಪಿ ಜಿಲ್ಲೆಯ ಮಣಿಪಾಲ, ಮೈಸೂರಿನಲ್ಲಿಯೂ ಪ್ರಯೋಗಾಲಯ ಆರಂಭಕ್ಕೆ ಹಸಿರು ನಿಶಾನೆ ದೊರೆಯಲಿದೆ ಎಂದು ಶರತ್ ಹೇಳಿದರು.

ನಂತರ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಾಜಾ ಪಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಂ.ಎ.ಜಬ್ಬಾರ್‌, ಇಎಸ್‌ಐ ಆಸ್ಪತ್ರೆ ಡೀನ್‌ ಡಾ.ಎಂ.ನಾಗರಾಜ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.