ADVERTISEMENT

ಟಾಟಾ–ಬಿರ್ಲಾಗಳು ಕೃಷಿ ಭೂಮಿ ಖರೀದಿಸಲು ಸಾಧ್ಯವಿಲ್ಲ: ಅಶೋಕ

ಕೃಷಿ ಆಸ್ತಕ ಯುವಕರನ್ನು ಬೇಸಾಯದತ್ತ ಸೆಳೆಯಲು ಕಾನೂನು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 10:43 IST
Last Updated 11 ಡಿಸೆಂಬರ್ 2020, 10:43 IST
   

ಬೆಂಗಳೂರು: ರಾಜ್ಯದಲ್ಲಿ ಜಾರಿ ಆಗಲಿರುವ ಭೂಸುಧಾರಣೆ ಕಾಯ್ದೆಯಿಂದ ಟಾಟಾ, ಬಿರ್ಲಾ, ಅಂಬಾನಿ, ಅದಾನಿ ಸೇರಿದಂತೆ ಯಾವುದೇ ದೊಡ್ಡ ಉದ್ಯಮಪತಿಗಳು ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ. ಇದಕ್ಕೆ ಕಟ್ಟುನಿಟ್ಟಿನ ನಿಯಮಾವಳಿ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ನೀರಾವರಿ ಭೂಮಿ ಮತ್ತು ದಲಿತರ ಭೂಮಿಯನ್ನು ಯಾರೊಬ್ಬರೂ ಖರೀದಿ ಮಾಡಲು ಸಾಧ್ಯವಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಹೊಸ ಕಾಯ್ದೆ ಬಗ್ಗೆ ಕಾಂಗ್ರೆಸ್‌ನ ನಿರುದ್ಯೋಗಿ ನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ರೈತರಲ್ಲಿ ಅನಗತ್ಯ ಭಯ ಮತ್ತು ಸಂಶಯ ಹುಟ್ಟು ಹಾಕಿದ್ದಾರೆ ಎಂದು ಹೇಳಿದರು.

ADVERTISEMENT

ಈ ಕಾಯ್ದೆಯ ಪ್ರಕಾರ ‘ಎ’ ವರ್ಗದ ತರಿ ಭೂಮಿ ಅಂದರೆ ಎರಡು ಬೆಳೆ ಭತ್ತ ತೆಗೆಯಬಹುದಾದ ಜಮೀನನ್ನು 13 ಎಕರೆ ಮಾತ್ರ ಖರೀದಿ ಮಾಡಬಹುದು. ಬಿ ವರ್ಗದ ಜಮೀನು ಅಂದರೆ ಒಂದು ಬೆಳೆ ಬೆಳೆಯಬಹುದಾದ ಜಮೀನು 15 ಎಕರೆ ಮಾತ್ರ ಖರೀದಿಸಬಹುದು. ಖುಷ್ಕಿ ಜಮೀನು 54 ಎಕರೆ ಒಂದು ಕುಟುಂಬ ಖರೀದಿಸಲು ಮಿತಿ ವಿಧಿಸಲಾಗಿದೆ. ಒಂದು ಕುಟುಂಬ ಎಂದರೆ, 5 ಜನ ಸದಸ್ಯರಿರುವ ಕುಟುಂಬ. ಈ ಪ್ರಮಾಣ ಮೀರಿ ಹೆಚ್ಚು ಭೂಮಿ ಖರೀದಿಸಲು ಸಾಧ್ಯವಾಗದು ಎಂದು ಅವರು ತಿಳಿಸಿದರು.

‘ಎ’ ವರ್ಗದ ಭೂಮಿಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅವಕಾಶವಿಲ್ಲ. ವಾಣಿಜ್ಯಕ್ಕೂ ಉಪಯೋಗಿಸುವಂತಿಲ್ಲ. ದಲಿತರ ಭೂಮಿ ಖರೀದಿಸುವಂತಿಲ್ಲ ಎನ್ನುವ ನಿರ್ಬಂಧ ವಿಧಿಸಿದ್ದು ನಾವೇ. ದಲಿತರ ಭೂಮಿಯನ್ನು ದಲಿತ ವರ್ಗಕ್ಕೆ ಸೇರಿದ ಇತರರು ಖರೀದಿಸಬಹುದು. ದಲಿರ ಭೂಮಿಯ ಮಾಲಿಕತ್ವ ಬದಲಾವಣೆ ಮಾಡುವುದು ಸುಲಭವಲ್ಲ ಎಂದು ಅಶೋಕ ಹೇಳಿದರು.

ಉಳುವವನೇ ಭೂಮಿಯ ಒಡೆಯ ಎಂಬ ಕಾನೂನು ಪ್ರತ್ಯೇಕವಿದೆ. ಅದಕ್ಕೆ ಯಾವುದೇ ತಿದ್ದುಪಡಿ ತಂದಿಲ್ಲ. ಅದನ್ನೂ ಬದಲಾಯಿಸಲಾಗಿದೆ ಎಂದು ಸಿದ್ದರಾಮಯ್ಯ ಬೊಗಳೆ ಬಿಡುತ್ತಿದ್ದಾರೆ. ದೇವರಾಜ ಅರಸು ಕಾಲದ ಆ ಕಾನೂನನ್ನು ಮುಟ್ಟಿಲ್ಲ ಎಂದರು.

ಇಲ್ಲಿಯವರೆಗೆ ಕಾನೂನುಗಳ ಮೂಲಕ ರೈತರನ್ನು ಕಟ್ಟಿ ಹಾಕಲಾಗಿತ್ತು. ಅವರನ್ನು ಬಂಧ ಮುಕ್ತಗೊಳಿಸಲಾಗಿದೆ. ಕೃಷಿಯಲ್ಲಿ ಆಸಕ್ತಿ ಇರುವ ಯಾವುದೇ ಯುವಕರು ಕೃಷಿಗಾಗಿ ಭೂಮಿಯನ್ನು ಖರೀದಿಸಬಹುದು. 79 ಎ ಮತ್ತು ಬಿ ಯಾವುದೇ ರಾಜ್ಯದಲ್ಲಿ ಇರಲಿಲ್ಲ. ಕೇರಳ, ತಮಿಳುನಾಡು, ಆಂಧ್ರ ಸೇರಿದಂತೆ ಎಲ್ಲ ರಾಜ್ಯಗಳಲ್ಲೂ ಕೃಷಿ ಜಮೀನು ಮುಕ್ತವಾಗಿ ಖರೀದಿಸುವ ಅವಕಾಶ ಇದೆ. ಕಾಂಗ್ರೆಸ್‌ಗೆ ಅಷ್ಟು ಕಾಳಜಿ ಇದ್ದರೆ, ಅವರ ಆಡಳಿತ ಇರುವ ರಾಜ್ಯಗಳಲ್ಲಿ 79 ಎ ಮತ್ತು ಬಿ ಜಾರಿ ತರಲಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿ 11.79 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ಬೀಳು ಬಿದ್ದಿದೆ. ಕೆಲವು ಕಡೆ ನೀಲಗಿರಿ ಬೆಳೆಯಲಾಗುತ್ತಿದೆ. ಈ ಪಾಳು ಬಿದ್ದ ಕೃಷಿ ಭೂಮಿಯನ್ನು ಮತ್ತೆ ಉಳುಮೆಗೆ ಬಳಸಬೇಕು ಎಂಬುದೇ ನಮ್ಮ ಉದ್ದೇಶ. ಹೊಸ ಬಗೆಯ ಕೃಷಿಯಿಂದ ಕೃಷಿ ಉತ್ಪನ್ನಗಳು ವಿದೇಶಗಳಿಗೆ ರಫ್ತಾಗಬೇಕು. ಹೊಸ ಕಾನೂನಿಗೆ ಬಗ್ಗೆ ರೈತರು ಹರ್ಷಗೊಂಡಿದ್ದಾರೆ ಎಂದು ಅಶೋಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.