ADVERTISEMENT

ಕೊರೊನಾ ವೈರಸ್‌ಗೆ ಲಸಿಕೆ ವದಂತಿ: ಮುಗಿಬಿದ್ದ ಜನ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 18:02 IST
Last Updated 14 ಮಾರ್ಚ್ 2020, 18:02 IST
ಜನರಿಗೆ ಲಸಿಕೆ ಹಾಕುತ್ತಿರುವ ವೈದ್ಯ
ಜನರಿಗೆ ಲಸಿಕೆ ಹಾಕುತ್ತಿರುವ ವೈದ್ಯ    

ದಾವಣಗೆರೆ: ಇಲ್ಲಿನ ಪಿಜೆ ಬಡಾವಣೆಯಲ್ಲಿ ಆಯುರ್ವೇದ ವೈದ್ಯರೊಬ್ಬರು ಕೊರೊನಾ ವೈರಸ್‌ ತಡೆಗೆ ಔಷಧ ನೀಡುವುದಾಗಿ ನಂಬಿಸಿ ನೂರಾರು ಜನರಿಗೆ ನಕಲಿ ಲಸಿಕೆ ಹಾಕಿ ವಂಚಿಸಿದ್ದಾರೆ.

ರಾಘವೇಂದ್ರ ಸ್ವಾಮಿ ಮಠದ ಪಕ್ಕದಲ್ಲಿ ಇರುವ ಈಶ್ವರಮ್ಮ ಶಾಲೆಯ ಆವರಣದಲ್ಲಿ ಲಸಿಕೆ ಹಾಕಿದ್ದು, ಜನರು ಮುಗಿಬಿದ್ದು ಲಸಿಕೆ ತೆಗೆದುಕೊಂಡಿದ್ದಾರೆ. ಈ ದೃಶ್ಯವನ್ನು ಸಾಮಾಜಿಕ ಕಾರ್ಯಕರ್ತರು ಮೊಬೈಲ್‌ನಲ್ಲಿ ಸೆರೆ ಹಿಡಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಸುದ್ದಿ ತಿಳಿಯುತ್ತಿದ್ದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಔಷಧವನ್ನು ವಶಪಡಿಸಿಕೊಂಡಿದ್ದಾರೆ.

ADVERTISEMENT

‘ವೈದ್ಯೆಯೊಬ್ಬರು ಹಾಗೂ ತಮ್ಮ ಸಹಾಯಕರೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅನುಮತಿ ಪಡೆಯದೇ ಲಸಿಕೆ ಹಾಕಿದ್ದಾರೆ. ಮಹಿಳೆಯರು ಹಾಗೂ ಮಕ್ಕಳಿಗೆ ಹೊಮಿಯೋಪತಿ ಔಷಧ ಎಂದು ಹೇಳಿಕೊಂಡು ‘ಆರ್ಸೆನಿಕ್ ಆಲ್ಬಾ 30’ ಎಂಬ ದ್ರಾವಣವನ್ನು ಕುಡಿಸಿದ್ದಾರೆ. ಹೋಮಿಯೊಪಥಿ ವೈದ್ಯರು ಬಂದು ಪರಿಶೀಲಿಸಿದ ಬಳಿಕ ಕ್ರಮ ಕೈಗೊಳ್ಳಲಾಗುವುದು’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ವೆಂಕಟೇಶ್ ಎಲ್.ಡಿ. ತಿಳಿಸಿದರು.

‘ಕೊರೊನ ವೈರಸ್‌ಗೆ ಯಾವುದೇ ಲಸಿಕೆ ಇಲ್ಲ. ವೈದ್ಯರು ಲಸಿಕೆ ನೀಡಿರುವುದು ತಪ್ಪು. ಭಾನುವಾರ ಡಿಡಿಪಿಐ ಜೊತೆ ಶಾಲೆಗೆ ಭೇಟಿ ನೀಡಿ ಪರಿಶೀಲಿಸುತ್ತೇವೆ’ ಎಂದು ಡಿಎಚ್ಒ ಡಾ.ರಾಘವೇಂದ್ರಸ್ವಾಮಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.