ADVERTISEMENT

ಕೋವಿಡ್‌–19ಗೆ ಮೊದಲ ಬಲಿ: ಕಲಬುರ್ಗಿಯಲ್ಲಿ ಆತಂಕದ ಕಾರ್ಮೋಡ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 1:20 IST
Last Updated 13 ಮಾರ್ಚ್ 2020, 1:20 IST
ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪರಾಮರ್ಶೆ ನಡೆಸಲು ತುರ್ತು ಸಭೆ ಕರೆದಿರುವ ಜಿಲ್ಲಾಧಿಕಾರಿ ಶರತ್ ಬಿ. –ಪ್ರಜಾವಾಣಿ ಚಿತ್ರ
ಮುನ್ನೆಚ್ಚರಿಕಾ ಕ್ರಮಗಳ ಕುರಿತು ಪರಾಮರ್ಶೆ ನಡೆಸಲು ತುರ್ತು ಸಭೆ ಕರೆದಿರುವ ಜಿಲ್ಲಾಧಿಕಾರಿ ಶರತ್ ಬಿ. –ಪ್ರಜಾವಾಣಿ ಚಿತ್ರ    
""

ಕಲಬುರ್ಗಿ: ಸೌದಿ ಅರೇಬಿಯಾದಿಂದ ವಾಪಸಾಗಿದ್ದ ವೃದ್ಧರೊಬ್ಬರು ಮೃತಪಟ್ಟಿದ್ದು ‘ಕೋವಿಡ್‌–19’ ಸೋಂಕಿನಿಂದಲೇ ಎಂದು ದೃಢಪಟ್ಟ ಸುದ್ದಿ ಹೊರಬೀಳುತ್ತಿದ್ದಂತೆಯೇ, ನಗರದಲ್ಲಿ ಆತಂಕದ ಕಾರ್ಮೋಡ ಕವಿದಿದೆ. ಈವರೆಗೂ ಇದು ಸಹಜ ಸಾವು ಎಂದೇ ಭಾವಿಸಿ, ತುಸು ನಿರಾಳವಾಗಿದ್ದ ಜನರಿಗೆ ಇದ್ದಕ್ಕಿಂತೆ ಬರಸಿಡಿಲು ಬಡಿದಂತಾಗಿದೆ.

ಮಾಧ್ಯಮಗಳಲ್ಲಿ ಸುದ್ದಿ ಬಿತ್ತರಗೊಂಡ ಕ್ಷಣಾರ್ಧದಲ್ಲೇ ಎಲ್ಲ ಮೊಬೈಲ್‌ಗಳಲ್ಲಿ ಇದು ಕಾಳ್ಗಿಚ್ಚಿನಂತೆ ಹರಿದಾಡಿತು. ಬಸ್‌ ನಿಲ್ದಾಣ, ರೈಲು ನಿಲ್ದಾಣ, ಆಸ್ಪತ್ರೆ, ಕ್ಲಿನಿಕ್‌, ಥಿಯೇಟರ್‌ಗಳಲ್ಲಿ ಸೇರಿದ ಜನರಲ್ಲಿ ಏಕಾಏಕಿ ಆತಂಕ ಮನೆ ಮಾಡಿತು. ಬಹುಪಾಲು ಮಂದಿ ಜನಸಂದಣಿಯಿಂದ ಕಾಲ್ಕಿತ್ತರು.

‘ಇದು ಕೊರೊನಾ (ಕೋವಿಡ್‌–19 ಸೋಂಕು) ಪರಿಣಾಮದಿಂದ ಆದ ಸಾವಲ್ಲ. ಆ ವ್ಯಕ್ತಿಗೆ ಇನ್ನಿತರ ಕಾಯಿಲೆಗಳೂ ಇದ್ದವು. ಭಯಪಡುವ ಅಗತ್ಯವಿಲ್ಲ’ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರು ಮಂಗಳವಾರವಷ್ಟೇ ಹೇಳಿದ್ದರು. ಗುರುವಾರ ರಾತ್ರಿಯ ಹೊತ್ತಿಗೆ ಸ್ವತಃ ಸಚಿವರೇ ಇದು ಕೋವಿಡ್‌–19 ಸೋಂಕಿನಿಂದಲೇ ಸಂಭವಿಸಿದ ಸಾವು ಎಂದು ಸ್ಪಷ್ಟಪಡಿಸಿದರು.

ADVERTISEMENT

ಇದರಿಂದ ದಿಗಿಲುಗೊಂಡ ಜನರಿಂದ ಎಲ್ಲೆಂದರಲ್ಲಿ ಇದರದ್ದೇ ಆತಂಕದ ಮಾತು. ನಾಲ್ಕು ಜನ ಒಂದೆಡೆ ಸೇರಿ ಮಾತನಾಡುವುದಕ್ಕೂ ಜನ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಯಿತು. ಮಂದಿರ, ಮಸೀದಿಗಳ ಸುತ್ತ ಸೇರಿದ ಜನ ಕೂಡ ತಮ್ಮತಮ್ಮಲ್ಲಿ ಆತಂಕವನ್ನು ಹಂಚಿಕೊಂಡರು.

ಮೃತಪಟ್ಟ ವ್ಯಕ್ತಿಯನ್ನು ಈ ಮುಂಚೆ ದಾಖಲಿಸಿದ್ದ ನಗರದ ಖಾಸಗಿ ಆಸ್ಪತ್ರೆ ಸುತ್ತ ಕೂಡ ಯಾರೂ ಸುಳಿಯದಂತಹ ವಾತಾವರಣ ನಿರ್ಮಾಣವಾಯಿತು,

ವಾರದ ಹಿಂದಿನಿಂದಲೂ ಶಾಲೆ–ಕಾಲೇಜುಗಳಲ್ಲಿ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿತ್ತು. ಕೆಲವು ಖಾಸಗಿ ಶಾಲೆಗಳಲ್ಲಿ ಮಕ್ಕಳು ಮಾಸ್ಕ್‌ ಹಾಕಿಕೊಂಡೇ ಬರಬೇಕು ಎಂದು ಸಂಸ್ಥೆಗಳು ಕಟ್ಟುನಿಟ್ಟು ಮಾಡಿದ್ದವು. ಇದರಿಂದಾಗಿ ಸೋಮವಾರದ ವೇಳೆ ನಗರದಲ್ಲಿ ಮಾಸ್ಕ್‌ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗಳ ದರ ದುಪ್ಪಟ್ಟಾಗಿತ್ತು. ಆದರೂ ಜನರಿಗೆ ಮಾಸ್ಕ್‌ ಸಿಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಬೆಚ್ಚಿಬಿದ್ದ ಹಾಸ್ಟೆಲ್‌ ವಿದ್ಯಾರ್ಥಿಗಳು: ನಗರದಲ್ಲಿರುವ ವಿವಿಧ ಸರ್ಕಾರಿ ಹಾಸ್ಟೆಲ್‌ಗಳಲ್ಲಿನ ವಿದ್ಯಾರ್ಥಿಗಳು ಕೂಡ ಟಿ.ವಿ.ಯಲ್ಲಿ ಸುದ್ದಿ ನೋಡಿ ಬೆಚ್ಚಿ ಬಿದ್ದರು. ಬಹುಪಾಲು ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆಗಳು ಆರಂಭವಾಗಿದ್ದರಿಂದ ಎಲ್ಲರಲ್ಲೂ ಚಿಂತೆಯ ಕತ್ತಿ ತೂಗಾಡುವಂತಾಗಿದೆ.

ಜಾತ್ರೆಗೂ ಕವಿದ ಕಾರ್ಮೋಡ
ಇಲ್ಲಿನ ಐತಿಹಾಸಿಕ ಶರಣಬಸವೇಶ್ವರ ಮಹಾರಥೋತ್ಸವಕ್ಕೆ ಗುರುವಾರವಷ್ಟೇ ಚಾಲನೆ ದೊರೆತಿದೆ. ಜಾತ್ರೆಯ ಮೊದಲ ದಿನವಾದ ಗುರುವಾರ ಸಂಜೆ ನಡೆದ ಉಚ್ಚಾಯ ಮಹೋತ್ಸವಕ್ಕೆ ಅಪಾರ ಜನ ಸೇರಿದ್ದರು. ಅದರಲ್ಲಿ ಬೆರಳೆಣಿಕೆಯಷ್ಟು ಮಂದಿ ಮಾತ್ರ ಮುಖಗವಸು ಧರಿಸಿಕೊಂಡು ಬಂದಿದ್ದರೆ, ಪೊಲೀಸರು ಹಾಗೂ ರಥ ಎಳೆಯುವವರು ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಕೆಲಸ ನಿರ್ವಹಿಸಿದರು.‌

ಸ್ವತಃ ಉಚ್ಚಾಯಿಗೆ ಚಾಲನೆ ನೀಡಿದ ಡಾ.ಶರಣಬಸವಪ್ಪ ಅಪ್ಪ ಹಾಗೂ ಅವರೊಂದಿಗೆ ಇದ್ದ ಗಣ್ಯರೆಲ್ಲರೂ ಮಾಸ್ಕ್‌ ಧರಿಸಿಕೊಂಡೇ ಜನರ ಮಧ್ಯೆ ಬಂದರು.

ಶುಕ್ರವಾರ (ಮಾರ್ಚ್‌ 13) ಶರಣಬಸವೇಶ್ವರರ ಮಹಾರಥೋತ್ಸವ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ಆರೂ ಜಿಲ್ಲೆಗಳು ಮಾತ್ರವಲ್ಲದೇ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮುಂತಾದ ರಾಜ್ಯಗಳಿಂದ ಕೂಡ ಲಕ್ಷಾಂತರ ಜನ ಸೇರುತ್ತಾರೆ. ಕೋವಿಡ್‌–19 ಸೋಂಕಿನಿಂದ ಸಾವು ಸಂಭವಿಸಿದ್ದರಿಂದ ಈಗ ಜಾತ್ರೆಗೆ ಬಂದವರಲ್ಲಿ ಭಯ ಮನೆ ಮಾಡಿದೆ.

ಕಲಬುರ್ಗಿ: ಶುಕ್ರವಾರ ಸಂಜೆ ನಡೆಯಬೇಕಿದ್ದ ಶರಣಬಸವೇಶ್ವರ ಜಾತ್ರೆ ರದ್ದು. ಜನರು ಹೆಚ್ಚು ಸೇರುವ ಮಾಲ್‌, ಸಿನಿಮಾ ಮಂದಿರಗಳೂ ಬಂದ್‌ ಮಾಡುವ ಕುರಿತುಜಿಲ್ಲಾಧಿಕಾರಿ ನೇತೃತ್ವದ ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಕಲಬುರ್ಗಿಯ ಇಎಸ್‌ಐ ಆಸ್ಪತ್ರೆಯಲ್ಲಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧಗೊಳಿಸಲಾದ 400 ಹಾಸಿಗೆಯ ವಾರ್ಡ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.